ಪಬ್ಲಿಕ್ ಅಲರ್ಟ್ ನ್ಯೂಸ್:-ದೇವರ ದಾಸಿಮಯ್ಯ ಅವರು ಸಮಾಜಕ್ಕೆ ಕಾಯಕ ನಿಷ್ಠೆ ಮತ್ತು ಸಮಾನತೆಯ ತತ್ವ ಸಾರಿದರು – ಡಾ. ಡಿ. ತಿಮ್ಮಯ್ಯ
ಮೈಸೂರು, ಮಾ.23(ಕರ್ನಾಟಕ ವಾರ್ತೆ):- ದೇವರ ದಾಸಿಮಯ್ಯ ಅವರು ಸಮಾಜಕ್ಕೆ ಕಾಯಕ ನಿಷ್ಠೆ ಮತ್ತು ಸಮಾನತೆಯ ತತ್ವ ಸಾರಿದ ಮಹಾನ್ ಶರಣರು ಎಂದು ವಿಧಾನ ಪರಿಷತ್ ಶಾಸಕರಾದ ಡಾ. ಡಿ. ತಿಮ್ಮಯ್ಯ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ದಾಸಿಮಯ್ಯನವರು ಬಸವಣ್ಣನವರಿಗಿಂತ ಮೊದಲೇ ಅಂದರೆ ಹತ್ತನೇ ಶತಮಾನದಲ್ಲಿ ಶಿವಪುರ ಗ್ರಾಮದಲ್ಲಿ ಜನಿಸಿದರು. ಇವರು ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಒಂದು ಕಡೆ ದೈವಭಕ್ತಿ ಹಾಗೂ ಶ್ರದ್ಧೆಯಿದ್ದರೆ, ಮತ್ತೊಂದೆಡೆ ಕಾಯಕದಲ್ಲಿ (ನೇಯ್ಗೆ) ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಅತ್ಯಂತ ವಿಶೇಷವಾದ ದೇಶವಾಗಿದೆ. ಇದಕ್ಕೆ ಕಾರಣ ಇಲ್ಲಿನ ಸುದೀರ್ಘ ಧಾರ್ಮಿಕ ಹಿನ್ನೆಲೆ ಮತ್ತು ವೈವಿಧ್ಯಮಯ ಸಂಸ್ಕೃತಿ. ಭಾರತದಲ್ಲಿ ವಿವಿಧ ಜಾತಿ, ಧರ್ಮಗಳಿದ್ದರೂ ನಾವೆಲ್ಲರೂ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಭಾಷೆ ಅಥವಾ ಜನಾಂಗದ ಆಧಾರದ ಮೇಲೆ ನಾವು ವಿಭಜಿತರಾಗಿ ಕಂಡರೂ, ದೇಶದ ಹಿತದೃಷ್ಟಿಯಿಂದ ನಾವೆಲ್ಲರೂ ಸಂಘಟಿತರಾಗಿದ್ದೇವೆ ಎಂಬುದು ವಿದೇಶಿಯರಿಗೆ ನಾವು ನೀಡುವ ಸಂದೇಶವಾಗಿದೆ,” ಎಂದು ತಿಳಿಸಿದರು.
ಸಮಾಜದ ನಿರ್ಮಾಣದಲ್ಲಿ ನೇಕಾರ, ಕುಂಬಾರ ಹಾಗೂ ಚಮ್ಮಾರರಂತಹ ಕಾಯಕ ವರ್ಗಗಳ ಪಾತ್ರ ದೊಡ್ಡದು. ಕಾಯಕ ಶರಣರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಬದುಕದೆ, ಸಮಾಜದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದ್ದಾರೆ. ಇಂದು ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ, ಅದರಲ್ಲಿ ಈ ಶರಣರ ತತ್ವಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಜೆ.ಎಸ್.ಎಸ್. ಪಬ್ಲಿಕೇಷನ್ ಕೌನ್ಸಿಲ್ ಮುಖ್ಯಸ್ಥರಾದ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ಮಾತನಾಡಿ: ಇತಿಹಾಸದಲ್ಲಿ ದೇವರ ದಾಸಿಮಯ್ಯ (ಜೇಡರ ದಾಸಿಮಯ್ಯ), ಶಂಕರ ದಾಸಿಮಯ್ಯ ಹಾಗೂ ಶಿವ ದಾಸಿಮಯ್ಯ ಎಂಬ ಹೆಸರುಗಳಲ್ಲಿ ಕಾಣಬಹುದು.ದೇವರ ದಾಸಿಮಯ್ಯನವರು ಬಟ್ಟೆ ನೇಯುವ, ಶಂಕರ ದಾಸಿಮಯ್ಯನವರನ್ನು ಬಣ್ಣ ಹಾಕುವ ಮತ್ತು ಶಿವ ದಾಸಿಮಯ್ಯನವರನ್ನು ಬಟ್ಟೆ ಹೊಲಿಯುವ ವೃತ್ತಿಯಲ್ಲಿ ತೊಡಗಿರುವುದನ್ನು ನೋಡಬಹುದು ಎಂದರು
ದೇವರ ದಾಸಿಮಯ್ಯ ಅವರನ್ನು ಚಾಲುಕ್ಯ ದೊರೆ ಜಯಸಿಂಹನ ಮಹಾರಾಣಿಯಾದ ಸುಗ್ಗಲಾದೇವಿ ಅವರಿಗೆ ಶಿವನ ಅನುಗ್ರಹವನ್ನು ಮಾಡಿದ ಗುರುಗಳೆಂದು ಕರೆಯುತ್ತೇವೆ ಎಂದು ತಿಳಿಸಿದರು.
ಪ್ರತಿಯೊಬ್ಬ ವಚನಕಾರರು ಹಾಗೂ ಶರಣರು ಯಾವುದಾದರೂ ನಿರ್ದಿಷ್ಟವಾದ ಕಾಯಕಕ್ಕೆ ಸೇರಿದವರಾಗಿದ್ದು, ಆ ಕಾಯಕದ ಮೂಲಕವೇ ತಮ್ಮ ಬದುಕನ್ನು ಕಟ್ಟಿಕೊಂಡು ಶಿವನ ಅಥವಾ ದೇವರ ಬಗೆಗಿನ ತಮ್ಮ ಭಕ್ತಿ ಭಾವವನ್ನು ವಚನಗಳ ಮೂಲಕ ವ್ಯಕ್ತಪಡಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ದೇವರ ದಾಸಿಮಯ್ಯರವರು ಅಪೂರ್ವವಾದಂತಹ ಕಾಯಕ ಜೀವಿಯಾಗಿದ್ದರು. ತಮ್ಮ ನೆಯ್ಗೆಯನ್ನು ಕಾಯಕವನ್ನು ವೃತ್ತಿಯಾಗಿ ಸ್ವೀಕರಿಸುವ ಪ್ರಭುದ್ಧತೆಯನ್ನು ಸಾಧಿಸಿದಂತಹವರು ಹಾಗೂ ಸಾಕ್ಷಾತ್ ಶಿವನಿಗೆ ಜೇಡರ ದಾಸಿಮಯ್ಯನವರು ವಸ್ತ್ರದಾನವನ್ನು ಮಾಡಿದರು ಎಂಬ ವಾಡಿಕೆ ಇದೆ ಎಂದು ಹೇಳಿದರು.
.
ಮುಂದೆ ನಾವು ಹೇಗಿರಬೇಕು ಎಂಬುದನ್ನು ನಿರ್ಧರಿಸಲು, ಹಿಂದೆ ನಮ್ಮ ಹಿರಿಯರು ಬದುಕಿದ ಹಾದಿಯನ್ನು ನೆನಪಿಸಿಕೊಂಡು ನಮ್ಮ ವರ್ತಮಾನ ಬದುಕನ್ನು ಎಚ್ಚರಿಸುವ ಪ್ರಯತ್ನವನ್ನು ವಿವಿಧ ಜಯಂತಿಯ ಮೂಲಕ ಮಾಡೋಣ ಎಂದು ತಿಳಿಸಿದರು.
ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಪರಮಪೂಜ್ಯ ಶ್ರೀ ಸ್ವಾಮಿ ಮಹಮೇದಾನಂದರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು: “ನಾವು ಮಾಡುವ ಕಾಯಕ ಯಾವಾಗಲೂ ಶಿವನು ಮೆಚ್ಚುವಂತಿರಬೇಕು. ಕೇವಲ ಸುಂದರವಾದ ಬಟ್ಟೆ ಧರಿಸುವುದರಿಂದ ಮಾನ ಉಳಿಯುವುದಿಲ್ಲ, ನಮ್ಮ ಚಾರಿತ್ರ್ಯದಿಂದ ಅದು ಸಾಧ್ಯ. ಆಂತರ್ಯದ ಶುದ್ಧಿಯಿಲ್ಲದ ಬಾಹ್ಯ ಅಲಂಕಾರ ವ್ಯರ್ಥ. ಸತ್ಯ ಪರಿಪಾಲನೆ ಮತ್ತು ಕುಶಲತೆಯಿಂದ ಕೆಲಸ ಮಾಡಿದಾಗ ಮಾತ್ರ ದೈವಾನುಗ್ರಹ ಲಭಿಸುತ್ತದೆ. ಶರಣರ ವಚನಗಳನ್ನು ಓದಿದಾಗ ಮಾತ್ರ ಬದುಕಿಗೆ ನಿಜವಾದ ಅರ್ಥ ಸಿಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ ಎನ್ ಮಲ್ಲಿಕಾರ್ಜುನ ಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂಡಿ ಸುದರ್ಶನ್ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಬಿ.ಎಸ್ ಸೋಮಶೇಖರ್, ಎಂ. ಡಿ ಲಕ್ಷ್ಮೀನಾರಾಯಣ, ಆರ್ . ಮೂರ್ತಿ, ಮಂಜುಳಾ, ಎಸ್. ದಿನೇಶ್ ಯಜಮಾನ್, ಸುಬ್ರಹ್ಮಣ್ಯ, ಅವರು ಉಪಸ್ಥಿತರಿದ್ದರು.
