ಪಬ್ಲಿಕ್ ಅಲರ್ಟ್
ಮೈಸೂರು: ಉಪನಿಷತ್ತಿನ ಪ್ರಕಾರ ಅಂಧಕಾರವನ್ನು ಹೋಗಲಾಡಿಸುವವರೇ ಗುರು. ಅಜ್ಞಾನದಿಂದ ಸುಜ್ಞಾನದ ಕಡೆಗೆ ವಿದ್ಯಾರ್ಥಿನಿಯರನ್ನು ಕರೆದೊಯ್ಯುವುದು ಗುರುವಿನ ಜವಾಬ್ದಾರಿ ಎಂದು ನಿವೃತ್ತ ಪ್ರಾಂಶುಪಾಲ ಡಾ.ಟಿ.ಕೆ.ಬೋಪಯ್ಯ ಅಭಿಪ್ರಾಯಪಟ್ಟರು.
ಮಹಾರಾಣಿ ಮಹಿಳಾ ಕಲ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕ. ಸಾಧನೆಯ ಶಿಖರಕ್ಕೇರಿದ ಸರ್ವಪಲ್ಲಿ ರಾಧಾಕೃಷ್ಣನ್, ಮದರ್ ತೆರೇಸಾ, ಮನಮೋಹನ್ ಸಿಂಗ್, ರಾಘವೇಂದ್ರನಾಥ ಟ್ಯಾಗೋರ್, ಕಿರಣ್ ಬೇಡಿ ಅವರೆಲ್ಲರೂ ಅಧ್ಯಾಪಕರಾಗಿದ್ದವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ ಮೂರ್ತಿ ಮಾತನಾಡಿ “ಬದುಕಿನಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳುವುದು ಮುಖ್ಯ. ಶಿಸ್ತಿನಿಂದ ಮಾತ್ರ ಸಾಧನೆ ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಬಿಎ ಮತ್ತು ಬಿಸಿಎ ವಿದ್ಯಾರ್ಥಿನಿಯರಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ಸಮಿತಿಗಳ ಸಂಚಾಲಕರು ತಮ್ಮ ವಿಭಾಗ ಮತ್ತು ಸಮಿತಿಯ ಪರಿಚಯವನ್ನು ವಿದ್ಯಾರ್ಥಿನಿಯರಿಗೆ ಮಾಡಿಕೊಟ್ಟರು.
ಕಾಲೇಜಿನ ಪತ್ರ ಅಂಕಿತ ವ್ಯವಸ್ಥಾಪಕ ಕೆ.ವೆಂಕಟೇಶ್, ಐ.ಕ್ಯೂ.ಎ.ಸಿ ಸಂಯೋಜಕ ಡಾ.ಎನ್.ಪ್ರಕಾಶ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ.ಕೆ.ಎಸ್.ಭಾಸ್ಕರ್, ಸಮಿತಿಯ ಖಜಾಂಚಿ ಡಾ.ಟಿ.ನಾಗವೇಣಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಅಶ್ವಿನಿ, ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿನಿ ಅಧ್ಯಕ್ಷ ಹರ್ಷಿತ ಉಪಸ್ಥಿತರಿದ್ದರು.
