ಪಬ್ಲಿಕ್ ಅಲರ್ಟ್ ನ್ಯೂಸ್:-ಸಮಾಜಕ್ಕೆ ಛತ್ರಪತಿ ಶಿವಾಜಿಯವರು ನೀಡಿರುವ ಕೊಡುಗೆ ಅಪಾರ: ಸಿಎನ್ ಮಂಜೇಗೌಡ
ಮೈಸೂರು,ಫೆ.19 (ಕರ್ನಾಟಕ ವಾರ್ತೆ):- ಛತ್ರಪತಿ ಶಿವಾಜಿಯು ಈ ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ನಮ್ಮ ಇಂದಿನ ಪೀಳಿಗೆಗಳು ತಿಳಿದುಕೊಳ್ಳಬೇಕು ಅವರು ತೋರಿಸಿಕೊಟ್ಟಂತಹ ಮಾರ್ಗದಲ್ಲಿ ಇಂದು ನಮ್ಮ ಜೀವನಗಳ ನಡೆಸಬೇಕು. ಛತ್ರಪತಿ ಶಿವಾಜಿಯ ಸಾಮ್ರಾಜ್ಯವು ಶಕ್ತಿಯುತ ಸೇನಾಧಿಪತಿಗಳಿಂದ ತುಂಬಿತ್ತು. ಮೊಘಲ್ ರಾಜರ ವಿರುದ್ಧ ಹೋರಾಡಿ ಯುದ್ಧದಲ್ಲಿ ಜಯ ಸಾಧಿಸಿದಂತ ವ್ಯಕ್ತಿ ಶಿವಾಜಿ. ಅವರ ಜೀವನದಲ್ಲಿ ಗೆರಿಲ್ಲಾ ಯುದ್ಧ ಬಹಳ ಮಹತ್ವಪೂರ್ಣವಾದದ್ದು ಎಂದು ವಿಧಾನಪರಿಷತ್ತಿನ ಶಾಸಕರಾದ ಸಿ.ಎನ್ ಮಂಜೇಗೌಡ ಅವರು ಹೇಳಿದರು.
ಇಂದು ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿಯ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳು ಶಿವಾಜಿಯವರ ಬಗ್ಗೆ ಅತಿ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರ ಮನೆಯಲ್ಲೂ ಛತ್ರಪತಿ ಶಿವಾಜಿ ಅವರ ಭಾವಚಿತ್ರಗಳನ್ನು ಇಡಬೇಕು. ಅವರ ಸ್ಪೂರ್ತಿ ನಿಮ್ಮೆಲ್ಲರಿಗೂ ದಾರಿದೀಪವಾಗಬೇಕು ಎಂದು ತಿಳಿಸಿದರು
ಡಾ. ಆರ್ ಚಲಪತಿ ಅವರು ಉಪನ್ಯಾಸ ನೀಡಿ ಮಾತನಾಡಿ ಶಿವಾಜಿಯು ಜನತೆಯ ರಾಜ ಮತ್ತು ಪ್ರಜೆಗಳ ಮನಸ್ಸಿನಲ್ಲಿ ಬೇರೂರಿದಂತಹ ವೀರ. ಶಿವಾಜಿಯನ್ನು ಶತ್ರುಗಳು ಸಹ ಪ್ರೀತಿಸುತ್ತಿದ್ದರಂತೆ. ಪ್ರಜೆಗಳು ರಾಜನಿಗೆ ಪ್ರಾಣವನ್ನು ನೀಡುವಂತಹ ಪ್ರೀತಿ ಗೌರವ ಸಂಪಾದಿಸಿದ್ದರು. ಅಂದು ಶಿವಾಜಿಯ ಸಾಮ್ರಾಜ್ಯದಲ್ಲಿ ಸೈನಿಕರಿಗೆ ಯಾವುದೇ ಹೆಂಗಸರ ಮೈ ಮೇಲೆ ಕೈ ಹಾಕಬಾರದೆಂದು ಎಚ್ಚರಿಕೆ ನೀಡಿದರಂತೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರೆ ಅವರ ಕಣ್ಣುಗಳನ್ನು ಕಿತ್ತು ಸೆರೆವಾಸಕ್ಕೆ ತಳ್ಳುತ್ತಿದ್ದರು ಇವರ ಸಾಮ್ರಾಜ್ಯದಲ್ಲಿ ಮಹಿಳೆಯರಿಗೆ ಗೌರವಯುತವಾದ ಸ್ಥಾನವಿತ್ತು ಎಂದು ತಿಳಿಸಿದರು.
ಯುದ್ಧಕ್ಕೆ ತೆರಳುವಾಗ ರೈತರ ಗದ್ದೆಗಳ ಮೇಲೆ ಹೋಗಬಾರದು. ರೈತರ ಬೆಳೆಗೆ ನಾಶವಾಗಬಾರದೆಂದು ಎಂದು ಸೈನಿಕರಿಗೆ ಎಚ್ಚರಿಕೆ ನೀಡಿದ್ದರು. ರೈತರಿಗೆ ಬರ ಬಂದಾಗ ಕಂದಾಯವನ್ನು ವಸಲಿ ಮಾಡಬಾರದೆಂದು ಆದೇಶ ನೀಡಿದರು. ಬರಗಾಲ ನೀಗುವವರೆಗೂ ಸಾಮ್ರಾಜ್ಯದಲ್ಲಿ ಇವರಿಗೆ ಸಹಕಾರ ನೀಡಬೇಕೆಂದು ಹೇಳಿದರಂತೆ ಎಂದು ತಿಳಿಸಿದರು.
ಯುದ್ಧದ ಸಂದರ್ಭದಲ್ಲಿ ಯಾವುದೇ ಮಹಿಳೆಯನ್ನು ದಾಸಿಯ ರೀತಿಯಲ್ಲಿ ನೋಡಬಾರದೆಂದು ಆಜ್ಞೆ ಮಾಡಿದ್ದರು. ಶಿವಾಜಿ ಅಧಿಕಾರಕ್ಕೆ ಬಂದಾಗ ಪಾರ್ಷಿಭಾಷೆಯನ್ನು ತೆಗೆದುಹಾಕಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಆಡಳಿತ ನಡೆಸಬೇಕೆಂದು ಸುಧಾರಣೆಗಳನ್ನು ಕೈಗೊಂಡರು. 1674 ರಲ್ಲಿ ಛತ್ರಪತಿ ಎಂದು ಕರೆಸಿಕೊಂಡರು ಶಿವಾಜಿಯು ಗೆರಿಲ್ಲಾ ಯುದ್ಧವನ್ನು ಪರಿಚಯಿಸಿದರು. ಅಂದರೆ ಬೆಟ್ಟ-ಗುಡ್ಡಗಳಲ್ಲಿ ಅಡಗಿ ಯುದ್ಧ ಮಾಡುವುದು ಎಂದರ್ಥ ಛತ್ರಪತಿ ಶಿವಾಜಿಯು ಸ್ವತಂತ್ರವಾಗಿ ಸಾಮ್ರಾಜ್ಯವನ್ನು ಕಟ್ಟಿ , ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದಂತಹ ಮಹಾನ್ ವೀರ ಎಂದು ಹೇಳಿದರು
ಶ್ರೀರಂಗಪಟ್ಟಣದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಟ್ರಸ್ಟ್ ನ ಗಜಾನನ ಸ್ವಾಮಿಯವರು ಮಾತನಾಡಿ ಶಿವಾಜಿಯ ಗುಣ ಇಂದು ಎಲ್ಲರಲ್ಲೂ ಇರಬೇಕೆಂದು ಹೇಳಿದರು ಶಿವಾಜಿಯ ಗುರು ದಾದಾಜಿ ಕೊಂಡದೇವ ರಾಮದಾಸರು ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅಹಂಕಾರ ತುಂಬಿರುತ್ತದೆ. ಅಹಂಕಾರ ಒಳ್ಳೆಯದಲ್ಲ ಎಂದು ಹೇಳುತ್ತಿದ್ದರು. ತುಕರಾಮ್ ಮಹಾರಾಜ್ ಅವರು ತುಂಬಾ ಬಡತನದಿಂದ ಕೂಡಿರುತ್ತಾರೆ ಅಂದು ಛತ್ರಪತಿ ಶಿವಾಜಿಯವರು ಇದನ್ನು ಗಮನಿಸಿ ತಮ್ಮ ಸಾಮ್ರಾಜ್ಯದಿಂದ ಸಂಪತ್ತುಗಳನ್ನು ಅವರ ಮನೆಗೆ ಕಳಿಸಿಕೊಟ್ಟರೆಂದು ಹೇಳಿದರು
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಮ್ ಡಿ ಸುದರ್ಶನ್, ಮಾರುತಿ ಕೆ ನಾಗೇಂದ್ರ ರಾವ್, ಗಣೇಶ ರಾವ್ ಜ್ಞಾನಪ್ರಕಾಶ್ ಸುನೀಲ್ ಶ್ರೀನಿವಾಸ ಶಿಂಧೆ ಭೀಮರಾವ್ ಉಮಾಪತಿ ಸತ್ಯಪಾಲ್ ಮತ್ತಿತರರು ಉಪಸ್ಥಿತರಿದ್ದರು.
