ಪಬ್ಲಿಕ್ ಅಲರ್ಟ್
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದವರು ಸ್ಥಳದಲ್ಲೇ ತಯಾರಿಸಿದ ಬಂಬೂ ಬಿರಿಯಾನಿ ಹಾಗೂ ಕಾಡು ಸೊಪ್ಪಿನ ಸಾರಿನ ಸವಿ ಎಲ್ಲರ ಬಾಯಿಯಲ್ಲೂ ಬಾಯಿ ನೀರೂರಿಸುತ್ತಿದೆ.
ಪ್ರಕೃತಿ ಆದಿವಾಸಿ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಕೃಷ್ಣಯ್ಯ ತಮ್ಮ ಬಂಬೂ ಬಿರಿಯಾನಿ ವಿಶೇಷತೆ ಕುರಿತು ಮಾತನಾಡಿ, ಕಾಡಿನ ಮಸಾಲೆ ಪದಾರ್ಥಗಳನ್ನು ಬಳಸಿ ಹಸಿ ಬಿದಿರನ್ನು ತಂದು ಅದರೊಳಗೆ ಕಾಡಿನ ಮಸಾಲೆ ಹಾಗೂ ಕಾಡಿನ ನಾಟಿ ಕೋಳಿ ಮಾಂಸವನ್ನು ಕೆಂಡದಲ್ಲಿ ಬೇಯಿಸಿ ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ. ಅಷ್ಟಮಾತ್ರವಲ್ಲದೆ, ಕಾಡಿನ ಪದಾರ್ಥಗಳಿಂದಲೇ ತಯಾರಿಸಲ್ಪಟ್ಟ ಬಿದರಕ್ಕಿ ಪಾಯಿಸ, ಮಾಕಳಿ ಬೇರಿನ ಟೀ, ಕಾಡುಗೆಣಸು, ಜೇನುತುಪ್ಪದ ಮಿಶ್ರಣ, ನಳ್ಳಿ ಸಾಂಬಾರು ಮುದ್ದೆ, ಕಾಡುನಲ್ಲಿಕಾಯಿ ವಿವಿಧ ಬಗೆಯ ಕಾಡು ಸೊಪ್ಪುಗಳಾದ, ಆಲೆಸೊಪ್ಪು,ಮಾಡಲೇ ಸೊಪ್ಪು, ತುಂಬೆ ಸೊಪ್ಪು, ಅಣ್ಣೆಸೊಪ್ಪು, ಇಂಡಿಸೊಪ್ಪು ಮುಂತಾದ ಸೊಪ್ಪಿನ ಪಲ್ಯಗಳನ್ನು ತಯಾರು ಮಾಡಲಾಗುತ್ತಿದೆ ಎಂದರು.
ಇನ್ನೂ ನಿತ್ಯವೂ ಸಾವಿರಾರು ಮಂದಿ ಬಂಬೂ ಬಿರಿಯಾನಿಗೆ ಆಗಮಿಸುತ್ತಿದ್ದು, ಕನಿಷ್ಠ ೩೦ ನಿಮಿಷ ತಯಾರಿಸಲು ಬೇಕಾಗುತ್ತದೆ. ಮುಂಗಡ ಕಾಯ್ದಿರಿಸಿದ ಬಳಿಕವಷ್ಟೇ ಬಂಬೂ ಬಿರಿಯಾನಿ ಸಿದ್ಧಪಡಿಸಿಕೊಡಲಾಗುವುದು. ಒಮ್ಮೆಲೆ ಮಾಂಸ ಮತ್ತೊಮ್ಮೆ ಅಕ್ಕಿಯನ್ನು ಬೇಯಿಸಿಕೊಂಡು ನೀಡಲಾಗುತ್ತಿದೆ. ಎಲ್ಲವನ್ನೂ ಬಿದಿರಿನಿಂದಲೇ ಬೇಯಿಸುವುದರಿಂದ ಆರೋಗ್ಯವೂ ಕಾಪಾಡಿಕೊಂಡಂತಾಗುತ್ತದೆ ಎಂದರು.




ಆಹಾರ ಮೇಳದಲ್ಲಿ ಮಾತ್ರ
ವರ್ಷದಲ್ಲಿ ಆಹಾರ ಮೇಳದಲ್ಲಿ ಮಾತ್ರವೇ ಬಂಬೂಬಿರಿಯಾನಿ ಲಭ್ಯವಿರಲಿದ್ದು, ಯಾವುದೇ ಹೋಟೆಲ್ ಅಥವಾ ಇನ್ನಾ ಯಾವುದೇ ವೇಳೆಯಲ್ಲಿ ಇದನ್ನು ನಾವು ಮಾಡುವುದಿಲ್ಲ. ನಮ್ಮ ಕಸುಬುಗಳು ಬೇರೆ ಬೇರೆಯಿದೆ. ಆದರೆ, ನಾಡಹಬ್ಬದಲ್ಲಿ ನಮ್ಮ ಮೂಲ ಕಸಬಿನ ಅನಾವರಣ ಮಾಡಲು ಬಂಬೂ ಬಿರಿಯಾನಿ ಮಾಡಿಕೊಡುತ್ತಿದ್ದೇವೆನ್ನುತ್ತಾರೆ ಕೃಷ್ಣಯ್ಯ.
