ಅರಮನೆಯಲ್ಲಿ ಆಯುಧಪೂಜೆ ಸಂಭ್ರಮ 

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನವರಾತ್ರಿಯ 10ನೇ ದಿನ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಪ್ರದಾಯಿಕ ಆಯುಧ ಪೂಜೆಯ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಅರಮನೆಯಲ್ಲಿ ಇಂದು ಆಯುಧ ಪೂಜೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇಶದಲ್ಲೇ ಇಂದಿಗೂ ರಾಜಪರಂಪರೆಯಂತೆ ಸಾಂಪ್ರದಾಯಿಕ ಆಯುಧ ಪೂಜೆ ನಡೆಯುವುದು ಮೈಸೂರಿನ ಅರಮನೆಯಲ್ಲಿ ಮಾತ್ರ. ಈ ಹಿನ್ನೆಲೆ ಬೆಳಗ್ಗೆಯಿಂದಲೇ ಆಯುಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ಬೆಳಗ್ಗೆ 6 ಗಂಟೆಗೆ ಅರಮನೆ ಒಳಗೆ ಚಂಡಿಕಾ ಹೋಮ ಆರಂಭವಾಗಿ, ನಂತರ 7:30 ರಿಂದ 7:42ರವರೆಗೆ ಪಟ್ಟದ ಕತ್ತಿ ಹಾಗೂ ಖಾಸಗಿ ಆಯುಧಗಳನ್ನು ಅರಮನೆಯ ಆನೆ ಬಾಗಿಲಿನ ಮೂಲಕ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಹಾಗೂ ಒಂಟೆ ಪಲಕ್ಕಿಯೊಂದಿಗೆ ತರಲಾಯಿತು. ಬಳಿಕ ಅಲ್ಲಿನ ಬಾವಿಯಲ್ಲಿ ನೀರನ್ನು ತೆಗೆದು ಇವುಗಳನ್ನು ಸ್ವಚ್ಛಗೊಳಿಸಲಾಯಿತು. ಖಾಸಗಿ ಆಯುಧಗಳನ್ನು ಆನೆ ಬಾಗಿಲಿನ ಮೂಲಕ ವಾಪಸ್ ಕಲ್ಯಾಣದ ಆವರಣಕ್ಕೆ ತರಲಾಯಿತು. ಬಳಿಕ 9:15ಕ್ಕೆ ಚಂಡಿಕಾ ಹೋಮ ಪೂರ್ಣಾಹುತಿ ಆಯಿತು.
ಆಯುಧ ಪೂಜಾ ಆರಂಭ: ಅರಮನೆಯ ಕಲ್ಯಾಣಮಂಟಪದಲ್ಲಿ ರಾಜವಂಶಸ್ಥರ ಖಾಸಾ ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರ 10:30ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಕುದುರೆ, ಹಸುಗಳನ್ನು ಕಲ್ಯಾಣಮಂಟಪದ ಆವರಣಕ್ಕೆ ತಂದು ಅಲ್ಲಿ ರಾಜವಂಶಸ್ಥರಿಂದ ಪೂಜೆ ಸಲ್ಲಿಸಿ ಬಳಿಕ ಪಟ್ಟದ ಕತ್ತಿಗೆ ಪೂಜೆ ಸಲ್ಲಿಸಿ ಅನಂತರ ಪಟ್ಟದ ಹಸು, ರಾಜಲಾಂಚನಾ ಹಾಗೂ ಚಿನ್ನದ ಪಲ್ಲಕ್ಕಿಗೆ ರಾಜವಂಶಸ್ಥರಿಂದ ಪೂಜೆ ಸಲ್ಲಿಸಲಾಯಿತು.
ಬಳಿಕ ಅರಮನೆ ಆನೆಗಳಾದ ಪ್ರೀತಿ, ಚಂಚಲ್ ಆನೆಗಳಿಗೆ ಪೂಜೆ ಸಲ್ಲಿಸಿ ರಾಜರು ಬಳಸುವ ಖಾಸಗಿ ದುಬಾರಿ ಬೆಲೆಯ ವಾಹನಗಳಿಗೆ ಪೂಜೆ ಸಲ್ಲಿಸಿದರು. ರಾಜವಂಶಸ್ಥರ ಸಂಸ್ಥಾನ ಗೀತೆ ಕಾಯೋ ಶ್ರೀ ಗೌರಿ ಗೀತೆಯೊಂದಿಗೆ ಈ ವರ್ಷದ ಆಯುಧ ಪೂಜಾ ಕಾರ್ಯಕ್ರಮಗಳು ಕೊನೆಗೊಂಡಿತು.

ಖಾಸಗಿ ದರ್ಬಾರಿಗೆ ತೆರೆ: ಆಯುಧ ಪೂಜೆ ಆದ ನಂತರ ಇಂದು ಚಿನ್ನದ ಸಿಂಹಾಸನಕ್ಕೆ ಅಳವಡಿಸಿರುವ ಸಿಂಹವನ್ನು ವಿಸರ್ಜನೆ ಮಾಡಲಾಗುತ್ತದೆ. ನಂತರ ಯದುವೀರ್ ಹಾಗೂ ತ್ರಿಷಿಕ ಕುಮಾರಿ ಒಡೆಯರ್ ನವರಾತ್ರಿಯ ಮೊದಲ ದಿನ ಕಂಕಣ ಧಾರಣೆ ಮಾಡಿರುವ ಕಂಕಣವನ್ನು ದೇವರ ಮನೆಯಲ್ಲಿ ವಿಸರ್ಜನೆ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಬಳಿಕ ಈ ವರ್ಷದ ಖಾಸಗಿ ದರ್ಬಾರಿಗೆ ತೆರೆ ಬಿದ್ದಿತು.
ಗಜಪಡೆಗೆ ವಿಶೇಷ ಪೂಜೆ: ಆಯುಧ ಪೂಜೆ ಹಿನ್ನೆಲೆ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯು, ಕಾವೇರಿ, ಬಳ್ಳೆ‌ಲಕ್ಷ್ಮಿ, ರೂಪ, ಹೇಮಾವತಿ, ಭೀಮ, ಏಕಲವ್ಯ, ಪ್ರಶಾಂತ, ಕಂಜನ್, ಪ್ರಶಾಂತ, ಮಹೇಂದ್ರ, ಧನಂಜಯ ಈ ಹನ್ನೆರಡು ಆನೆಗಳನ್ನು ಸಾಲಾಗಿ ನಿಲ್ಲಿಸಿ, ಆನೆಗಳ ಪಾದಗಳನ್ನು ತೊಳೆದು ಅರಿಸಿಣ, ಕುಂಕುಮ ಹಾಗೂ ತಲೆಗೆ ಹೂವಿನ ಹಾರ ಹಾಕಲಾಯಿತು.
ನಂತರ ಪುರೋಹಿತರಾದ ಪ್ರಹ್ಲಾದ ರಾವ್ ಅವರು, ಮಂತ್ರ-ಘೋಷ ಹೇಳುತ್ತ ಗಣೇಶನ ಮಂತ್ರ ಪಠಿಸಿತ, ಮಾವುತರು ಹಾಗೂ ಕಾವಾಡಿಗಳಿಂದ ವಿಶೇಷ ಪೂಜೆ ಮಾಡಿಸಿದರು. ಆನೆಗಳನ್ನು ಪಳಗಿಸುವ ಅಂಕುಶ, ಆಯುಧಗಳಿಗೂ ಕೂಡ ಪೂಜೆ ಮಾಡಲಾಯಿತು. ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಹಿರಿಯ ಹಾಗೂ ಕಿರಿಯ ಅರಣ್ಯಾಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಗಳ ಜೊತೆ ಫೋಸ್ ಕೊಟ್ಟರು.
ಅರಮನೆಯಲ್ಲಿ ಪೂಜೆ: ಶ್ರೀಕಂಠ ಹಾಗೂ ಏಕಲವ್ಯ ಆನೆಗಳು ಅರಮನೆಯ ಆಯುಧ ಪೂಜೆಯಲ್ಲಿ ಪಟ್ಟಾದಾನೆಯಾಗಿ ಭಾಗಿಯಾಗಿದ್ದರಿಂದ ಅರಣ್ಯ ಇಲಾಖೆ ನಡೆಸಿದ ಆನೆಗಳ ಪೂಜೆಯಲ್ಲಿ ಭಾಗವಹಿಸಲಿಲ್ಲ.

Share This Article
Leave a Comment