ಗ್ಯಾರಂಟಿ ಅನುಷ್ಠಾನದಲ್ಲಿ ಮೈಸೂರಿಗೆ ಎರಡನೇ ಸ್ಥಾನ  

Chethan
4 Min Read


ಮೈಸೂರು: ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ನಮ್ಮ ಜಿಲ್ಲಾ ಸಮಿತಿಯ ಪ್ರಯತ್ನದ ಫಲವಾಗಿ ೬ರಿಂದ ೨ನೇ ಸ್ಥಾನ ತಲುಪಿರುವುದು ಸಂತಸದ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ಹಾಡಿಗಳಲ್ಲಿ ಅಭಿಯಾನದ ಮೂಲಕ ಗ್ಯಾರಂಟಿ ತಲುಪುವಂತೆ ಮಾಡೋಣ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್‌ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ದೇವರಾಜ ಅರಸು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಾಸಿಕ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಿದ್ದೇವೆ. ಹಿಂದೆ ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನದಲ್ಲಿ ನಮ್ಮ ಜಿಲ್ಲೆ ಆರನೇ ಸ್ಥಾನದಲ್ಲಿತ್ತು. ನಿರಂತರ ಸಮಿತಿ ಸಭೆ ಹಾಗೂ ಪ್ರವಾಸದ ಬಳಿಕ ಈಗ ಎರಡನೇ ಸ್ಥಾನ ತಲುಪಿದ್ದೇವೆ. ಇದೇ ವೇಳೆ ಮೊನ್ನೆ ಗೃಹಲಕ್ಷ್ಮಿ ಯೋಜನೆ ವಿಶ್ವದಾಖಲೆಗೆ ಸೇರಿರುವುದು ಅತಿ ಹೆಚ್ಚಿನ ಸಂತಸದ ಸಂಗತಿಯಾಗಿದೆ. ಹಿಂದೆ ಗ್ಯಾರಂಟಿ ಟೀಕಿಸುತ್ತಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲೇ ಹಿಮಾಚಲ ಪ್ರದೇಶದ ಮೊದಲ ಬಾರಿಗೆ ಉಚಿತ ಸಾರಿಗೆ ವ್ಯವಸ್ಥೆ ಜಾರಿಗೊಳಿಸಿದರೂ ಅದು ಹೆಚ್ಚು ಜನರಿಗೆ ತಲುಪಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ತಲುಪಿ ಸಾಧನೆ ಮಾಡಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಕಾರಣರಾಗಿದ್ದಾರೆಂದರು.
ಗ್ಯಾರಂಟಿ ಅನುಷ್ಠಾನದ ಬಳಿಕ ನಮ್ಮ ರಾಜ್ಯವೇ ಜಿಡಿಪಿಯಲ್ಲಿ ಮುಂದಿದೆ. ನಮ್ಮದು ಕೇವಲ ಆಶ್ವಾಸನೆಯಲ್ಲ, ಅನುಷ್ಠಾನಕ್ಕೂ ತಂದಿದ್ದೇವೆ. ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ಕೆಲವೊಂದು ದಾಖಲೆಗಳಿಲ್ಲದೆ ಗ್ಯಾರಂಟಿ ಅನುಷ್ಠಾನ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ಯಾರಂಟಿ ಅಭಿಯಾನ ಹಾಡಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.


ಗ್ಯಾರಂಟಿ ನಡಿಗೆ ಹಾಡಿ ಕಡೆಗೆ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಮಾತನಾಡಿ, ಜಿಲ್ಲೆಯಲ್ಲಿ 1010 ಆದಿವಾಸಿಗಳು ಇನ್ನೂ ಸಹ ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಮುಂದೆ ಬಂದಿಲ್ಲ. ಹಾಗಾಗಿ ಅವರಿಗೆ ಸೌಲಭ್ಯ ತಲುಪಿಸಲು ‘ಗ್ಯಾರಂಟಿ ನಡಿಗೆ ಹಾಡಿ ಕಡೆಗೆ’ ಅಭಿಯಾನ ಆಯೋಜಿಸಲಾಗುವುದು ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಕೆಲವು ಆದಿವಾಸಿಗಳು ಮುಂದೆ ಬಂದಿಲ್ಲ. ಅಂತಹವರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಸೇವೆ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ‘ಗ್ಯಾರಂಟಿ ನಡಿಗೆ ಹಾಡಿ ಕಡೆಗೆ’ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕೆಂದರು.
ಸಮಿತಿ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಕಳೆದ ಸಭೆಯಲ್ಲಿ ಅಧಿಕಾರಿಗಳು ನೀಡಿದ ವರದಿಯ ಪ್ರಕಾರ 1026 ಆದಿವಾಸಿಗಳು  ನೋಂದಾವಣೆ ಆಗಿರಲಿಲ್ಲ. ಈ ಪೈಕಿ ಕೇವಲ 16 ಜನರನ್ನು ಮಾತ್ರ ನೋಂದಣಿ ಮಾಡಲಾಗಿದ್ದು, ಇನ್ನೂ ಸಹ 1010 ಆದಿವಾಸಿಗಳ ನೋಂದಣಿ ಬಾಕಿ ಇದೆ. ಆದಿವಾಸಿಗಳಿಗೆ ಸೌಲಭ್ಯ ತಲುಪಿಸುವ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷೃ ತೋರುವುದು ಸರಿಯಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜತೆಗೆ ಐಟಿಡಿಪಿ ಅಧಿಕಾರಿಗಳು ಸಹ ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಆದಿವಾಸಿಗಳಿಗೆ ಸೌಲಭ್ಯ ತಲುಪಿಸುವ ವಿಚಾರದಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಐಟಿಡಿಪಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು. ಸಮಿತಿಗಿಲ್ಲ ಶಿಷ್ಠಾಚಾರದ ಆಹ್ವಾನ: ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ಬೇರೆ ಜಿಲ್ಲೆಗಳಲ್ಲಿ ಶಿಷ್ಠಾಚಾರದಂತೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೂ ಆಹ್ವಾನಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಯಾವುದೇ ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸದೇ ನಿರ್ಲಕ್ಷ್ಯವಹಿಸಲಾಗುತ್ತಿದೆ ಎಂದು ಸಮಿತಿಯ ಎಲ್ಲರೂ ದೂರಿದರು. ಈ ಬಗ್ಗೆ ಸಮಿತಿ ರಾಜ್ಯಾಧ್ಯಕ್ಷರ ಗಮನಕ್ಕೆ ತರಲು ಸಭೆಯಲ್ಲಿ ತೀರ್ಮಾನಿಸಿದರು. ಸಮಿತಿ ಉಪಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೆಲವು ಬಡ ಜನರು ಮನೆ ನಿರ್ಮಾಣಕ್ಕೆ ಸಾಲ ಪಡೆಯುವ ಉದ್ದೇಶದಿಂದ ಐಟಿ ರಿಟರ್ನ್ ಮಾಡಿಸಿರುತ್ತಾರೆ. ಅವರು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದು ಕೇಂದ್ರ ಸರ್ಕಾರದ ಹಂತದಲ್ಲಿ ಸರಿ ಪಡಿಸಬೇಕಾಗಿದೆ. ಈ ರೀತಿ ಸಮಸ್ಯೆ ಎದುರಿಸುತ್ತಿರುವವರಿಗೆ ಅಧಿಕಾರಿಗಳು ಯಾವ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿದೆ ಎಂಬ ಕುರಿತು ಹಿಂಬರಹ ನೀಡಬೇಕು ಎಂದು ನಿರ್ದೇಶನ ನೀಡಿದರು. ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಹುಣಸೂರು ಬಸವಣ್ಣ, ಚಂದ್ರಶೇಖರ್, ಸದಸ್ಯರಾದ ಯೋಗೀಶ್, ಉದಯಶಂಕರ್, ಮಹದೇವು, ಉತ್ತನಹಳ್ಳಿ ಶಿವಣ್ಣ, ಕೆ.ಮಾರುತಿ, ಬಿ.ಎನ್‌.ಕರಿಗೌಡ ಹಾಗೂ ಇತರರು ಇದ್ದರು.

ಬಾಕ್ಸ್‌
ಯುವ ನಿಧಿ ಉದ್ಯೋಗ ಮೇಳ
ಮೈಸೂರಿನಲ್ಲಿ ಸೆ.6 ರಂದು ಬೃಹತ್ ಯುವ ನಿಧಿ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಹೇಳಿದರು. ಕಲ್ಬುರ್ಗಿಯಲ್ಲಿ ಆಯೋಜಿಸಿರುವ ಮೇಳದಲ್ಲಿ 30 ಸಾವಿರ ಯುವಜನರ ನೋಂದಣಿ ಆಗಿದೆ. ಮೈಸೂರಿನಲ್ಲಿ ನಡೆಯುತ್ತಿರುವುದು ವಿಭಾಗೀಯ ಮಟ್ಟದ ಮೇಳವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಯುವಜನರನ್ನು ಸೇರಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಬಾಕ್ಸ್‌
28,278 ಕೋಟಿ ರೂ. ಹಂಚಿಕೆ
ಗ್ಯಾರಂಟಿ ಯೋಜನೆ ಜಾರಿಯಾದ ನಂತರ ಇದುವರೆಗೆ ಜಿಲ್ಲೆಯ ಫಲಾನುಭವಿಗಳಿಗೆ ಯೋಜನೆಯ ಮೂಲಕ 28,278 ಕೋಟಿ ರೂ. ಹಂಚಿಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹೇಳಿದರು. ಕೆಲವು ತಾಂತ್ರಿಕ ದೋಷದಿಂದ ಕೆಲವರಿಗೆ ಹಣ ಸಕಾಲದಲ್ಲಿ ಪಾವತಿಯಾಗದೆ ಇರಬಹುದು. ಆದರೆ, ತಾಂತ್ರಿಕ ದೋಷ ಪರಿಹಾರವಾದ ನಂತರ ಎಲ್ಲರಿಗೂ ಹಂಚಿಕೆಯಾಗಲಿದೆ ಎಂದು ಹೇಳಿದರು. 

TAGGED:
Share This Article
Leave a Comment