ಪಬ್ಲಿಕ್ ಅಲರ್ಟ್
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರೆಯ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಇಂದು ಐತಿಹಾಸಿಕ ಅರಮನೆಯಲ್ಲಿ ಆಯುಧಪೂಜೆ ನಡೆದರೆ ನಾಳೆ ವೈಭವದ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.
ಜಂಬೂಸವಾರಿಗೆ ಎರಡು ದಿನ ಮಾತ್ರ ಬಾಕಿ ಇದೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಯ ಅಂತಿಮ ತಾಲೀಮು ನಡೆಯಿತು. ಕ್ಯಾಪ್ಟನ್ ಅಭಿಮನ್ಯು ಆನೆಯನ್ನು ಹೆಣ್ಣಾನೆಗಳಾದ ರೂಪ ಮತ್ತು ಹೇಮಾವತಿ ಆನೆಯೊಂದಿಗೆ ಅಂಬಾರಿ ಕಟ್ಟುವ ಸ್ಥಳಕ್ಕೆ ಕರೆತಂದು ಬಳಿಕ ರಾಜವಂಶಸ್ಥರ ನಿವಾಸದ ಬಳಿ ಸೆಲ್ಯೂಟ್ ಹೊಡೆಸಿ, ತ್ರಿನೇಶ್ವರಸ್ವಾಮಿ ದೇವಾಲಯದ ಬಳಿಯಿಂದ ಜಯಮಾರ್ತಾಂಡ ದ್ವಾರದ ಮುಂಭಾಗದ ರಸ್ತೆ ಹಾಗೂ ವರಹಾಸ್ವಾಮಿ ದೇವಾಲಯದ ಪಕ್ಕದ ರಸ್ತೆಯಿಂದ ಪುಷ್ಪಾರ್ಚನೆ ಮಾಡುವ ಸ್ಥಳಕ್ಕೆ ಕರೆತರಲಾಯಿತು. ಈ ತಾಲೀಮಿನಲ್ಲಿ ಪೊಲೀಸ್ ವಾದ್ಯ ವೃಂದ ಹಾಗೂ ಇಲಾಖೆಯ ತುಕ್ಕಡಿ ಪಡೆಗಳು ಭಾಗವಹಿಸಿದವು. ಅಲ್ಲದೇ, ಸಾಂಕೇತಿಕವಾಗಿ ಅಧಿಕಾರಿಗಳಿಂದ ಪುಷ್ಪಾರ್ಚನೆಯ ರಿಹರ್ಸಲ್ ಸಹ ನಡೆಯಿತು.
ಅಭಿಮನ್ಯು ನೇತೃತ್ವದ 14 ಗಜಪಡೆಗಳು ರಿಹರ್ಸಲ್ನಲ್ಲಿ ಭಾಗಿಯಾಗಿದ್ದು, ಇದರ ಜೊತೆಗೆ ಅಶ್ವಾರೋಹಿದಳವೂ ಭಾಗಿಯಾಗಿತ್ತು. ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಎಡಭಾಗದಲ್ಲಿ ಕುಂಕಿ ಆನೆಯಾಗಿ ಕಾವೇರಿ, ಬಲ ಭಾಗದಲ್ಲಿ ರೂಪ ಸಾಥ್ ನೀಡಿದವು.
ನಿಶಾನಿಯಾಗಿ ದನಂಜಯ, ನೌಪಾದ್ ಆನೆಯಾಗಿ ಗೋಪಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಒಂದನೇ ಹಂತದ ಸಾಲಾನೆಯಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ ಇದ್ದವು. ಎರಡನೇ ಹಂತದ ಸಾಲಾನೆಯಾಗಿ ಕಂಜನ್, ಭೀಮ, ಏಕಲವ್ಯ ಹಾಗೂ ಮೂರನೇ ಹಂತದ ಸಾಲಾನೆಯಾಗಿ ಪ್ರಶಾಂತ, ಸುಗ್ರೀವ, ಹೇಮಾವತಿ ಆನೆಗಳು ಮೆರವಣಿಗೆಯ ರಿಹರ್ಸಲ್ನಲ್ಲಿ ಭಾಗಿಯಾದವು.
ಮೈಸೂರು ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಎಫ್ ಪ್ರಭುಗೌಡ ಸಾಂಕೇತಿಕವಾಗಿ ಜಂಬೂಸವಾರಿಯ ಪುಷ್ಪಾರ್ಚನೆಯ ರಿಹರ್ಸಲ್ ನಡೆಸಿದರು. ಬಳಿಕ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾತನಾಡಿ, ಅ.2ರಂದು ನಡೆಯಲಿರುವ ಜಂಬೂ ಸವಾರಿಗೆ ಅರಮನೆ ಆವರಣದಲ್ಲಿ ಗಜಪಡೆ ಹಾಗೂ ಅಶ್ವದಳದ ಅಂತಿಮ ಹಂತದ ರಿಹರ್ಸಲ್ ನಡೆಸಲಾಗಿದೆ. ಜಂಬೂಸವಾರಿಯ ದಿನ ಕುಶಾಲ ತೋಪು ಸಿಡಿಸುವ ಹಾಗೂ ಮೆರವಣಿಗೆಗೆ ಗೌರವ ಸೂಚಿಸುವ ಕಾರ್ಯಕ್ರಮದ ಸಿದ್ಧತೆ ಹಾಗೂ ಯಾವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಅಂತಿಮ ಹಂತದ ರಿಹರ್ಸಲ್ ನಡೆಸಲಾಯಿತು. ಇವತ್ತು ರಿಹರ್ಸಲ್ ಮುಗಿದಿದ್ದು, ಎಲ್ಲವೂ ಚೆನ್ನಾಗಿಯೇ ಆಗಿದೆ. ಇದು ಅಂತಿಮ ಹಂತದ ರಿಹರ್ಸಲ್ ಆಗಿದ್ದು, ಜಂಬೂಸವಾರಿಯ ಮೆರವಣಿಗೆಗೆ ಗಜಪಡೆ ಹಾಗೂ ಅಶ್ವದಳ ಸಿದ್ಧವಾಗಿವೆ ಎಂದರು.


ಈ ಬಾರಿ ದಸರಾಗೆ ಎರಡನೇ ಹಂತದ ಭದ್ರತೆಯನ್ನು ಮಾಡಿಕೊಳ್ಳಲಾಗಿದ್ದು, ಮೊದಲ ಹಂತದ ಭದ್ರತೆಯನ್ನು ಈಗಾಗಲೇ ಮಾಡಲಾಗಿದೆ. ಇವತ್ತಿನಿಂದಲೇ ಎರಡನೇ ಹಂತದ ಭದ್ರತೆ ಮಾಡಲಾಗುವುದು. ಈಗಾಗಲೇ ಎರಡನೇ ಹಂತದ ಭದ್ರತೆಗೆ ಪೊಲೀಸರು ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದು, ಇವತ್ತಿನಿಂದಲೇ ಎರಡನೇ ಹಂತದ ಭದ್ರತೆ ಮಾಡಲಾಗುವುದು ಎಂದು ತಿಳಿಸಿದರು.
ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಕೆಲವು ಶಿಥಿಲಾವಸ್ಥೆಯ ಕಟ್ಟಡಗಳು ಇದ್ದು, ಅವುಗಳ ಮೇಲೇರಿ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಣೆ ಮಾಡಬಾರದು ಹಾಗೂ ಮರದ ಮೇಲೆ ಕುಳಿತು ಅಥವಾ ನಿಂತುಕೊಂಡು ಜಂಬೂಸವಾರಿ ಮೆರವಣಿಗೆ ವೀಕ್ಷಣೆ ಮಾಡಬಾರದು ಎಂದು ಹೇಳಿದರು.
ಮೈಸೂರು ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾತನಾಡಿ, ‘ಈ ಬಾರಿಯ ದಸರಾ ಆಚರಣೆಗೆಂದು ಮಾವುತರು ಹಾಗೂ ಕಾವಾಡಿಗಳು ಆನೆಗಳಿಗೆ 60 ದಿನಗಳ ತರಬೇತಿ ನೀಡಿದ್ದಾರೆ. ಎಲ್ಲಾ ಆನೆಗಳು ಆರೋಗ್ಯವಾಗಿ, ಚೆನ್ನಾಗಿ ಇವೆ. ಅಂತಿಮ ಹಂತದ ರಿಹರ್ಸಲ್ನಲ್ಲಿ ಗಜಪಡೆ ಉತ್ತಮವಾಗಿ ಸ್ಪಂದಿಸಿವೆ. ಎಲ್ಲ ರೀತಿಯ ಸಿದ್ಧತೆ ನಡೆದಿದ್ದು, ಜಂಬೂಸವಾರಿಯ ದಿನ ಗಜಪಡೆಯ ಬಳಿ ಯಾರೂ ಹೋಗಬಾರದು ಹಾಗೂ ಶಬ್ದ ಮಾಡಬಾರದು ಮನವಿ ಮಾಡಿದರು.
ಬಾಕ್ಸ್
ಪಾಸ್ ಇದ್ದವರಿಗಷ್ಟೇ ಎಂಟ್ರಿ
ಜಂಬೂಸವಾರಿ ಹಾಗೂ ಪಂಜಿನ ಕಾವಯತು ಮೈದಾನಕ್ಕೆ ಪಾಸ್ ಇದ್ದವರಿಗೆ ಮಾತ್ರ ಅವಕಾಶ. ಪಾಸ್ ಇಲ್ಲದೇ ಬಂದವರಿಗೆ ಅವಕಾಶವಿಲ್ಲ. ಎಲ್ಲ ಕಡೆ ಬಿಗಿಯಾದ ಬಂದೋಬಸ್ತ್ ಹಾಕಲಾಗಿದೆ.
– ಸೀಮಾಲಾಟ್ಕರ್, ನಗರ ಪೊಲೀಸ್ ಆಯುಕ್ತೆ
