ಶಿಕ್ಷಕರು ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ನೈತಿಕವಾಗಿ ಬದುಕುವ ಪಾಠ ಕಲಿಸಿ: ಎನ್ ಚಲುವರಾಯಸ್ವಾಮಿ

Chethan
3 Min Read

ಪಬ್ಲಿಕ್‌ ಅಲರ್ಟ್

ಮಂಡ್ಯ: ಶಿಕ್ಷಕರು ಶೈಕ್ಷಣಿಕವಾಗಿ ಪಾಠ ಮಾಡುವುದು ಸಾಮಾನ್ಯ ಆದರೆ ವಿದ್ಯಾರ್ಥಿಗಳಿಗೆ ಇಂದಿನ ಸಮಾಜದಲ್ಲಿ ಎದುರಿಸಬೇಕಿರುವ ಸವಾಲುಗಳು ಹಾಗೂ ಸದಾ ನೈತಿಕತೆಗೆ ಆದ್ಯತೆ ನೀಡಿ ಜೀವನ ನಡೆಸಬೇಕು ಎಂಬ ಪಾಠ ಹೇಳಿಕೊಡಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಇಂದು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿ ದಿನ ಅರ್ಧಗಂಟೆ ಜೀವನದ ಮೌಲ್ಯಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಎದುರಿಸಬೇಕಿರುವ ಸವಾಲುಗಳು,ಸವಾಲು ಎದುರಿಸಲು ಬೇಕಿರುವ ದೈರ್ಯ, ದೃಢತೆ, ನಾಯಕತ್ವ ಗುಣಗಳನ್ನು ಬೆಳಸಿ ಅವರನ್ನು ದೇಶದ ಸತ್ಪ್ರಜೆಗಳಾಗಿ ಸಜ್ಜುಗೊಳಿಸಬೇಕು ಎಂದರು.

ಮಕ್ಕಳಿಗೆ ತಂದೆ, ತಾಯಿಯ ನಂತರ ಅವರ ತಪ್ಪುಗಳನ್ನು ತಿದ್ದಿ, ತಿಳಿ ಹೇಳುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ವಿದ್ಯಾರ್ಥಿಗಳು ಮಾಡುವ ಸಾಧನೆಯ ಹಿಂದೆ ಗುರುಗಳ ಪರಿಶ್ರಮವಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿದ ನಂತರ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗಿಗಳಾಗಬಹುದು‌ ಅವರನ್ನು ಉದ್ಯೋಗಸ್ಥರನ್ನಾಗಿ ಮಾಡುವುದರ ಜೊತೆಗೆ ಅವರಿಗೆ ಸಂಸ್ಕಾರ ನೀಡಿ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ. ರವಿಕುಮಾರ್ ಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ಕೆಲವು ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿರುವುದು ನಿಜಕ್ಕೂ ವಿಪರ್ಯಾಸ. ಸರ್ಕಾರಿ ಶಾಲೆಯಿಲ್ಲವಾದರೆ ಅನೇಕ ಸರ್ಕಾರಿ ಶಿಕ್ಷಕರಿಗೆ ಉದ್ಯೋಗವಿರುವುದಿಲ್ಲ ದಯಮಾಡಿ ಶಿಕ್ಷಕ ವೃಂದದವರು ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಮಹತ್ತರ ಪಾತ್ರ ನಿಭಾಯಿಸಿ, ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಗಮನವಹಿಸಿ ಎಂದರು.

ಶಿಕ್ಷಕರಿಗೆ ಅನುಕೂಲವಾಗಲು ಜಿಲ್ಲೆಯಲ್ಲಿನ ಗುರುಭವನ ಅಭಿವೃದ್ಧಿ ಪಡಿಸಲು ಶಿಕ್ಷಣ ಸಚಿವರ ಸಹಕಾರದೊಂದಿಗೆ 50 ಲಕ್ಷವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ. ಶೀಘ್ರದಲ್ಲೇ ಜಿಲ್ಲೆಯಲ್ಲಿನ ಗುರು ಭವನ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ ಶಿಕ್ಷಕರು ಲೋಕದ ಕಣ್ಣುಗಳಿದ್ದ ಆಗೆ ಅವರಿಂದ ವಿದ್ಯಾರ್ಥಿಗಳ ಬದುಕು, ಭವಿಷ್ಯ ಬೆಳಗುತ್ತದೆ. ಶಿಕ್ಷಕರ ಮಾರ್ಗದರ್ಶನವಿಲ್ಲದ ಮಕ್ಕಳ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂಕಗಳಿಸಲು, ಪರೀಕ್ಷೆಯಲ್ಲಿ ಉತ್ತಿರ್ಣರಾಗಲು ಹಾಗೂ ಪ್ರಥಮ ಸ್ಥಾನ ಗಳಿಸುವುದರ ಬಗ್ಗೆ ಹೇಗೆ ತರಬೇತಿ ನಿಡುತ್ತಿರೋ, ಹಾಗೆಯೇ ಬದುಕಿನ ಏಳು – ಬೀಳುಗಳನ್ನ ದಾಟಿ ಭವಿಷ್ಯ ರೂಪಿಸಲು ಅಗತ್ಯವಾದ ಜೀವನ ಮೌಲ್ಯಗಳನ್ನು ಸಹ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡಬೇಕು ಎಂದು ಹೇಳಿದರು.

ಶಿಕ್ಷಣ ಕ್ಷೇತ್ರ ಶ್ರೇಷ್ಠವಾದ ಕ್ಷೇತ್ರವಾಗಿದ್ದು, ಶಿಕ್ಷಕರ ವೃತ್ತಿ ಬಹಳ ಜವಾಬ್ದರಿಯುತವಾದ ವೃತ್ತಿ, ಪ್ರತಿಯೊಬ್ಬ ಶಿಕ್ಷಕರು ನೈತಿಕತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಉದ್ಧಾರಕ್ಕಾಗಿ ಶ್ರಮಿಸಿ ಮತ್ತು ಸಮಾಜಕ್ಕೆ ಮಾದರಿಯಾಗಿ ಎಂದು ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಯಿತು ಮತ್ತು ನವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷ ಎಂ. ವಿ ಪ್ರಕಾಶ್, ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರಾದ ಸಿ.ಡಿ ಗಂಗಾಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ. ಚಲುವಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ವಾಸುಕಿ ಪ್ರಸನ್ನ ಹಾಗೂ ಜಿಲ್ಲಾ ಪ್ರಾಥಮಿಕ ಸರ್ಕಾರಿ ಶಿಕ್ಷಣ ಸಂಘದ ಅಧ್ಯಕ್ಷ ಎಚ್. ಡಿ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment