ಪಬ್ಲಿಕ್ ಅಲರ್ಟ್
ಮೈಸೂರು: ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಮಹತ್ವದ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಬಡಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಯೋಜನೆಗಳ ಅನುಷ್ಠಾನದಿಂದಾಗಿರುವ ಫಲಶೃತಿ ಚರ್ಚಿಸಲು ಹೋಬಳಿವಾರು ಶಿಬಿರ ಆಯೋಜಿಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಗುರುಸ್ವಾಮಿ ತಿಳಿಸಿದರು.
ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರತಿ ಮನೆಮನೆಗೂ ಜನಪರವಾದ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಕುರಿತು ಸಮಿತಿ ಹಾಗೂ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದು ಹೇಳಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಸೌಲಭ್ಯ ದೊರಕುವಂತೆ ಮಾಡುವುದೇ ಇದರ ಉದ್ದೇಶದಿಂದಾಗಿ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಗ್ಯಾರಂಟಿ ಯೋಜನೆಯ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅದರಂತೆ ನಮ್ಮ ತಾಲ್ಲೂಕು ಸಮಿತಿಯು ಹಾಗೂ ಅಧಿಕಾರಿವರ್ಗವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳು ಬಡವರ ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಿವೆ. ಸಮಾಜದಲ್ಲಿ ಗೌರವದಿಂದ ಬದುಕಲು ನೆರವಾಗಿದೆ. ಈ ಹಿನ್ನೆಲೆ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳೊಡನೆ ಮುಕ್ತ ಸಂವಾದ ನಡೆಸುವುದು ಹಾಗೂ ಸಮಸ್ಯೆ ಎದುರಿಸುತ್ತಿದ್ದರೆ ಸ್ಪಂದಿಸಲು ಶಿಬಿರ ಆಯೋಜನೆಯು ಸೂಕ್ತವಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಮಾತನಾಡಿ, ತಾಲ್ಲೂಕಿನ ವರುಣ, ಇಲವಾಲ, ಜಯಪುರ ಹೋಬಳಿಗಳಲ್ಲಿ ಗ್ಯಾರಂಟಿ ಯೋಜನೆಗಳ ಮುಕ್ತ ಸಂವಾದಕ್ಕೆ ಸಂಬಂಧಿಸಿದಂತೆ ಶಿಬಿರ ಆಯೋಜಿಸಲಾಗುವುದು. ಈ ವೇಳೆಯಲ್ಲಿ ಯೋಜನೆಯಿಂದ ಉಂಟಾಗಿರುವ ಪರಿಣಾಮ ಕುರಿತು ಚರ್ಚಿಸುವುದಲ್ಲದೆ, ಹೊರಗುಳಿದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯ ದೊರಕಿಸಿಕೊಡಲಾಗುವುದು ಎಂದರು.
ಸಭೆಯಲ್ಲಿ ಸದಸ್ಯರುಗಳಾದ ಹೆಚ್.ಡಿ.ಚನ್ನಯ್ಯ, ಮಾವಿನಹಳ್ಳಿ ನಾಗೇಶ್, ಬಿ.ರವಿ, ರಾಣಿ ಶಿವಣ್ಣ, ಮೊಹಮ್ಮದ್ ಆಲಿ ಬಾಬು, ಎಂ.ಸೋಮಣ್ಣ, ಕರೀಗೌಡ, ಮೂಡಪ್ಪ, ವಿ.ಸಿ.ಬಸವರಾಜು, ಶಂಕರ, ನಾಗರಾಜಮೂರ್ತಿ, ತಾಲ್ಲೂಕು ಯೋಜನಾಧಿಕಾರಿ ಸುರೇಶ್, ಪ್ರಗತಿ ಸಹಾಯಕರಾದ ಕಿಶೋರ್ ಸೇರಿ ಇತರರು ಉಪಸ್ಥಿತರಿದ್ದರು.

