ಬಾನಾಂಗಳದಿ ‘ಸಾರಂಗ್’ ಚಮತ್ಕಾರಕ್ಕೆ ಪ್ರೇಕ್ಷಕರು ಫಿದಾ
ಐದು ಹೆಲಿಕಾಪ್ಟರ್‌ಗಳಿಂದ 20 ನಿಮಿಷ ಪ್ರದರ್ಶನ ಕಂಡು ಪುಳಿತರಾದ ಮೈಸೂರಿಗರು

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಹಾಲ್ನೊರೆಯಂತಿದ್ದ ಬಾನಾಂಗಳದಲ್ಲಿ ಕೆಳಗೆ ಹೊಗೆಯುಗುಳುತ್ತಾ ಬಂದ ಭಾರತೀಯ ವಾಯುಪಡೆಯ ‘ಸಾರಂಗ್‌ ಡಿಸ್‌ಪ್ಲೇ’ ತಂಡದ ಐದು ಹೆಲಿಕಾಪ್ಟರ್‌ಗಳು ೨೦ ನಿಮಿಷಗಳ ಕಾಲ ನಡೆಸಿದ ಚಮತ್ಕಾರಕ್ಕೆ ನೆರೆದವರು ಫಿದಾ ಆದರು.
ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಏರ್‌ಶೋ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ‘ಕೆಂಬಣ್ಣ’ದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸಾರಂಗ್‌ ತಂಡದ ಪೈಲೆಟ್‌ಗಳು ವಿವಿಧ ಕಸರತ್ತು ನಡೆಸಿದರು. ಆರಂಭದಲ್ಲಿ ಪೊಲೀಸ್‌ ಸಿಬ್ಬಂದಿ ಮೈದಾನದ ಸುತ್ತ ಪಟಾಕಿ ಸಿಡಿಸಿ ಹಕ್ಕಿಗಳನ್ನು ಓಡಿಸಿದರು. 4.27ಕ್ಕೆ ವೇಗವಾಗಿ ಮೈದಾನಕ್ಕೆ ನುಗ್ಗಿದ ಹೆಲಿಕಾಪ್ಟರ್‌ಗಳು ಸತತವಾಗಿ ಇಪ್ಪತ್ತೈದು ನಿಮಿಷಗಳ ಕಾಲ ಮನರಂಜನೆ ನೀಡಿದವು. ಆಕಾಶದಲ್ಲಿನ ಲೋಹದ ಹಕ್ಕಿಗಳ ಆಟೋಟಕ್ಕೆ ಪ್ರೇಕ್ಷಕರು ಬೆರಗಾದರು.
ಗ್ರೂಪ್‌ ಕ್ಯಾಪ್ಟನ್‌ ಎಸ್‌.ಕೆ.ಮಿಶ್ರ ನೇತೃತ್ವದ ಹತ್ತು ಪೈಲೆಟ್‌ಗಳ ಸೃಜನಾತ್ಮಕ ಹೆಲಿಕಾಪ್ಟರ್‌ ಚಾಲನೆಯನ್ನು ಶಿಳ್ಳೆ, ಚಪ್ಪಾಳೆಗಳು ಅಭಿನಂದಿಸಿದವು. ಕರ್ನಾಟಕದ ಬುದ್ದಿ ಸಾಗರ್‌ ಡೋಂಗ್ರೆಯವರೂ ಪ್ರದರ್ಶನದಲ್ಲಿ ಭಾಗವಹಿಸಿದ್ದು, ‘ಲೋಕಲ್‌ ಬಾಯ್‌’ ಕಲೆಯೂ ಪ್ರದರ್ಶನಗೊಂಡಿತು. ವೇಗವಾಗಿ ತೆರಳಿ ಮೈದಾನದ ಮಧ್ಯದಲ್ಲಿ ಹೆಲಿಕಾಪ್ಟರ್‌ ಉಗುಳುವ ಹೊಗೆಯಿಂದ ವಿವಿಧ ಆಕೃತಿ ಸೃಷ್ಟಿಸಿದರು. ಹೃದಯದ ರಚನೆಯು ಗಮನಸೆಳೆಯಿತು. ‘ಡಾಲ್ಫಿನ್‌ ಲೀಪ್‌’, ‘ವೈನ್‌ ಗ್ಲಾಸ್‌’, ‘ಡೈಮಂಡ್‌’ ಆಕೃತಿಗಳನ್ನು ಸೃಷ್ಟಿಸಿ ಅಚ್ಚರಿ ಮೂಡಿಸಿದರು.

ನಾಲ್ಕು ದಿಕ್ಕುಗಳಲ್ಲಿ ಹಾರಾಟ ನಡೆಸಿ ಚಂಗನೆ ನೆಗೆಯುತ್ತಿದ್ದ ಹೆಲಿಕಾಪ್ಟರ್‌ಗಳು ಕಣ್ಣಿಗೆ ಮುದ ನೀಡಿದವು. ಅವುಗಳು ನಡೆಸಿದ ಲೆವೆಲ್‌ ಕ್ರಾಸಿಂಗ್‌, ಏರೊ ಹೆಡ್‌, ಕ್ರಾಸ್‌ ಓವರ್‌ ಬ್ರೇಕ್‌ ಸಾಹಸಗಳು ಭಯ ಮಿಶ್ರಿತ ರೋಮಾಂಚನದ ಅನುಭವ ನೀಡಿತು. ಅಕ್ಕಪಕ್ಕದಲ್ಲಿ ತೆರಳುತ್ತಿದ್ದ ಹೆಲಿಕಾಪ್ಟರ್‌ ನಡುವೆ ಮತ್ತೊಂದು ಹೆಲಿಕಾಪ್ಟರ್‌ ನುಗ್ಗುತ್ತಿರುವುದು, ಸಮಾನಾಂತರವಾಗಿ ಚಲಿಸುವುದು, ಆಕಾಶವನ್ನು ಮುತ್ತಿಕ್ಕುವಂತೆ ಮೇಲ್ಮುಖವಾಗಿ ತೆರಳಿ, ನಂತರ ವಕ್ರವಾಗಿ ಹಿಂದಿರುಗುವ ದೃಶ್ಯಗಳು ಆಕಾಶದಲ್ಲಿ ಹೊಸ ಲೋಕವನ್ನು ಸೃಷ್ಟಿಸಿತು. ತಂಡದ ಸದಸ್ಯೆ ಪಲ್ಲವಿ ಸಾಂಗವನ್‌ ನಿರೂಪಣೆ ಗಮನಸೆಳೆಯಿತು. ಕನ್ನಡದಲ್ಲಿ ಪಂಚಿಂಗ್‌ ಡೈಲಾಗ್‌ ಹೊಡೆದು ಮಿಂಚಿದರು. ಕಾರ್ಯಕ್ರಮದ ಬಳಿಕ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಜನರು ಮುಗಿಬಿದ್ದರು.
ಪಾಸ್‌ ಹೊಂದಿದ್ದವರಿಗಷ್ಟೇ ಪ್ರವೇಶ: ಪ್ರವೇಶ ಗೇಟ್‌ಗಳಲ್ಲಿ ಟಿಕೆಟ್‌ ಪರಿಶೀಲಿಸಿ ಒಳಗೆ ತೆರಳಲು ಅವಕಾಶ ನೀಡಿದರು. ಅನೇಕರು ಮೈದಾನದ ಹೊರಬಾಗದಲ್ಲಿ ನಿಂತು ಹೆಲಿಕಾಪ್ಟರ್‌ ಸಾಹಸಗಳನ್ನು ವೀಕ್ಷಿಸಿದರು. ಹತ್ತಿರದ ಕಟ್ಟಡಗಳ ಮೇಲೂ ಜನರ ಗುಂಪು ಕಂಡುಬಂತು. ಪೊಲೀಸರು ಮೈದಾನದ ಸುತ್ತ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು. ‘ಏರ್‌ ಶೋ’ನಲ್ಲಿ ‘ಸೂರ್ಯಕಿರಣ್’ ತಂಡವೂ ಭಾಗವಹಿಸಿತ್ತು. ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್‌ ಸೇಠ್‌, ವಿಧಾನ ಪರಿಷತ್‌ ಸದಸ್ಯರಾದ ಕೆ.ವಿವೇಕಾನಂದ, ಶಿವಕುಮಾರ್‌, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತ ರೆಡ್ಡಿ ಸೇರಿ ಅನೇಕರು ಭಾಗವಹಿಸಿದ್ದರು.

ಬಾಕ್ಸ್‌
ಯುವ ಸಮೂಹಕ್ಕೆ ಪ್ರೇರಣೆಯಾಗಲಿ’
‘ಇಂತಹ ಪ್ರದರ್ಶನಗಳಿಂದ ಯುವ ಸಮೂಹವು ಪ್ರೇರಣೆ ಪಡೆದು ವಾಯು ಸೇನೆ ಸೇರಲಿ ಎಂಬುದು ನಮ್ಮ ಆಶಯ. ಸಾರಂಗ್‌ ಡಿಸ್‌ಪ್ಲೇ ತಂಡವು ವಿಶ್ವದ ಮೊದಲ ಐದು ಹೆಲಿಕಾಪ್ಟರ್‌ಗಳ ಪ್ರದರ್ಶಕ ತಂಡವಾಗಿದ್ದು, ಮೈಸೂರಿಗೆ 25 ಜನರ ತಂಡದೊಂದಿಗೆ ಆಗಮಿಸಿದ್ದೇವೆ’ ಎಂದು ತಂಡದ ಸದಸ್ಯೆ ಪಲ್ಲವಿ ಸಾಂಗವನ್‌ ತಿಳಿಸಿದರು.

ಬಾಕ್ಸ್‌
ನಾಡಹಬ್ಬದಲ್ಲಿ ಇಂತಹ ಸಾಹಸ ಪ್ರದರ್ಶನದಿಂದ ನಮ್ಮ ಯುವ ಸಮೂಹ ಮತ್ತಷ್ಟು ರಾಷ್ಟ್ರಪ್ರೇಮ ಬೆಳಸಿಕೊಂಡು ದೇಶಕ್ಕಾಗಿ ತಮ್ಮದೇ ಆದ ಕೊಡುಗೆ ನೀಡುವತ್ತ ಗಮನ ಹರಿಸಲು ಇದೊಂದು ಯಶಸ್ವಿ ಕಾರ್ಯಕ್ರಮವಾಗಿದ್ದು, ಎಲ್ಲರೂ ಸಾಹಸ ನೋಡಿ ಖುಷಿ ಪಟ್ಟಿದ್ದಾರೆ.
-ಎಚ್‌.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

Share This Article
Leave a Comment