ಮದರಸಾಗಳಲ್ಲಿಯೂ ಕನ್ನಡ ಕಲಿಕೆ ಆರಂಭ

admin
2 Min Read



– ವರದಿ : ಪ್ರತಿಕ್ ಗೌಡ ಎಂ ಆರ್. –
ಬೆಂಗಳೂರು: ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಸಮುದಾಯಗಳ ನಡುವಿನ ಸಾಮರಸ್ಯವನ್ನು ಕದಡುವ ವಿಭಜಕ ರಾಜಕಾರಣ ವಿಜೃಂಭಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಭಾಷೆಯ ಮೂಲಕವೇ ಸಂವಹನ ಗಟ್ಟಿಯಾಗಬೇಕೆನ್ನುವ ಖಚಿತ ನಿಲುವಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕನ್ನಡವನ್ನು ಕಲಿಸುವ ಪ್ರಯತ್ನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮದರಸಾಗಳಲ್ಲಿ ಬೋಧಿಸುತ್ತಿರುವ ಸುಮಾರು 180 ಶಿಕ್ಷಕರುಗಳಿಗೆ ಕನ್ನಡ ಕಲಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾಷೆಯ ಮೂಲಕವಾಗಿ ಯಾವುದೇ ಸಮುದಾಯಗಳು ಅವಮಾನಕ್ಕೊಳಗಾಗಬಾರದು. ರಾಜ್ಯ ಭಾಷೆಯನ್ನು ಕಲಿತ ಯಾವುದೇ ಸಮುದಾಯ ತಾನು ವಾಸಿಸುವ ನಾಡಿನಲ್ಲಿ ಸಾಮರಸ್ಯದಿಂದ ಜೀವಿಸುವ ತನ್ನದೇ ಆದ ಚೈತನ್ಯವನ್ನು ಪಡೆಯುತ್ತದೆ. ಹಾಗಾಗಿ ಅಲ್ಪಸಂಖ್ಯಾತರು ಕನ್ನಡವನ್ನು ಕಲಿಯುವುದು ಬಹಳ ಮುಖ್ಯವಾಗುತ್ತದೆ ಎಂದರು.
ಭಾಷೆ ಮೂಲತಃ ಧಾರ್ಮಿಕವಲ್ಲ. ಅದು ಯಾವತ್ತಿಗೂ  ಜಾತ್ಯಾತೀತವೇ ಎಂದ ಬಿಳಿಮಲೆ, ಅಕ್ಬರನ ತಾಯಿ ಹಮೀದ ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ ಇತಿಹಾಸವನ್ನು ನೆನೆದರು. ಭಾಷಾ ಸಾಮರಸ್ಯದ ಜೊತೆಗೆ ಸಾಂಸ್ಕೃತಿಕ ಸಾಮರಸ್ಯ ಏರ್ಪಡುವುದು ಬೇರೆಲ್ಲಾ ವಿಷಯಗಳಿಗಿಂತ ದೊಡ್ಡದು ಎಂದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿದ್ಯಾರ್ಥಿ ಸಮೂಹದ ಉಪಯೋಗಕ್ಕಾಗಿ ಕನ್ನಡ ಭಾಷಾ ಸಾಮರಸ್ಯದ ನೆಲೆಗಳು ಎನ್ನುವ ಶೀರ್ಷಿಕೆಯಡಿಯಲ್ಲಿ ನೂರು ಪುಸ್ತಕಗಳನ್ನು ಹೊರ ತರುವ ಕೆಲಸ ಮಾಡುತ್ತಿದೆ. ಅತಿ ಶೀಘ್ರದಲ್ಲಿ ಇವು ಲೋಕಾರ್ಪಣೆಗೊಳ್ಳಲಿವೆ ಎಂಬ ಮಾಹಿತಿಯನ್ನು ನೀಡಿದರು.
ಉರ್ದು ಅಕಾಡೆಮಿಗೆ ಲಭ್ಯವಿರುವ ಸ್ವಾಯತ್ತತೆಯನ್ನು ಗೌಣವಾಗಿಸದೆ ಅದನ್ನು ಮುಖ್ಯವಾಹಿನಿಯಲ್ಲಿ ನಿರಂತರವಾಗಿ ಉಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ತರಬೇಕೆಂದು ಬಿಳಿಮಲೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಅವರನ್ನು ಆಗ್ರಹಿಸಿದರು. ಬೇರೆಲ್ಲಾ ಭಾಷೆಗಳ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಗುರುತಿಸಿಕೊಂಡು ತಮ್ಮ ಕಾರ್ಯಕ್ರಮಗಳ ಮೂಲಕ ನಾಗರಿಕರ ಗಮನ ನಿರಂತರವಾಗಿ ಸೆಳೆಯುತ್ತಿದ್ದು, ಉರ್ದು ಅಕಾಡೆಮಿಯ ಅನುಪಸ್ಥಿತಿ ತಮ್ಮನ್ನು ಪದೇ ಪದೇ ಕಾಡುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಇಲಾಖೆಯ ಕಾರ್ಯಕ್ರಮಗಳಲ್ಲಿ ಉರ್ದು ಅಕಾಡೆಮಿಯೂ ಭಾಗವಹಿಸಿದಲ್ಲಿ ಹೆಚ್ಚಿನ ಜನಪ್ರಿಯತೆ ದೊರೆಯುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮನವಿಯನ್ನು ಪರಿಗಣಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಹಾಗೂ ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಡಾ. ಮಾಜುದ್ದೀನ್ ಖಾನ್ ಸೇರಿ ಮತ್ತಿತರರು ಹಾಜರಿದ್ದರು.

Share This Article
Leave a Comment