ಗಜಪಡೆಗೆ ಮೊದಲ ಸಿಡಿಮದ್ದು ತಾಲೀಮು ಶುರು
ಚಿತ್ರ ಎ.ಕೃಷ್ಣೋಜಿರಾವ್‌

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗೆ ಇಂದು ಮೊದಲ ಹಂತದ ಸಿಡಿಮದ್ದು ತಾಲೀಮನ್ನು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ನಡೆಸಲಾಯಿತು. ಇದೇ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಭಾಗವಹಿಸಲು ಆಗಮಿಸಿರುವ ಶ್ರೀಕಂಠ, ಹೇಮಾವತಿ ಆನೆ ಸ್ವಲ್ಪ ಬೆಚ್ಚಿತು. ಜೊತೆಗೆ, ಅಶ್ವದಳದ ಕುದುರೆಗಳೂ ಸಹ ಸಿಡಿಮದ್ದಿನ ಶಬ್ದಕ್ಕೆ ಹೆದರಿದವು.
ನಾಡಹಬ್ಬದ ಜಂಬೂಸವಾರಿ ಮೆರವಣಿಗೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಗಜಪಡೆಗೆ ತಾಲೀಮು, ಭಾರ ಹೊರುವ ತಾಲೀಮು ನಡೆದಿದೆ. ಜಂಬೂಸವಾರಿಯ ದಿನ ಕುಶಾಲತೋಪು ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ಉಂಟಾಗುವ ಶಬ್ದಕ್ಕೆ ಹೆದರದಂತೆ ಸಿಡಿಮದ್ದು ತಾಲೀಮನ್ನು ನಡೆಸಲಾಯಿತು.
ಸಿಡಿಮದ್ದು ತಾಲೀಮಿನಲ್ಲಿ ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ಅಶ್ವದಳ ಭಾಗವಹಿಸಿವೆ. ಮೊದಲ ಹಂತದ ತಾಲೀಮಿನ ನಂತರ ಎರಡು ಮತ್ತು ಮೂರನೇ ಹಂತದ ತಾಲೀಮು ನಡೆಸಿ ಗಜಪಡೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಇದಕ್ಕೂ ಮುನ್ನ, ತಾಲೀಮಿಗಾಗಿ ವಸ್ತು ಪ್ರದರ್ಶನದ ಆವರಣಕ್ಕೆ ಆಗಮಿಸಿದ ಗಜಪಡೆಯನ್ನು ಅರಣ್ಯ ಇಲಾಖೆಯ ವತಿಯಿಂದ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಫಿರಂಗಿ ದಳ ಹಾಗೂ 7 ಫಿರಂಗಿಗಳನ್ನು ತಾಲೀಮಿನಲ್ಲಿ ಬಳಸಲಾಗಿದೆ.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಇಂದು ಮೊದಲನೇ ಬಾರಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಸೇರಿ ಗನ್ ಶೂಟ್ ಮಾಡಿದ್ದೇವೆ. ಕುದುರೆಗಳು ಮತ್ತು ಆನೆಗಳಿಗೆ ಗನ್ ಶೂಟ್, ಪುಷ್ಪಾರ್ಚನೆ ಮತ್ತು ಟಾರ್ಚ್ ಲೈಟ್ ಪೆರೇಡ್ ಸಮಯದಲ್ಲಿ ಒಂದು ಗನ್ ಶೂಟ್ ಹಾಗೂ ಸೆಲ್ಯೂಟ್ ಕೊಡಲಾಗುತ್ತದೆ. ಆ ಸಂದರ್ಭದಲ್ಲಿ ಆನೆಗಳು ಹೆದರಬಾರದು ಮತ್ತು ಅತ್ತಿಂದಿತ್ತ ಓಡಾಡಬಾರದು ಎಂಬ ಉದ್ದೇಶದಿಂದ ಇವತ್ತು ಮೊದಲನೇ ದಿನದ ಪೂರ್ವಭ್ಯಾಸ ಹಮ್ಮಿಕೊಂಡಿದ್ದೇವೆ. ಯಾವುದೇ ರೀತಿಯಲ್ಲಿ ಭಯ ಆಗಲಿಲ್ಲ, ಸರಿಯಾದ ರೀತಿಯಲ್ಲಿಯೇ ಆಗಿದೆ. ಇನ್ನು ಎರಡು ಅಭ್ಯಾಸ ಇರುತ್ತದೆ, ಆ ಬಳಿಕ ಆನೆ ಮತ್ತು ಕುದುರೆಗಳು ಹೊಂದಿಕೊಳ್ಳುತ್ತವೆ ಎಂದು ಹೇಳಿದರು.
ಡಿಸಿಎಫ್ ಪ್ರಭುಗೌಡ ಮಾತನಾಡಿ, “2025ರ ದಸರಾ ಅಂಗವಾಗಿ ಮೊದಲ ಹಂತದಲ್ಲಿ ಲೈನ್ ತಾಲೀಮು, ಭಾರ ಹೊರುವ ತಾಲೀಮು ಹಾಗೂ ಸಿಡಿಮದ್ದಿಗೆ ಹೆದರದಂತೆ ತಾಲೀಮುಗಳನ್ನು ನಾವು ಮಾಡಿಸುತ್ತಿದ್ದೇವೆ. ಇವತ್ತು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಸಿಡಿಮದ್ದು ತಾಲೀಮು ಮಾಡಿಸಿದ್ದೇವೆ. 14 ಆನೆಗಳು ಮತ್ತು ಪೊಲೀಸ್ ಇಲಾಖೆಯಿಂದ ಅಶ್ವದಳವೂ ಪಾಲ್ಗೊಂಡಿತ್ತು. 3 ಸುತ್ತಿನಲ್ಲಿಯೂ ಯಾವುದೇ ಆನೆಗಳು ಗಾಬರಿಗೊಳ್ಳಲಿಲ್ಲ. ಎಲ್ಲಾ ಆನೆಗಳೂ ಕೂಡ ಚೆನ್ನಾಗಿ ಪ್ರತಿಕ್ರಿಯಿಸಿವೆ. ಹೊಸದಾಗಿ ಬಂದಿರುವ ರೂಪ, ಶ್ರೀಕಂಠ ಮತ್ತು ಹೇಮಾವತಿ ಆನೆಗಳಲ್ಲಿ ಹೇಮಾವತಿ ಹಾಗೂ ರೂಪ ಹೆದರಲಿಲ್ಲ. ಆದರೆ, ಶ್ರೀಕಂಠ ಈ ರೀತಿ ಶಬ್ದವಾದಾಗ ಹಿಂದೆ ಮುಖ ಮಾಡಿ ನಿಂತು ಬಿಡುತ್ತಾನೆ ಅಷ್ಟೇ. 3 ಹಂತದಲ್ಲಿ ಈ ತಾಲೀಮು ನಡೆಯುತ್ತದೆ. ಹಾಗಾಗಿ ಇವತ್ತು ಮೊದಲನೇ ಹಂತದಲ್ಲಿ ಎಲ್ಲವೂ ಕೂಡ ಯಶಸ್ವಿಯಾಗಿ ನಡೆಯಿತು. ಗಜಪಡೆಗಳು, ಅಶ್ವದಳಗಳಲ್ಲಿ ಯಾವುದೂ ಹೆದರಲಿಲ್ಲ” ಎಂದು ತಿಳಿಸಿದರು.

Share This Article
Leave a Comment