ದಸರಾ: ಮೇಯರ್ ಗೆ ಇಲ್ಲ ಕುದುರೆ ಸವಾರಿ ಭಾಗ್ಯ?

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು:ನಗರ ಪಾಲಿಕೆಗಳ ಚುನಾವಣೆ ನಡೆಯದೇ ಇರುವುದರಿಂದ, ಈ ಬಾರಿಯು ಜಂಬೂಸವಾರಿ ಮೆರವಣಿಗೆಯಲ್ಲಿ ಎರಡನೇ ಬಾರಿಗೆ ಮೈಸೂರು ಮೇಯರ್ (ಪ್ರಥಮ ಪ್ರಜೆ) ಇಲ್ಲದೇ , ಪ್ರಾದೇಶಿಕ ಆಯುಕ್ತರೇ ಕುದುರೆ ಸವಾರಿ ಮಾಡಲಿದ್ದಾರೆ. 
ಪ್ರತಿವರ್ಷ ನಡೆಯುವ ವಿಶ್ವ ವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಮೈಸೂರಿನ ಪ್ರಥಮ ಪ್ರಜೆಯಾದ ಮಹಾನಗರ ಪಾಲಿಕೆಯ ಮೇಯರ್ ಕುದುರೆ ಸವಾರಿ ಮಾಡುವ ಭಾಗ್ಯ ದೊರೆಯುತ್ತದೆ. ಆದರೆ, ಪಾಲಿಕೆಯ ಯಾವ ಚುನಾಯಿತ ಪ್ರತಿನಿಧಿಗೂ ಇಲ್ಲದೇ ಇರುವುದರಿಂದ ಎರಡನೇ ಬಾರಿಗೆ , ಲಕ್ಷಾಂತರ ಜನರ ಮುಂದೆ ಮೇಯರ್ ಕುದುರೆ ಸವಾರಿ ಮಾಡುವ ಯೋಗ ಕೈ ತಪ್ಪಿದೆ. ನಗರ ಪಾಲಿಕೆಯ ಚುನಾವಣೆ ಎರಡು ವರ್ಷದಿಂದ ನಡೆಯದೇ ಇರುವುದರಿಂದ ಮೈಸೂರಿನ ಪ್ರಥಮ ಪ್ರಜೆ ಆಯ್ಕೆಯಾಗಿಲ್ಲ. ಇದರಿಂದ ಕುದುರೆ ಸವಾರಿ ಭಾಗ್ಯ, ಗಜಪಡೆಗೆ ಪುಷ್ಪಾರ್ಚನೆ ಸೌಭಾಗ್ಯ ತಪ್ಪಿದೆ.
ಮೈಸೂರು ಮಹಾನಗರ ಪಾಲಿಕೆಯ 41 ವರ್ಷಗಳ ಇತಿಹಾಸದಲ್ಲಿ  ಮೈಸೂರಿನ ಪ್ರಥಮ ಪ್ರಜೆ (ಮೇಯರ್)  ಇಲ್ಲದೆ ಜಂಬೂ ಸವಾರಿ ನಡೆಯುತ್ತಿರುವುದು  ಇದು ಎರಡನೇ ಬಾರಿ ಆಗಿದೆ. ಕಳೆದ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೀಸಲಾತಿ ನೀಡದೇ ಇದ್ದದರಿಂದ ಚುನಾವಣೆ ನಡೆಯಲಿಲ್ಲ. ಆದರೆ, ಬಾರಿಯಾದರೂ ಚುನಾವಣೆ ನಡೆಯಲಿದೆ ಅಂದು ಕೊಂಡಿದ್ದ ಸ್ಥಳೀಯ ಪ್ರತಿನಿಧಿಗಳಿಗೆ ಈ ಬಾರಿಯು ಚುನಾವಣೆ ನಡೆಯಲದೆ ಇರುವುದರಿಂದ ಬೇಸರವಾಗಿದೆ. ಮೇಯರ್ ಕುದುರೆ ಸವಾರಿ ಮಾಡುವ ಹಿನ್ನೆಲೆಯಲ್ಲಿ ಪ್ರತಿ ಬಾರಿ ದಸರಾ ವೇಳೆ ಪಾಲಿಕೆಯ ಮೇಯರ್ ಗೆ ಅವರಿಗೆ ಅಶ್ವಾರೋಹಿ ದಳದ ಪೊಲೀಸರು ಕುದುರೆ ಸವಾರಿ ಬಗ್ಗೆ ತರಬೇತಿ ನೀಡಿ, ಕುದುರೆ ಸವಾರಿಗೆ ಅಣಿಗೊಳಿಸುತ್ತಿದ್ದರು. ಜಂಬೂಸವಾರಿ ಮೆರವಣಿಗೆ ವೇಳೆಯಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ನಂತರ, ವೇದಿಕೆಯಿಂದ ಕೆಳಗಿಳಿಯುತ್ತಿದ್ದ ಮೇಯರ್ ಕುದುರೆ ಏರಿ ಲಕ್ಷಾಂತರ ಜನರಿಗೆ ಕೈ ಬೀಸಿ ಹೋಗುತ್ತಿದ್ದರು. ಆದರೆ ಎರಡು ವರ್ಷದಿಂದ  ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಪ್ರಾದೇಶಿಕ ಆಯುಕ್ತರೇ ಆಡಳಿತಾಧಿಯಾಗಿರುವುದರಿಂದ ಕಳೆದ ವರ್ಷದಂತೆ ಇವರೇ ಕುದುರೆ ಸವಾರಿ ಮಾಡುವರು.
1983ರಲ್ಲಿ ನಗರಪಾಲಿಕೆ ಅಸ್ತಿತ್ವಕ್ಕೆ ಬಂದಾಗ ಮೊದಲ ಮೇಯರ್ ಆಗಿದ್ದ ವಿಶ್ವನಾಥ್ ಅವರು ತಾವಾಗಿಯೇ ಜಂಬೂಸವಾರಿ ಮೆರವಣಿಗೆಯಲ್ಲಿ ಕುದುರೆ ಮೇಲೆರಲು ನಿರಾಕರಿಸಿದರು.ನಂತರ 1999ರಲ್ಲಿ ಮೇಯರ್ ಆಗಿದ್ದ ಶ್ರೀಕಂಠಯ್ಯ ಅವರು ಸಹ ಕುದುರೆ ಏರದೇ , ಎಲ್ಲಾ ಪಾಲಿಕೆ ಸದಸ್ಯರೊಂದಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದನಂತರ  ಎಲ್ಲ ಮೇಯರ್‌ಗಳು ಅಂಬಾರಿ ಹೊತ್ತ ಗಜಪಡೆಗೆ ಪುಷ್ಪಾರ್ಚನೆ ಮಾಡಿದ ಬಳಿಕ, ಕುದುರೆ ಸವಾರಿ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಇಲ್ಲ : 2020ರಲ್ಲಿ ಕೋವಿಡ್ ಆರ್ಭಟ ಜೋರಾಗಿದ್ದರಿಂದ, ಅರಮನೆ ಆವರಣದಲ್ಲಿ ಸರಳವಾಗಿ ದಸರಾ ಮಾಡಲಾಯಿತು. ಆದರೆ,ಯಾವುದೇ ಮೆರವಣಿಗೆ ಇಲ್ಲದೇ ಇದ್ದದರಿಂದ ಮೇಯರ್ ಕುದುರೆ ಸವಾರಿಗೆ ಅವಕಾಶ ಸಿಗಲಿಲ್ಲ.

ಬಾಕ್ಸ್‌
ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯದೇ ಇರುವುದರಿಂದ, ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲ. ಹೀಗಾಗಿ ವಿಶ್ವ ವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಮೇಯರ್ ಕುದುರೆ ಏರುವ ಭಾಗ್ಯ ಎಲ್ಲಿದೆ?
-ಶಿವಕುಮಾರ್‌, ಮಾಜಿ ಮೇಯರ್
ಎಂದು ಪ್ರಶ್ನಿಸಿದರು.

Share This Article
Leave a Comment