ಪಬ್ಲಿಕ್ ಅಲರ್ಟ್ ನ್ಯೂಸ್:-ಸರ್ಕಾರಿ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ: ಲಕ್ಷ್ಮೀಕಾಂತ ರೆಡ್ಡಿ ಜಿ
ಮೈಸೂರು, ಮಾ.11(ಕರ್ನಾಟಕ ವಾರ್ತೆ):-
ಖಾಸಗಿ ಸಂಸ್ಥೆಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುವವರಿಗೆ ಬೋನಸ್ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತದೆ. ಸರ್ಕಾರಿ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ 2023 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಕೆಲಸದಲ್ಲಿ ಪ್ರಶಸ್ತಿ ನೀಡುವುದರಿಂದ ನೌಕರರಲ್ಲಿ ಕೆಲಸ ನಿರ್ವಹಣೆಗೆ ಇನ್ನೂ ಹೆಚ್ಚಿನ ಹುರುಪು ತುಂಬಿದಂತಾಗುತ್ತದೆ ಎಂದರು.
ಕಲಾಮಾನ ಬದಲಾವಣೆಯಾದಂತೆ ಸರ್ಕಾರಿ ಕೆಲಸದಲ್ಲಿ ಸವಾಲುಗಳು ಸಹ ಹೆಚ್ಚಾಗುತ್ತಿದೆ. ಕೆಲಸದಲ್ಲಿ ನಿಖರತೆಗಾಗಿ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ಪ್ರಶಸ್ತಿ ಪಡೆದ ನೌಕರರು ತಮ್ಮ ಸಹೋದ್ಯೋಗಿಗಳಿಗೆ ಮಾದರಿಯಾಗಿ ಅವರಿಗೂ ಪ್ರಶಸ್ತಿ ಪಡೆಯುವಂತೆ ಪ್ರೇರಣೆ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಮಾತನಾಡಿ ಒಂದು ರಾಜ್ಯ ಅಥವಾ ರಾಷ್ಟ್ರದ ಅಭಿವೃದ್ಧಿ ಸಾಧಿಸಲು ಎಲ್ಲ ಇಲಾಖೆಯ ನೌಕರರ ವರ್ಗದ ಪಾತ್ರ ಪ್ರಮುಖವಾಗಿರುತ್ತದೆ. ಅಂತಹ ನೌಕರರನ್ನು ಗುರುತಿಸಿ ಅವರ ಕಠಿಣ ಪರಿಶ್ರಮ, ದಕ್ಷತೆ, ಪ್ರಾಮಾಣಿಕತೆ, ಕ್ರಿಯಾಶೀಲತೆಯನೆಲ್ಲ ಪರಿಗಣಿಸಿ ಅದನ್ನು ನಾವು ಗೌರವಿಸಬೇಕು ಎಂದರು.
ಮೈಸೂರು ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಭೇಟಿ ನೀಡುವುದು ಸಾಮಾನ್ಯ. ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದಾ ಎಚ್ಚರಿಕೆಯಿಂದ ಲೋಪವಾಗದಂತೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ
ಪ್ರಶಸ್ತಿ ಪಡೆದವರು ಇತರೆ ಅಧಿಕಾರಿಗಳು/ಸಿಬ್ಬಂದಿಗಳಿಗೆ ಮಾದರಿಯಾಗಿ ಅವರನ್ನು ಸಹ ಪ್ರಶಸ್ತಿ ಪಡೆಯುವಂತೆ ರೂಪಿಸಬೇಕು
.ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಡಾ. ಸಿ. ಪಿ ಅರುಣ್ ಕುಮಾರ್ ಅವರು ಮಾತನಾಡಿ ಕೆಲಸ ಕಾರ್ಯಗಳನ್ನು ಪ್ರೋತ್ಸಾಹಿಸುವ ಪದ್ಧತಿ ಇರಬೇಕು ಆಗ ಮಾತ್ರ ಇನ್ನೂ ಉತ್ತಮವಾಗಿ ಕೆಲಸ ನಿರ್ವಹಿಸಬಹುದು. ಸರ್ಕಾರಿ ನೌಕರರಿಗೆ 2006 ರಿಂದ ನಾಗರಿಕರ ಸೇವಾ ಪ್ರಶಸ್ತಿ ನೀಡುವ ಪದ್ಧತಿ ಪ್ರಾರಂಭವಾಯಿತು. 2006 ರಲ್ಲಿ ಪ್ರಶಸ್ತಿ ಮಾತ್ರ ನೀಡಲಾಗುತ್ತಿತ್ತು. 2021 ರಿಂದ ನಗದು ಮತ್ತು ಪ್ರಶಸ್ತಿ ಸಹ ನೀಡಿ ಗೌರವಿಸಲಾಗುತ್ತಿದೆ ಎಂದರು.
ಪ್ರಶಸ್ತಿ ವಿಜೇತರು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ. ಜೆ ಗುರುರಾಜ್, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕಿ ಯಶೋದ ಎನ್, ಆರೋಗ್ಯ ಇಲಾಖೆಯ ಹಿರಿಯ ಶುಶ್ರೂಷಕಿ ರತಿ ಎಂ. ಎಂ, ಆರೋಗ್ಯ ಇಲಾಖೆಯ DVBDCO ಅಧಿಕಾರಿ ಡಾ. ಚಿದಂಬರ ಎಸ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಿಸ್ಟಮ್ ಅನಾಲಿಸ್ಟ್/ಎನ್.ಎಸ್.ಎಸ್ ಆಫೀಸರ್ ಮಧುಸೂದನ್ ಎಸ್. ಎಂ, ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮದಾ ಶರತ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಆರೋಗ್ಯ ಇಲಾಖೆಯ ಶುಶ್ರೂಷಕಿ ರೂಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರುದ್ರೇಶ್ ಒಟ್ಟು 10 ಜನರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗೂ 25000 ನಗದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ ಸುದರ್ಶನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಮಾಲಂಗಿ ಸುರೇಶ್, ಮೈಸೂರು ಜಿಲ್ಲಾ ಶಾಖೆಯ ಕಾರ್ಯಧ್ಯಕ್ಷ ರಾಘವೇಂದ್ರ ಪಿ, ರಾಜ್ಯ ಕಾರ್ಯದರ್ಶಿ ಗಣೇಶ್, ಉಪಾಧ್ಯಕ್ಷರಾದ ವಿಶ್ವನಾಥ್ ಹಾಗೂ ಪುಷ್ಪವತಿ ಉಪಸ್ಥಿತರಿದ್ದರು.
