ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಯೊಂದಿಗೆ ಸ್ವಉದ್ಯೋಗದತ್ತ ಗಮನಹರಿಸುವುದು ಅಗತ್ಯ: ಉದಯಕುಮಾರ್ ಡಿ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಯೊಂದಿಗೆ ಸ್ವಉದ್ಯೋಗದತ್ತ ಗಮನಹರಿಸುವುದು ಅಗತ್ಯ: ಉದಯಕುಮಾರ್ ಡಿ

ಮೈಸೂರು, ಮಾ. 26( ಕರ್ನಾಟಕ ವಾರ್ತೆ): ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಯೊಂದಿಗೆ ಸ್ವಉದ್ಯೋಗದತ್ತ ಗಮನಹರಿಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಉದಯಕುಮಾರ್ ಅವರು ಹೇಳಿದರು.

ಇಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ವಸಂತ್ ಮಹಲ್ ನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕ ಮತ್ತು ಕೆರಿಯರ್ ಮೇಳ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಜಗತ್ತು ಅತ್ಯಂತ ಸ್ಪರ್ಧಾತ್ಮಕವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ವೃತ್ತಿ ಮಾರ್ಗದರ್ಶನ ಬಹಳ ಮುಖ್ಯ. ವಿದ್ಯಾಭ್ಯಾಸದ ನಂತರ ವೃತ್ತಿ ಜೀವನವನ್ನು ಹೇಗೆ ಪ್ರಾರಂಭಿಸಬೇಕು ಅಥವಾ ವೇಗವಾಗಿ ಯಶಸ್ಸು ಗಳಿಸಲು ಯಾವ ಹಾದಿ ಹಿಡಿಯಬೇಕು ಎಂಬ ಗೊಂದಲ ಸಹಜವಾಗಿ ವಿದ್ಯಾರ್ಥಿಗಳಲ್ಲಿ ಇರುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ಕೋರ್ಸ್ ಆಧಾರಿತ ಉದ್ಯೋಗಗಳ ಬೆನ್ನತ್ತುವ ಬದಲು, ಪರ್ಯಾಯವಾಗಿ ತಮ್ಮದೇ ಆದ ಸ್ವಉದ್ಯೋಗಗಳನ್ನು ಕೈಗೊಳ್ಳಲು ಪ್ರಯತ್ನಿಸಬೇಕು. ಕೌಶಲ್ಯ, ನಿರ್ದಿಷ್ಟ ಗುರಿ ಮತ್ತು ಕ್ರಿಯಾಶೀಲತೆ ಇಲ್ಲದಿದ್ದರೆ ಇಂತಹ ಸಮ್ಮೇಳನಗಳು ವ್ಯರ್ಥವಾಗುತ್ತವೆ. , ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಹೆಚ್ಚಿನ ಸಾಧನೆ ಮಾಡಲು ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಬಿ.ಇ.ಡಿ ಕಾಲೇಜಿನ‌ ಕಿರಿಯ ರೀಡರ್
ಅಮಿತ್ ‌ ಅವರು ಮಾತನಾಡಿ “ನಮ್ಮ ಇಲಾಖೆಯ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ‘ವೃತ್ತಿ ಮೇಳ’ ಕೂಡ ಒಂದು. ದೇಶದ ಅತಿ ದೊಡ್ಡ ಸಮಸ್ಯೆ ಎಂದರೆ ಅದು ನಿರುದ್ಯೋಗ. ಆದರೆ ನಿರುದ್ಯೋಗಕ್ಕೆ ಮೂಲ ಕಾರಣ ಜನಸಂಖ್ಯೆಯಲ್ಲ, ಬದಲಾಗಿ ನಮ್ಮಲ್ಲಿರುವ ಕೌಶಲ್ಯಗಳ ಕೊರತೆ. ನಾವು ನಮ್ಮಲ್ಲಿರುವ ಮಾನವ ಸಂಪನ್ಮೂಲವನ್ನು ಅತ್ಯುತ್ತಮವಾಗಿ ಬಳಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 22 ಇಲಾಖೆಗಳ ಮಳಿಗೆಯನ್ನು ಇರಿಸಲಾಗಿತ್ತು. ವಿವಿಧ ಶಾಲಾ ಕಾಲೇಜುಗಳಿಂದ 1255 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಂತರ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಮೇಳದಲ್ಲಿ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಐಟಿಐನ ಜೂನಿಯರ್ ಟ್ರೈನಿಂಗ್ ಆಫೀಸರ್ ಅರವಿಂದ್ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ನಾಗಮ್ಮ, ಡಯಟ್ ನೋಡಲ್ ಅಧಿಕಾರಿ ಚಂದ್ರಶೇಖರ್ ಕೆ.ಎಚ್ ಹಾಗೂ ಲೆಕ್ಕ ಅಧೀಕ್ಷಕ ಮಧು ಬಿ.ಆರ್ ಅವರು ಉಪಸ್ಥಿತರಿದ್ದರು.

Share This Article
Leave a Comment