ವರದಿ : ವಿ ಲತಾ
ಬೆಂಗಳೂರು, ಆ.19- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವ ಜೂನ್ 11ರಿಂದ ಜು.25ರ ಅವಧಿ ಐದು ಬಿಲಿಯನ್ , ನಲತ್ತೊಂಬತ್ತು ಮಿಲಿಯನ್, ನಾಲ್ಕು ನೂರ ಎಪ್ಪತ್ತಾರು ಸಾವಿರ, ನಾಲ್ಕು ನೂರ ಹದಿನಾರು ಮಹಿಳೆಯರು ಅಂದರೆ 500 ಕೋಟಿ ಮಹಿಳಾ ಪ್ರಯಾಣಿಕರ ಟಿಕೇಟ್ ಪ್ರಯಾಣವು ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಶಕ್ತಿ ಯೋಜನೆಯು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸುತ್ತದೆ ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜಾರಿಗೊಳಿಸಿದ್ದರು. ಈ ಚಾರಿತ್ರಿಕ ಸಾಧನೆಯು ಕೆ ಎಸ್ ಆರ್ ಟಿ ಸಿ, ಬಿ ಎಂ ಟಿ ಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆಡಳಿತ ಮಂಡಳಿ, ಸಾರಿಗೆ ಸಂಸ್ಥೆಗಳ ಅಧ್ಯಕ್ಷ, ಮಾನ್ಯ ಉಪಾಧ್ಯಕ್ಷ, ಸಾರಿಗೆ ಇಲಾಖೆಯ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರುಗಳು
ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಮರ್ಪಿಸಲಾಗಿದೆ ಎಂದರು.
ಸಮಸ್ತ ಸಿಬ್ಬಂದಿಗಳ ಪರಿಶ್ರಮ, ಕಾರ್ಯತತ್ಪರತೆ ಮತ್ತು ಪ್ರಾಮಾಣಿಕ ಸೇವೆ ಅನನ್ಯ, ಅಭಿನಂದನೀಯ. ಇದರೊಂದಿಗೆ ಕಾರ್ಮಿಕ ಮುಖಂಡರುಗಳ ಸಹಕಾರವನ್ನು ಮರೆಯುವಂತಿಲ್ಲ ಅವರಿಗೆ ನನ್ನ ಧನ್ಯವಾದಗಳು. ಶಕ್ತಿ ಯೋಜನೆಯ ಪ್ರಾರಂಭದಿಂದಲೂ ಬೆಂಬಲ,ಪ್ರೋತ್ಸಾಹ ಹಾಗೂ ಸಕಾರಾತ್ಮಕ ಬದಲಾವಣೆಗಳಿಗೆ ಸಲಹೆ ನೀಡುತ್ತಾ ಬಂದಿರುವ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ.
ನಾನು ಸಾರಿಗೆ ಸಚಿವನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಕೂಡಲೇ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೆ ತಂದ ಗ್ಯಾರೆಂಟಿ ಯೋಜನೆಯಾದ ಶಕ್ತಿ ಯೋಜನೆಯು ಅತ್ಯಂತ ಸವಾಲಿನಿಂದ ಕೂಡಿದ್ದಾಗಿತ್ತು. ಕಳೆದ ಐದಾರು ವರುಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ, ಹೊಸ ನೇಮಕಾತಿ ಆಗಿಲ್ಲ, ಸಾರಿಗೆ ಸಂಸ್ಥೆಗಳು ಸಾಲದ ಸುಳಿಯಲ್ಲಿದ್ದವು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ನನಗೆ ವೈಯಕ್ತಿಕವಾಗಿ ಸಂತೃಪ್ತಿ ತಂದಿದೆ ಎಂದರು.
ಈ ಎರಡು ವರುಷಗಳ ಶಕ್ತಿ ಯೋಜನೆಯ ಹಾದಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 5800 ಹೊಸ ಬಸ್ಸುಗಳ ಸೇರ್ಪಡೆ,10000 ಹೊಸ ನೇಮಕಾತಿ, ಸಾಲ ಪಾವತಿಸಲು ಸರ್ಕಾರದಿಂದ 2000 ಕೋಟಿ ಸಹಾಯ, ಸಾರಿಗೆ ಸಂಸ್ಥೆಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಇತರೆ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಹತ್ತು ಹಲವು ಸವಾಲುಗಳಿದ್ದು, ಎಲ್ಲವನ್ನು ನಾನು ಇತ್ಯರ್ಥ ಪಡಿಸಲು ಸಾಧ್ಯವಿಲ್ಲ ಆದರೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಮತ್ತು ಮಾಡುತ್ತಿದ್ದೇನೆಂದರು.
ದೇಶದ 10 ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ನಡೆಸಿರುವ ಅಧ್ಯಯನದ ವರದಿಯು ಬೆಂಗಳೂರಿನಲ್ಲಿ ಶೇ.23 ಮತ್ತು ಹುಬ್ಬಳ್ಳಿ – ಧಾರವಾಡದಲ್ಲಿ ಶೇ.21 ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶಕ್ತಿ ಯೋಜನೆಯಿಂದ ಹೆಚ್ಚಳವಾಗಿದೆಯೆಂದು ತಿಳಿಸಿದೆ. ಇದರಿಂದ ರಾಜ್ಯದ ತಲಾ ಆದಾಯವು ಹೆಚ್ಚಳವಾಗಲು ಕಾರಣವಾಗಿದೆ ಎಂದರು.
ವಿಶ್ವ ದಾಖಲೆಗೆ ಸೇರ್ಪಡೆಯಾದ ಶಕ್ತಿ ಯೋಜನೆಯಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಿಗೂ ಇಂದು ಹೆಮ್ಮೆ ಮತ್ತು ಗೌರವವಾಗಿದೆ. ಶಕ್ತಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರು, ಬದಲಾವಣೆಗಳೊಂದಿಗೆ ಜಾರಿಗೆ ತರಲಾಗುತ್ತಿರುವುದೇ ನಮ್ಮ ಸರ್ಕಾರದ ಶಕ್ತಿ ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ವಲ್ಡ್ ಬುಕ್ ರೆಕಾರ್ಡ್ ಮಾಡಿ ವಿಶ್ವ ದಾಖಲೆಗೆ ಸೇರಿದ ಶಕ್ತಿಯೋಜನೆ

Leave a Comment
Leave a Comment