ಪಬ್ಲಿಕ್ ಅಲರ್ಟ್
ಮೈಸೂರು: ರಾಜ್ಯದಲ್ಲಿ ಗಣಿಸಂಪತ್ತು ಲೂಟಿಯಿಂದ ಸರ್ಕಾರಕ್ಕೆ ಸುಮಾರು ೧.೫ ಲಕ್ಷ ಕೋಟಿ ರೂ. ನಷ್ಟವಾಗಿದೆ. ಇದನ್ನು ತಪ್ಪಿತಸ್ಥ ಅಧಿಕಾರಿಗಳು, ಲೂಟಿ ಮಾಡಿದ ಸಂಸ್ಥೆ, ವ್ಯಕ್ತಿಗಳಿಂದ ಭರಿಸಿಕೊಳ್ಳಬೇಕೆಂದು ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದ ಸಮಿತಿ ವರದಿ ನೀಡಿದೆ. ಇದನ್ನು ಸರ್ಕಾರ ತಪ್ಪದೇ ಜಾರಿಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಆಗ್ರಹಿಸಿದರು.
ಜನಾಂದೋಲನ ಮಹಾ ಮೈತ್ರಿ ವತಿಯಿಂದ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಎಚ್.ಕೆ. ಪಾಟೀಲರ ಸಮಿತಿ ಸಿಎಂ ಸಿದ್ದರಾಮಯ್ಯ ಅವರಿಗೆ ಏಳು ಪುಟಗಳ ಸುದೀರ್ಘ ವರದಿ ನೀಡಿದೆ. ಅಧಿಕಾರಸ್ಥರು, ರಾಜಕಾರಣಿಗಳು, ಮೊದಲಾದವರ ಅಕ್ರಮ ಕೂಟ ಗಣಿಸಂಪತ್ತು ಲೂಟಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ನಷ್ಟದ ಹಣ ವಸೂಲಾತಿಗಾಗಿ ಪ್ರಾಮಾಣಿಕ ಹಾಗೂ ದಕ್ಷ ರಿಕವರಿ ಆಯುಕ್ತರನ್ನು ನೇಮಕ ಮಾಡಿ ಅವರಿಗೆ ಸ್ಪಷ್ಟ ಹಾಗೂ ಹೆಚ್ಚಿನ ಅಧಿಕಾರ ನೀಡಬೇಕು. ತ್ವರಿತ ವಿಲೇವಾರಿ ನ್ಯಾಯಾಲಯ ಸ್ಥಾಪಿಸಬೇಕು. ಈಗಿನ ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ೧೩ ಡಂಪ್‌ಗಳನ್ನು ಸಂಡೂರು ತಾಲೂಕಿನಲ್ಲಿ ಹರಾಜು ಮಾಡಿದ್ದು, ಇವರ ಬದಲಿಗೆ ದಕ್ಷ ಹಾಗೂ ಪ್ರಾಮಾಣಿಕ ಸಚಿವರೊಬ್ಬರನ್ನು ಗಣಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಇದನ್ನು ನಿರ್ಲಕ್ಷಿಸಿದಲ್ಲಿ ಈ ಮೊದಲಿನ ರೀತಿ ದೊಡ್ಡ ಜನಾಂದೋಲನವನ್ನೇ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿ, ಈ ಹಿಂದೆಯೂ ತಮ್ಮ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ಹಲವರು ಜೈಲು ಪಾಲಾದುದನ್ನು ಉದಾಹರಿಸಿದರು. ಉಗ್ರ ನರಸಿಂಹೇಗೌಡ, ಗಣೇಶ್ ಹಾಜರಿದ್ದರು.
ಗಣಿ ಲೂಟಿಯಿಂದ ೧.೫ಕೋಟಿ ರೂ. ನಷ್ಟ: ಎಸ್.ಆರ್.ಹಿರೇಮಠ್

Leave a Comment
Leave a Comment