ಪಬ್ಲಿಕ್ ಅಲರ್ಟ್
ಮೈಸೂರು: ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಕುರಿತು ಬರೆದ ಪತ್ರ ಬರೆದಿದ್ದನ್ನು ನೆಪ ಮಾಡಿಕೊಂಡು ಅವರ ತೇಜೋವಧೆ ಮಾಡಿ, ಅವಹೇಳನಾಕಾರಿಯಾಗಿ ನಿಂದಿಸುತ್ತಿರುವುದನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿ ವತಿಯಿಂದ ಪುರಭವನದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಆರ್‌ಎಸ್‌ಎಸ್ ಆರಂಭವಾದ ದಿನದಿಂದಲೂ ತಾರತಮ್ಯದ ಚಾತುರ್ವರ್ಣ ವ್ಯವಸ್ಥೆಯನ್ನು ಮರುಸ್ಥಾಪನೆಗಾಗಿ ದೇಶದ ಸಂವಿಧಾನದ ಸಮಾನತೆಯ ಆಶಯಗಳನ್ನು ವಿರೋಧಿಸುತ್ತಾ ಬಂದಿದೆ. ದೇವರು, ಜಾತಿ, ಧರ್ಮ, ಜಾತಿ ಹೆಸರಿನಲ್ಲಿ ಸುಳ್ಳು ಗೋಪುರ ಕಟ್ಟುತ್ತಾ ತನ್ನ ಕ್ರಮಿನಲ್ ಚಟುವಟಿಕೆಗಳನ್ನು ಕಾನೂನು ಬದ್ದಗೊಳಿಸಲು ಹಿಂದೂ, ಮುಸ್ಲಿಂ, ಕ್ರೈಸ್ತ ದಲಿತ ಎಂದು ವಿಭಜಿಸಿ ಸಾಮೂಹಿಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಸಾಮಾಜಿಕ ಜಾಲತಾಣ, ಸಭೆ, ಸಮಾರಂಭ, ಮಾಧ್ಯಮಗಳಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅವಹೇಳನ ಮಾಡುತ್ತಾ ದ್ವೇಷ ಭಾಷಣಗಳ ಮೂಲಕ ಸಾರ್ವಜನಿಕ ನೆಮ್ಮದಿಗೆ ಭಂಗ ತಂದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಆರ್‌ಎಸ್‌ಎಸ್ ಸಂಘ ಪರಿವಾರ ಕಾರ್ಯಕರ್ತರನ್ನು ಬಂಧಿಸಿ ಗಡಿಪಾರು ಮಾಡಬೇಕು. ದಲಿತ ಸಮುದಾಯದ ಸಚಿವರನ್ನು ಅವಮಾನಿಸಿರುವ ಕಿಡಿಗೇಡಿಗಳನ್ನು ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಸತೀಶ್, ಶಂಬುಲಿಗ ಸ್ವಾಮಿ, ಹಾರೋಹಳ್ಳಿ ಸುರೇಶ್, ಶಿವಮೂರ್ತಿ, ಬಂಡಿಪಾಳ್ಯ ವಿಜಯಕುಮಾರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್, ಸಬೀರ್, ರಫೀ, ನಯೀಮ್ ಮತ್ತಿತರರು ಪಾಲ್ಗೊಂಡಿದ್ದರು.
