ಎಲ್ಲರ ಮೇಲೂ ತನಿಖೆಯಾಗಲಿ: ಸಂಸದ ಯದುವೀರ್

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು:  ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಎಲ್ಲರ ಮೇಲೂ ತನಿಖೆಯಾಗಲಿ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ಈ ಹಿಂದೆ ಹೇಳಿದ್ದೆವು. ಅದರಂತೆ ದಿನೇಶ್‌ಕುಮಾರ್ ಅವರ ಬಂಧನವಾಗಿದೆ. ಅವರೊಬ್ಬರ ಬಂಧನವಾದರೆ ಸಾಲದು, ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ತನಿಖೆಯಾಗಬೇಕಿದೆ ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣದಲ್ಲಿ ತನಿಖೆಯಿಂದ ಈಗಾಗಲೇ ಸತ್ಯ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇನ್ನು ಏನು ಬೇಕಾದರೂ ತನಿಖೆ ಮಾಡಲಿ. ಧಾರ್ಮಿಕ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಎಂದು ಜನ ಹೇಳುತ್ತಿದ್ದಾರೆ. ತನಿಖೆಗೆ ನಮ್ಮ ವಿರೋಧ ಇಲ್ಲ. ಆದರೆ ತನಿಖೆ ವರದಿ ಬಿಡುಗಡೆ ಮಾಡಲಿ ಎಂದರು.
ಕುರುಬ ಜನಾಂಗವನ್ನು ಎಸ್ಟಿಗೆ ಸೇರಿಸುವ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಯಾಕೆ ಈ ರೀತಿಯ ನಿಲುವು ತೆಗೆದುಕೊಳ್ಳುತ್ತಿದೆಯೋ ಗೊತ್ತಿಲ್ಲ. ಸಂವಿಧಾನದ ಆಶಯದಂತೆ ನಾವು ನಡೆಯಬೇಕು. ಅದಕ್ಕೆಲ್ಲ ಕಾನೂನಿದೆ. ಏಕಪಕ್ಷೀಯ ನಿರ್ಧಾರ ಮಾಡಬಾರದು ಎಂದರು.
ಕ್ರಿಶ್ಚಿಯನ್ ಕಾಲಂನಲ್ಲಿ ಹಿಂದು ಉಪ ಜಾತಿಗಳ ಹೆಸರು ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಇದು ಸರಿಯಲ್ಲ, ಹಿಂದೆ ಈ ರೀತಿ ಜಾತಿ ಹೆಸರು ಇರಲಿಲ್ಲ, ಯಾರನ್ನೋ ಮೆಚ್ಚಿಸುವ ಸಲುವಾಗಿ ಹೊಸ ಜಾತಿ ಸೃಷ್ಟಿಯಾಗುತ್ತಿದೆ. ಈಗಾಗಲೇ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಯಾವುದೇ ಕಾರಣಕ್ಕೂ ಹೊಸ ಜಾತಿಗಳ ಸೇರ್ಪಡೆ ಒಪ್ಪುವುದಿಲ್ಲ ಎಂದರು.
ಕೆ.ಆರ್.ಮೊಹಲ್ಲಾದಲ್ಲಿ ದರ್ಗಾ ವಿವಾದ ಕುರಿತು ಪ್ರತಿಕ್ರಿಯಿಸಿ, ದಾಖಲೆಯಲ್ಲಿ ಏನಿದೆ ನೋಡಬೇಕಿದೆ. ಆ ಬಗ್ಗೆ ನಾನು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.

Share This Article
Leave a Comment