ಅಸ್ಪೃಶ್ಯತೆ ಆಚರಣೆಯನ್ನು ನಾಶ ಮಾಡಲು ಎಲ್ಲರೂ ಕೈಜೋಡಿಸಬೇಕು : ಬಿ.ಬಸವರಾಜು

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಅಸ್ಪೃಶ್ಯತೆ ಆಚರಣೆಯನ್ನು ನಾಶ ಮಾಡಲು ಎಲ್ಲರೂ ಕೈಜೋಡಿಸಬೇಕು : ಬಿ.ಬಸವರಾಜು

ಮೈಸೂರು, ಮಾ.05(ಕರ್ನಾಟಕ ವಾರ್ತೆ):- ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇರುವುದು ಒಂದು ದುರಂತ. ಇದನ್ನು ನಾವು ನಾಶ ಮಾಡುವಲ್ಲಿ ಮುಂದಾಗಬೇಕು ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ ಎಂಬುದರ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಜನತೆಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ನಾಶ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರಾದ ಬಿ.ಬಸವರಾಜು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಅಂಬೇಡ್ಕರ್ ಅವರ ಆಶಯದಂತೆ ಸಮಸಮಾಜ ನಿರ್ಮಾಣ ಮಾಡುವಲ್ಲಿ ಮತ್ತು ಅವರು ಹಾಕಿಕೊಟ್ಟಂತಹ ದಾರಿಯಲ್ಲಿ ನಾವು ನಡೆಯಬೇಕು ಜಾತಿ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ ರಂಗೇಗೌಡ ಅವರು ಮಾತನಾಡಿ ಸಮಾಜದಲ್ಲಿನ ಅಸ್ಪೃಶ್ಯತೆ ಯನ್ನು ತಡೆಯಲು ಇಂದು ವಿಶೇಷ ವಿಂಗ್ ಘಟಕ ಅಥವಾ ನಾಗರಿಕ ಹಕ್ಕು ನಿರ್ದೇಶನಾಲಯವನ್ನು ರಚಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 1975 ರಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯನ್ನು ಬೇರ್ಪಡಿಸಲಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡದಂತೆ ಪ್ರತಿಯೊಂದು ಮನೆ ಮನೆಗೂ ಮಾಹಿತಿಯನ್ನು ತಲುಪಿಸುಬೇಕು. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಸ್ಥಿತಿ ಪಂಗಡಗಳ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ತರುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಬಹಳ ಪ್ರಾಮುಖ್ಯವಾದದ್ದು. ನಾಗರಿಕ ಸಮಾಜದಲ್ಲಿ ಮೇಲು ಕೇಳು ಎಂಬ ಜಾತಿಯಿಂದ ತುಂಬಿದೆ ಇದನ್ನು ನಾಶ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸೋಣ. ಅಸ್ಪೃಶ್ಯತೆ ಆಚರಣೆ ಮಾಡದಂತೆ ಸರ್ಕಾರದಿಂದ ಹಲವಾರು ಕಾಯ್ದೆಗಳು ಮತ್ತು ಶಿಕ್ಷೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಉಪ ಪೊಲೀಸ್ ವರಿಷ್ಠಾಧಿಕಾರಿಯಾದ ಅನುಶ್ರೀ ರಾಣಿ ಅವರು ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರನ್ನು ರಕ್ಷಣೆ ಮಾಡಲು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ನಮ್ಮ ಸಂವಿಧಾನದಲ್ಲಿ ಹಲವಾರು ರೀತಿಯ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಮತ್ತು ಅಸ್ಪೃಶ್ಯತೆ ಆಚರಣೆ ಮಾಡುವುದು ಕಾನೂನು ಬಾಹಿರ ಎಂದು ಹೇಳಿದರು .

ಹಿಂದಿನ ಕಾಲದಲ್ಲಿ ವರ್ಣಬೇದ ವ್ಯವಸ್ಥೆಯಿಂದ ತುಂಬಿತ್ತು. ಎಲ್ಲರಿಗೂ ಶಿಕ್ಷಣವನ್ನು ಪಡೆಯುವ ಹಕ್ಕಿರಲಿಲ್ಲ ಮತ್ತು ಜ್ಞಾನದ ಕೊರತೆ ಹೊಂದಿದ್ದರು ಆದರೆ ಇಂದು ಎಲ್ಲರೂ ಸರಿಸಮಾನವಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ ತಾರತಮ್ಯ ಮಾಡುವುದು ಕಡಿಮೆಯಾಗಿದೆ ಎಂದು ಹೇಳಿದರು.

ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟಿಗೆ ಸೇರಿದ ವ್ಯಕ್ತಿಯ ಮೇಲೆ ಯಾವುದೇ ಅಪರಾಧ ಕೃತ್ಯವನ್ನು ಎಸೆಗಿದರೆ ಭಾರತೀಯ ದಂಡ ಸಂಹಿತೆ (1980ರ 45)ರ ಅಡಿಯಲ್ಲಿ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದರೂ ಸಹ ಇಂದಿಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯದ ಜನಾಂಗವನ್ನು ಕೆಲವು ಕಡೆ ದೇವಸ್ಥಾನದ ಒಳಗೆ ಸೇರಿಸುವುದಿಲ್ಲ. ನಾವು ಅಂತ ಜನರಿಗೆ ಸಮುದಾಯಗಳಿಗೆ ಇಂದಿನ ಕಾನೂನು ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗವನ್ನು ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಪ್ರತಿಯೊಬ್ಬ ವ್ಯಕ್ತಿಯ ತನ್ನ ಮೊದಲ 6 ನೇ ವರ್ಷದಲ್ಲಿ ಅವನ ವ್ಯಕ್ತಿತ್ವ ಬೆಳವಣಿಗೆ ರೂಪಿಸಲು ಸಾಧ್ಯ. ಇಂಥ ಸಮಯದಲ್ಲಿ ನಾವು ಸರಿಯಾದ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಸಬೇಕು ಆಗ ಮಾತ್ರ ಅವರ ಮುಂದಿನ ಜೀವನ ತುಂಬಾ ಉತ್ತಮವಾಗಿರುತ್ತದೆ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಬೇಕು ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗ್ರಾಮೀಣ ಪ್ರದೇಶಗಳಲ್ಲಿ ತಪ್ಪು ಕೆಲಸಗಳು ಕಂಡು ಬಂದರೆ ಅದನ್ನು ತಡೆಯುವುದು ನಿಮ್ಮ ಮೊದಲ ಕೆಲಸವಾಗಿರುತ್ತದೆ. ನಂತರ ಮುಂದಿನ ಕೆಲಸ ನಮ್ಮ ಪೊಲೀಸ್ ಇಲಾಖೆಯು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಿನ ಮೂಲಕ ಶಿಕ್ಷೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು .

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಅಂಬೇಡ್ಕರ್ ವಾದಿ ಚಿಂತಕರಾದ ಡಾ. ಕೃಷ್ಣಮೂರ್ತಿ ಚಮರಂ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುಗಳು ಮತ್ತು ಅನಿಕೇತನ ಕಲಾಬಳಗದವರು ಉಪಸ್ಥಿತರಿದ್ದರು.

Share This Article
Leave a Comment