ಪಬ್ಲಿಕ್ ಅಲರ್ಟ್
ಹನೂರು,ಅ.23- ತಾಲ್ಲೂಕಿನ ಪ್ರಸಿದ್ಧ ಪವಿತ್ರ ಯಾತ್ರಾಸ್ಥಳ ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಭಕ್ತಿ ಮತ್ತು ಆನಂದದ ವಾತಾವರಣದ ನಡುವೆ ತೆಪ್ಪೋತ್ಸವ ಭವ್ಯವಾಗಿ ನೆರವೇರಿತು.
ಬೆಳಿಗ್ಗೆ 9.15 ರಿಂದ 9.55ರವರೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ವೈದಿಕ ವಿಧಾನದಲ್ಲಿ ಜರುಗಿತು.
ಭಕ್ತರ ಜಯಘೋಷ, ಪೂಜಾ ಮಂತ್ರಗಳ ನಾದ ಮತ್ತು ರಥದ ಚಕ್ರಗಳ ಘರ್ಷಣೆಯ ಶಬ್ದದಲ್ಲಿ ಬೆಟ್ಟದ ಪ್ರಾಂಗಣವೇ ಭಕ್ತಿ ಭಾವದಿಂದ ತುಂಬಿತು.
ನಂತರ ಸಂಜೆ 6.30 ಗಂಟೆಗೆ ಪ್ರಾಧಿಕಾರದ ಕಾರ್ಯದರ್ಶಿ ಎ. ಇ.ರಘು, ಡಿವೈಎಸ್ಪಿ ಧರ್ಮೇಂದ್ರ ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ತೆಪ್ಪೋತ್ಸವ ಆರಂಭವಾಯಿತು.
ದೀಪಾಲಂಕೃತ ಕೆರೆಯ ಮೇಲೆ ಬೆಳಕುಗಳ ಮಧ್ಯೆ ತೇಲಿದ ಶ್ರೀ ಸ್ವಾಮಿಯವರ ತೆಪ್ಪವು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡಿತು.
ತೆಪ್ಪದ ಸುತ್ತಲೂ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.








ತೆಪ್ಪೋತ್ಸವದ ಬಳಿಕ, ಭಕ್ತರ ಜಯಕಾರಗಳಿಂದ ಗಗನಮುಟ್ಟಿದ ಬೆಟ್ಟದ ವಾತಾವರಣದಲ್ಲಿ ಈ ವರ್ಷದ ದೀಪಾವಳಿ ಜಾತ್ರೆಗೆ ಯಶಸ್ವಿಯಾಗಿ ತೆರೆ ಬಿದ್ದಿತು.
