ಪಬ್ಲಿಕ್ ಅಲರ್ಟ್ ನ್ಯೂಸ್:-ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಕ್ಕೆ ಬದ್ದಅತ್ಯಾಧುನಿಕ ರೇಡಿಯೇಷನ್ ಥೆರಪಿ ಬಳಕೆ-ಡಾ. ದೇವಿಶೆಟ್ಟಿ
ಮೈಸೂರು: ಸಮಾಜಕ್ಕೆ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ನಾವು ಯಾವಾಗಲೂ ಬದ್ಧರಾಗಿದ್ದೇವೆ ಎಂದು ನಾರಾಯಣ ಹೆಲ್ತ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು ಹೇಳಿದರು.
ಗುರುವಾರ ಬೆಳಗ್ಗೆ ಆಸ್ಪತ್ರೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಕ್ಕೆ ಬದ್ದರಿದ್ದು, ಇಂದು ಮುಂದುವರೆದ ಭಾಗವಾಗಿ, ರೇಡಿಯೇಷನ್ ಅಂಕಾಲಜಿ ವಿಭಾಗದಲ್ಲಿ ’ನಕ್ಸ್ ಜನರೇಷನ್ ಲೀನಿಯರ್ ಆಕ್ಸಿಲರೇಟರ್ (ಎಲ್‌ಐಎನ್‌ಸಿ) ವ್ಯವಸ್ಥೆಯನ್ನು ಅಳವಡಿ ಸಿಕೊಳ್ಳುವ ಮೂಲಕ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದೇವೆ ಎಂದರು.
ನಾರಾಯಣ ಆಸ್ಪತ್ರೆ ಮೈಸೂರು, ಕಳೆದ ಒಂದು ದಶಕದಿಂದ ಎಲ್‌ಐಎನ್‌ಸಿ ಅಧಾರಿತ ಚಿಕಿತ್ಸೆ ಸೇರಿದಂತೆ ಸುಧಾರಿತ ರೇಡಿಯೇಷನ್ ಥೆರಪಿ ಸೇವೆಗಳ ಮೂಲಕ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಾ ಬಂದಿದೆ. ಪ್ರಸ್ತುತ ಆ ಪ್ರಯಾಣದ ಮುಂದಿನ ಹಂತವಾಗಿ ಈ ತಾಂತ್ರಿಕ ಅಪ್ ಗ್ರೇಡ್ ಅನ್ನು ಪರಿಚಯಿಸಲಾಗುತ್ತಿದ್ದು, ಈ ಸೌಲಭ್ಯವು ಚಿಕಿತ್ಸೆಯ ನಿಖರತೆ, ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲಿದೆ. ಅಲ್ಲದೆ, ಈ ವ್ಯವಸ್ಥೆಯು ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯ ಪ್ರಾದೇಶಿಕ ಕೇಂದ್ರವಾಗಿ ನಾರಾಯಣ ಆಸ್ಪತ್ರೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದರು.
ಭಾರತದಾದ್ಯಂತ ಕ್ಯಾನ್ಸರ್ ಪ್ರಕರಣಗಳು ಸ್ಥಿರವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಮುಂದಿರುವ ಸವಾಲು ಕೇವಲ ಚಿಕಿತ್ಸಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಮಾತ್ರವೇ ಅಲ್ಲ, ಬದಲಿಗೆ ಈ ಸುಧಾರಿತ ಸೌಲಭ್ಯಗಳು ಅಗತ್ಯವಿರುವ ಪ್ರತಿಯೊಬ್ಬ ರೋಗಿಗೂ ತಲುಪುವಂತೆ ನೋಡಿಕೊಳ್ಳುವುದು, ಬಹಳಷ್ಟು ಬಾರಿ ರೋಗಿಯ ವಾಸಸ್ಥಳವು ಅವರು ಎಷ್ಟು ಬೇಗ ಚಿಕಿತ್ಸೆ ಪಡೆಯಬಹುದು ಎಂಬುದನ್ನು ನಿರ್ಧರಿಸಲಿದ್ದು, ವೈದ್ಯಕೀಯ ವ್ಯವಸ್ಥೆಯು ಈ ಅಂತರವನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ಸುಧಾರಿತ ರೇಡಿಯೇಷನ್ ಥೆರಪಿಯನ್ನು ಜನರ ಸಮೀಪಕ್ಕೆ ತರುವುದರಿಂದ ಆರಂಭಿಕ ಹಂತದ ಚಿಕಿತ್ಸೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ತಾಂತ್ರಿಕ ಅಪ್ ಗ್ರೇಡ್ ನಿಖರ ಅಂಕಾಲಜಿ ಚಿಕಿತ್ಸೆ ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ವೈದ್ಯಕೀಯ ವಿಜ್ಞಾನದ ಪ್ರಗತಿಯು ಕೇವಲ ದೊಡ್ಡ ಮಹಾನಗರಗಳಿಗೆ ಮಾತ್ರವೇ ಸೀಮಿತವಾಗದೆ ಎಲ್ಲರಿಗೂ ಸಮಾನವಾಗಿ ದೊರಕುವಂತೆ ಮಾಡುತ್ತದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮಾತನಾಡಿ, ವೈದ್ಯಕೀಯ ವೃತ್ತಿಯು ನೋವನ್ನು ನಿವಾರಿಸುವ ಮತ್ತು ಜೀವವನ್ನು ಉಳಿಸುವ ಒಂದು ಪವಿತ್ರ ಸೇವೆ ಎಂದು ಪರಿಗಣಿಸಲ್ಪಟ್ಟಿದೆ. ಸುಧಾರಿತ ಕ್ಯಾನ್ಸರ್ ಚಿಕಿತ್ಸೆಯು ವಿಕಸನಗೊಂಡು ಬಲಗೊಳ್ಳುತ್ತಿರುವುದು, ಕಷ್ಟದ ಸಮಯದಲ್ಲಿರುವ ಕುಟುಂಬಗಳಿಗೆ ದೊಡ್ಡ ಭರವಸೆ ಮತ್ತು ಧೈರ್ಯವನ್ನು ನೀಡುತ್ತದೆ ಎಂದು ಹೇಳಿದರು.
ಜೊತೆಗೆ ಸ್ವಾಮೀಜಿಯವರು ಆರೋಗ್ಯಕರ ಜೀವನಶೈಲಿಯ ಪ್ರಾಮುಖ್ಯತೆಯನ್ನು ತಿಳಿಸಿದರು. ಸಾತ್ವಿಕ ಆಹಾರ ಸೇವನೆ, ಮೊಬೈಲ್ ಅತಿಯಾದ ಬಳಕೆ ಸೇರಿದಂತೆ ಎಲ್ಲಾ ರೀತಿಯ ವ್ಯಸನಗಳಿಂದ ದೂರವಿರುವುದು, ಪ್ರಾಣಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದು, ನಿಯಮಿತ ವ್ಯಾಯಾಮ, ನಿದ್ರೆ ಮತ್ತು ಎಚ್ಚರಾಗುವ ಚಕ್ರವನ್ನು ಸೂಕ್ತ ರೀತಿಯಲ್ಲಿ ಕಾಪಾಡಿಕೊಳ್ಳುವುದು ಹಾಗೂ ಒತ್ತಡ ಮುಕ್ತ ಮತ್ತು ತೃಪ್ತಿದಾಯಕ ಜೀವನವನ್ನು ನಡೆಸುವ ಅಗತ್ಯದ ಬಗ್ಗೆ ಅವರು ತಿಳಿಹೇಳಿದರು.
ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಕ್ಕೆ ಬದ್ದಅತ್ಯಾಧುನಿಕ ರೇಡಿಯೇಷನ್ ಥೆರಪಿ ಬಳಕೆ-ಡಾ. ದೇವಿಶೆಟ್ಟಿ
Leave a Comment
Leave a Comment
