ನಗರದಲ್ಲಿ ಸಂಭ್ರಮದ ಮಹಿಷ ದಸರಾ ಆಚರಣೆ 

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಸಡಗರ, ಸಂಭ್ರಮದ ನಡುವೆ ವಿಜೃಂಭಣೆಯಿಂದ ಮಹಿಷ ದಸರಾ ಆಚರಣೆ ಮಾಡಲಾಯಿತು.
ನಗರದ ಪುರಭವನದ ಆವರಣದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಬುಧವಾರ ಕಂಚಿನ ಮಹಿಷ, ಬುದ್ಧ, ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪೀಠಿಕೆಯನ್ನು ಹಾಡಿನ ಮೂಲಕ ಓದಲಾಯಿತು. ಇದಕ್ಕೂ ಮೊದಲು ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿ ಬಳಿಗೆ ತೆರಳಿದ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರು ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಫಾರ್ಚನೆ ಮಾಡಿ ಗೌರವ ಸಲ್ಲಿಸಿ ವೇದಿಕೆಗೆ ಆಗಮಿಸಿದರು.
ಮೈಸೂರಿನ ಯಾವುದಾದರೊಂದು ಪ್ರಮುಖ‌ ಸ್ಥಳದಲ್ಲಿ ಅಶೋಕ ಪುತ್ಥಳಿ ಸ್ಥಾಪಿಸಬೇಕು, ಮೈಸೂರು  ದಸರಾ ಆಚರಣೆ  ವೇಳೆ ಮಹಿಷ ಪ್ರತಿಮೆಗೂ ಸರ್ಕಾರದ ವತಿಯಿಂದ ಪುಷ್ಪಾರ್ಚನೆ ಮಾಡಬೇಕು, ಮೈಸೂರು ಹೆಸರನ್ನು ಮಹಿಶೂರು ಎಂದು ಬದಲಾಯಿಸಬೇಕು ಎಂಬ ಮೂರು ನಿರ್ಣಯಗಳನ್ನು ಇದೇ ವೇಳೆ ಒಕ್ಕೋರಲಿನಿಂದ  ಕೈಗೊಳ್ಳಲಾಯಿತು.
ನಗರದ ಪುರಭವನದ ಆವರಣದಲ್ಲಿ ಬುಧವಾರ  ಮಹಿಷಾ ದಸರಾ ಆಚರಣಾ ಸಮಿತಿಯಿಂದ ನಡೆದ ಮಹಿಷ ಮಂಡಲೋತ್ಸವ  ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಜ್ಞಾನಪ್ರಕಾಶ್ ಸ್ವಾಮೀಜಿ, ಸರ್ಕಾರ ದಸರಾ ಆಚರಣೆಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಯಾವ್ಯಾವುದೋ ಸಂಭ್ರಮ ಮಾಡುತ್ತಿದೆ. ಈ ನೆಲದ ಮೂಲ ನಿವಾಸಿ ಮಹಿಷಾನನ್ನು ಯಾಕೇ ಸ್ಮರಿಸುವುದಿಲ್ಲ. ಮಹಿಷಾನ ಹೆಸರಿನಲ್ಲಿ ವಿಚಾರ ಸಂಕಿರಣ ಯಾಕೇ ಮಾಡಲಾಗುವುದಿಲ್ಲ ಎಂದರು.
ನಾಡಹಬ್ಬಕ್ಕೆ ಖರ್ಚು ಮಾಡುವುದು ತೆರಿಗೆ ಹಣವಾದ್ದರಿಂದ ಮಹಿಷಾನನ್ನು ಸ್ಮರಿಸಬೇಕು. ಸರ್ಕಾರದ ವತಿಯಿಂದಲೇ ಮಹಿಷಾ ದಸರಾ ಆಚರಿಸಬೇಕು ಎಂದು ಒತ್ತಾಯಿಸಿದರು.
ಈಚೆಗೆ ಲೇಖಕ ಕೃಷ್ಣಮೂರ್ತಿ ಅವರ ಮಹಿಷ ಮರ್ದಿನಿ ಕೃತಿ ಬಿಡುಗಡೆಯಾಗಿದೆ. ಗೆಜೆಟಿಯರ್, ಬ್ರಿಟಿಷರ್ ಲೇಖಕರು ಬರೆದಿರುವುದು ಸುಳ್ಳು. ಎಮ್ಮೆಯಿಂದ ಮೈಸೂರಿಗೆ ಹೆಸರು ಬಂದಿದೆ ಎಂದು ಉಲ್ಲೇಖಿಸಿದ್ದಾರೆ. ಹಾಗಾದರೆ ಎಮ್ಮೆ ಸಾಕುತ್ತಿದ್ದವರು ಯಾರು? ಕೋಣ ಯಾರ ಸಂಕೇತ? ಎಂದು ಪ್ರಶ್ನಿಸಿದರು. 
ಮೈಸೂರು ಮಹಾರಾಜರನ್ನು ಮಹಿಷಾ ಮಂಡಲಾಧೀಶ ಬಹುಪರಾಕ್ ಎನ್ನಲಾಗುತ್ತದೆ. ಮಹಾರಾಜರು ಬರೆದ ಪತ್ರಗಳಲ್ಲಿ ಮಹಿಷಾಪುರವಾಸಿ ಎಂದು ಉಲ್ಲೇಖಿಸಿದ್ದಾರೆ. ಮಹಾರಾಣಿಯನ್ನು ಪಟ್ಟದ ಮಹಿಷಿ ಎನ್ನುತ್ತಿದ್ದರು. ಇವುಗಳೆಲ್ಲ ಸುಳ್ಳೇ? ಯಾವುದನ್ನೂ ಸೃಷ್ಟಿ ಮಾಡಬೇಕಾದರೂ ದಾಖಲೆ ಇರಬೇಕು. ಚರಿತ್ರೆಯನ್ನು ದಮನ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಬಾಬಾ ಸಾಹೇಬ ಬಿ.ಆರ್. ಅಂಬೇಡ್ಕರ್ ಅವರು ಭಾರತದ ಇತಿಹಾಸ ಮಹಿಳೆಯರ ಮಕ್ಕಳನ್ನು ರಂಜಿಸುವ ಕತೆ ಎಂದು ಹೇಳಿದ್ದಾರೆ. ೧೨ನೇ ಶತಮಾನದಲ್ಲಿ ವಚನಕಾರರು ವೇದ, ಶಾಸ್ತ್ರ ಪುರಾಣವನ್ನು ಕಟುವಾಗಿ ಟೀಕೆಗೆ ಒಳಪಡಿಸಿದ್ದಾರೆ.  ಮಹಿಷ ಮರ್ದಿನಿ ಕೃತಿಯ ವಿರೋಧ ಮಾಡುತ್ತಿಲ್ಲ. ಆ ಕೃತಿಯ ಬಗ್ಗೆ ಚರ್ಚೆ ಮಾಡಲಿಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಸಿದ್ದಸ್ವಾಮಿ, ಮಹಿಷಾಸುರ ಮೈಸೂರು ಅಸ್ಮಿತೆ. ಮೌಢ್ಯತೆಯ ವಿರೋಧಿ. ಯಾರೊಂದಿಗೂ ವೈರತ್ವ ತಾಳಲು ಮಹಿಷಾ ದಸರಾ ಆಚರಿಸುತ್ತಿಲ್ಲ ನಮ್ಮ ಅಸ್ತಿತ್ವ ಕಂಡುಕೊಳ್ಳಲು ಆಚರಿಸುತ್ತಿದ್ದೇವೆ ಎಂದರು. 
ನಿವೃತ್ತ ಡಿಸಿಪಿ ಸಿದ್ದರಾಜು ಮಾತನಾಡಿ, ಹೋರಾಟಗಾರ ಮಂಟೇಲಿಂಗಯ್ಯ ಅವರು ಸರ್ಕಾರ ಆಚರಿಸುವ ಸರ್ಕಾರದ ಶ್ರೀಮಂತರ ದಸರಾದ ವಿರುದ್ಧ ಬಡವರ ದಸರಾ ಮಾಡಿದ್ದರು. ಈಗಿನ ಸರ್ಕಾರ ಚಿನ್ನದ ಅಂಬಾರಿಯಲ್ಲಿ ಸಂವಿಧಾನ ಪ್ರತಿ ಇಟ್ಟು ಮೆರವಣಿಗೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸವಿತಾ ನಂದ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ಧರಾಜು, ಲೇಖಕ ಸಿದ್ಧಸ್ವಾಮಿ, ಮಾಜಿ ನಗರ ಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಸಿದ್ಧಪ್ಪ, ಹೋರಾಟಗಾರ ಹರಿಹರ ಆನಂದಸ್ವಾಮಿ ಸೇರಿ  ಹಲವರು ಉಪಸ್ಥಿತರಿದ್ದರು.
ಬೆಟ್ಟಕ್ಕೆ ತೆರಳಿದವರಿಗೆ ತಡೆ: ಚಾಮುಂಡಿ ಬೆಟ್ಟದಲ್ಲಿನ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ತೆರಳುತ್ತಿದ್ದವರನ್ನು ಪೊಲೀಸರು ಅರ್ಧದಲ್ಲಿಯೇ ತಡೆದಿದ್ದು, ಈ ವೇಳೆ ಮಹಿಷ ದಸರಾ ಆಚರಣಾ ಸಮಿತಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಘಟನೆಯೂ ನಡೆಯಿತು
ಮಹಿಷ ದಸರಾ ಆಚರಣಾ ಸಮಿತಿಯವರಿಗೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಕಾರ್ಯಕ್ರಮ‌ಮುಗಿದ ಮೇಲೆ  ಅವಕಾಶ ನೀಡುವುದಾಗಿ ಹೇಳಿದ್ದ ಪೊಲೀಸರು ಪುಷ್ಪಾರ್ಚನೆಗೆ ತೆರಳುತ್ತಿದ್ದ ಜ್ಞಾನಪ್ರಕಾಶ್ ಸ್ವಾಮೀಜಿ ಸೇರಿದಂತೆ ಸಮಿತಿಯವರನ್ನು ಚಾಮುಂಡಿ ಬೆಟ್ಟದ ತಾವರೆ ಕಟ್ಟೆ ಬಳಿಯೇ  ತಡೆದರು.
ಕಾರ್ಯಕ್ರಮ‌ ಮುಗಿದ ನಂತರ  ಮಹಿನಷನ ಪ್ರತಿಮೆಗೆ ಮಾಲಾರ್ಪಣೆ ಮಾಡಲು  ಕಾರಿನಲ್ಲಿ ತೆರಳುತ್ತಿದ್ದ ಜ್ಞಾನಪ್ರಕಾಶ್ ಸ್ವಾಮೀಜಿ, ಪುರುಷೋತ್ತಮ್, ಲೇಖಕ ಸಿದ್ಧಸ್ವಾಮಿ, ಹೋರಾಟಗಾರರಾದ ಹರಿಹರ ಆನಂದಸ್ವಾಮಿ, ಕಲ್ಲಹಳ್ಳಿ ಕುಮಾರ್, ಸೋಮಯ್ಯ ಮಲೆಯೂರು, ದಿಲೀಪ್ ನರಸಯ್ಯ ಸೇರಿ ಹಲವರನ್ನು ತಡೆದರು.

Share This Article
Leave a Comment