ಪಬ್ಲಿಕ್ ಅಲರ್ಟ್
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2025 ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆಯಲ್ಲಿ ಯದುವಂಶದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸುವ ಮೂಲಕ ಗತವೈಭವ ನೆನಪಿಸಿದರು.
ಸೋಮವಾರ 9.55ರಿಂದ 10.15ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ರವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ, ಬೆ.11.35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪಟ್ಟದ ಆನೆ ಹಾಗೂ ಕುದುರೆ, ಹಸು ಸೇರಿ ಕಳಸ ಹೊತ್ತು ಮಹಿಳೆಯರು ಬಂದು ಮಂಗಳವಾದ್ಯದೊಂದಿಗೆ ಸವಾರಿ ತೊಟ್ಟಿಯ ಪೂಜಾ ಕಂಕೈರ್ಯಗಳು ನೆರವೇರಿದವು. 12: 42 ರಿಂದ 12:58 ರ ಒಳಗಿನ ಶುಭ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನ ಖಚಿತ ಸಿಂಹಾಸನ ಅಲಂಕರಿಸಿದರು. 2.05 ರ ಒಳಗೆ ಚಾಮುಂಡೇಶ್ವರಿ ಅಮ್ಮನವರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ವಿಜಯ ಯಾತ್ರೆ ನಡೆಯಿತು.
ಇನ್ನು ಸೆ.29ರಂದು ಬೆಳಗ್ಗೆ 10.10 ರಿಂದ 10.30 ರ ಒಳಗೆ ಒಡೆಯರ್ ಅವರಿಂದ ಸರಸ್ವತಿ ಪೂಜೆ ನೆರವೇರಿಸಲಿದ್ದು,ಅಂದು ರಾತ್ರಿ ಖಾಸಗಿ ದರ್ಬಾರ್ ಕೊನೆಕೊಳ್ಳಲಿದೆ. ಇದು ಯಧುವೀರ ಅವರ ೧೧ನೇ ಖಾಸಗಿ ದರ್ಬಾರ್ ಆಗಿದೆ. ಸಂಸದರಾಗಿ ೨ನೇ ದರ್ಬಾರ್ ನಡೆಸುತ್ತಿದ್ದಾರೆನ್ನಲಾಗಿದೆ. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಇಂದು ಅರಮನೆ ಪ್ರವೇಶ ನಿರ್ಬಂಧಿಸಲಾಗಿತ್ತು.
ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸರ್ಕಾರದ ವತಿಯಿಂದ ದಸರಾ ಆಚರಣೆ ನಡೆದರೆ, ರಾಜಮನೆತದಿಂದ ಶರನ್ ನವರಾತ್ರಿ ನಡೆಯುತ್ತದೆ. ಇಡೀ ಭಾರತದಲ್ಲಿ ಆಶ್ವಯುಜ ಮಾಸದ ಪಾಡ್ಯ ದಿನ ಶರನ್ ನವರಾತ್ರಿ ಆರಂಭವಾಗುತ್ತದೆ. ದಶಮಿಯ ದಿನಕ್ಕೆ ವಿಜಯದಶಮಿಯಾಗುತ್ತದೆ. ಅಲ್ಲಿಗೆ ಆಚರಣೆ ಮುಗಿಯುವಂತಹದ್ದು ಒಂದು ಪದ್ಧತಿ. ಪಾಡ್ಯದ ದಿನ ಸಿಂಹಾಸನಾರೋಹಣ, ಕಂಕಣ ಧಾರಣೆ ಸೇರಿದಂತೆ ಇತರೆ ವಿಧಿಗಳು ಇರುತ್ತವೆ. ಅರಮನೆಯಲ್ಲಿ ನಿತ್ಯ ದರ್ಬಾರ್ ಆಗುತ್ತದೆ. ಆದ ನಂತರ ನವಮಿ ದಿನ ವಿಶೇಷವಾದ ಆಯುಧ ಪೂಜೆ ಇರುತ್ತದೆ. ವಿಜಯದಶಮಿಯ ದಿನ ವಿಶೇಷವಾಗಿ ವಿಜಯ ಯಾತ್ರೆ, ವಜ್ರ ಮುಷ್ಠಿ ಕಾಳಗ ಮತ್ತು ಇತ್ಯಾದಿ ಮುಂತಾದ ವಿಧಿಗಳು ನಡೆಯುತ್ತವೆ ಎಂದು ಯದುವೀರ್ ಹೇಳಿದರು.
ನವರಾತ್ರಿಯ ಉದ್ದೇಶವೆಂದರೆ ದುಷ್ಟ ಪ್ರಭಾವ ಹಾಗೂ ನಮ್ಮಲ್ಲಿನ ದುಷ್ಟ ಆಲೋಚನೆಗಳನ್ನು ಸಂಹರಿಸಲು ಈ ವಿಧಿಯನ್ನು ನಡೆಸುತ್ತೇವೆ. ಕಳೆದ 400 ವರ್ಷಗಳಿಂದ ನಾವು ಒಂದು ಅದ್ಭುತವಾದ ಪರಂಪರೆಯನ್ನು ಇಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ. ಅದಕ್ಕೂ ಹಿಂದೆ ವಿಜಯನಗರದಲ್ಲಿ ಕರ್ನಾಟಕ ಚಕ್ರವರ್ತಿಗಳು ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದರು. ಅದರ ಹಿಂದೆಯೂ ಕೂಡ ಅನೇಕ ರಾಜವಂಶಸ್ಥರು ಇದನ್ನು ಆಚರಣೆ ಮಾಡುತ್ತಿದ್ದರು. ಆದರೆ, ಇದು ಒಂದು ದೊಡ್ಡ ಸಾರ್ವಜನಿಕ ಪ್ರದರ್ಶನವಾಗಿರುವುದು ವಿಜಯನಗರದ ಕಾಲದಲ್ಲಿ. ನಂತರ ನಮ್ಮ ವಂಶದವರೂ ಕೂಡ ಭಾರತದಲ್ಲಿ ಒಂದು ಸಾರ್ವಜನಿಕ ಪ್ರದರ್ಶನ, ಭಾರತೀಯ ಸಂಸ್ಕೃತಿ, ಭಾರತೀಯ ಧರ್ಮ, ಭಾರತೀಯ ಪರಂಪರೆ ಮತ್ತು ಅಂದಿನ ಕಾಲದಲ್ಲಿ ಮಿಲಿಟರಿ ವಂಶದ ಸಶಸ್ತ್ರ ಸೇನೆ ಪಡೆಗಳನ್ನು ಕೂಡ ಪ್ರದರ್ಶಿಸುವಂತಹದ್ದು ಒಂದು ಅವಕಾಶವಾಗಿತ್ತು ಎಂದು ಹೇಳಿದರು.
ರತ್ನಖಚಿತ ಸಿಂಹಾಸನದ ಇತಿಹಾಸವೇನು?: ಇತಿಹಾಸದಲ್ಲಿ ದಾಖಲಾಗಿರುವಂತೆ ಪಾಂಡವರ ಕಾಲದಿಂದ ಇವತ್ತಿನವರೆಗೂ ಆಯಾ ಧರ್ಮದ ಪ್ರತಿನಿಧಿಗಳು ನವರಾತ್ರಿಯಲ್ಲಿ ಈ ರತ್ನಖಚಿತ ಸ್ವರ್ಣ ಸಿಂಹಾಸನವನ್ನು ಬಳಸುತ್ತಿದ್ದರು ಎಂಬ ನಂಬಿಕೆಯಿದೆ. ಇವರಷ್ಟೇ ಅಲ್ಲದೇ ಬೇರೆ ಬೇರೆ ವಂಶದವರು ಕೂಡ ಬಳಸುತ್ತಿದ್ದರು. ಬೇರೆ ಬೇರೆ ವಂಶದವರು ಅದರ ಪೋಷಕರಾಗಿ ಅಥವಾ ಅದರ ಆಸ್ತಿ ಇವರ ಕೈಗೆ ಸೇರಿದ ಬಳಿಕ ಇವತ್ತಿನವರೆಗೂ, ಅಂದರೆ 400 ವರ್ಷಗಳ ಹಿಂದಿನಿಂದ ನಮ್ಮ ವಂಶದವರು ಇದನ್ನು ಬಳಸಿಕೊಂಡು ಬಂದಿರುವ ಇತಿಹಾಸವಿದೆ. ರತ್ನಖಚಿತ ಸ್ವರ್ಣ ಸಿಂಹಾಸನವನ್ನು ಈ ನವರಾತ್ರಿ ಸಮಯದಲ್ಲಿ ಯಾರು ಉತ್ತರಾಧಿಕಾರಿಗಳಾಗಿರುತ್ತಾರೋ ಅಥವಾ ಪರಂಪರೆಯ ಪೋಷಕರಾಗಿರುತ್ತಾರೋ ಅವರಿಗೆ ಇಲ್ಲಿ ನಡೆಯುವಂತಹ ಪರಂಪರೆಯ ಮಿತಿಯಲ್ಲಿ ಈ ರತ್ನ ಖಚಿತ ಸಿಂಹಾಸನವನ್ನು ಬಹಳ ಮುಖ್ಯವಾಗಿ ಆರಾಧಿಸುವಂತಹ ವಸ್ತು ಆಗಿದೆ ಎಂದರು.
ಪಾಡ್ಯದ ದಿನ ಬೆಳಿಗ್ಗೆಯಿಂದ ಚಾಮುಂಡೇಶ್ವರಿ ಪೂಜೆ, ಕಂಕಣ ಧಾರಣೆ, ಸಿಂಹಾಸನಾರೋಹಣ, ನಿತ್ಯ ದರ್ಬಾರ್, ಮಧ್ಯದಲ್ಲಿ ಸರಸ್ವತಿ ಪೂಜೆ, ಕಾಳರಾತ್ರಿಯ ದಿನ ಮಹಿಷನ ಸಂಹಾರ, ನವಮಿಯ ದಿನ ಆಯುಧಪೂಜೆ ಹಾಗೂ ದಶಮಿಯ ದಿನ ವಿಜಯದಶಮಿ ಮತ್ತು ವಿಜಯ ಯಾತ್ರೆಯಾಗುತ್ತದೆ. ಖಾಸಗಿ ದರ್ಬಾರ್ ಎಂಬುದು ಒಂದು ವಿಧಿ. ಇಲ್ಲಿ ನಿತ್ಯ ಸಂಜೆ ದರ್ಬಾರ್ ಆಗುತ್ತದೆ. ಹಿಂದಿನ ಕಾಲದಲ್ಲಿ ರಾಜರು ಇಡೀ ರಾಜ್ಯ ಅಥವಾ ಇಡೀ ಸಂಸ್ಥಾನವನ್ನು ಆಳುತ್ತಿದ್ದರು. ಆ ರಾಜ ಪದವಿಗೆ ಕೊಡುವಂತಹ ಗೌರವವೇ ಈ ನವರಾತ್ರಿಯ ಪೂಜೆ. ಅದರ ಜೊತೆಗೆ ರಾಜರು ಕೂಡ ದೇವರ ಮುಂದೆ ಕುಳಿತುಕೊಂಡು ಇಡೀ ಸಮಸ್ತ ಜನರ ಭಾವನೆ ಮತ್ತು ಅಪೇಕ್ಷೆಯನ್ನು ಕೇಳುವಂತಹದ್ದು ಹಾಗೂ ದೇವರಲ್ಲಿ ಸಮಸ್ತ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲಾಗುತ್ತದೆ ಎಂದು ಹೇಳಿದರು.
ನನ್ನ ಮೊದಲ ದಸರಾ ಕೇವಲ 9 ದಿನಗಳಿತ್ತು. ಈ ವರ್ಷ 11 ದಿನ ಇದೆ. ಎಲ್ಲಾ ದಸರಾಗಳೂ ವಿಶೇಷ. ಆದರೆ, ಯಾವುದೇ ಬೇರೆ ದಸರಾಗಿಂತ ವಿಶೇಷವಲ್ಲ. ಸೂಕ್ತ ಸಮಯದಲ್ಲಿ ಲಗ್ನ ಹಾಗೂ ತಿಥಿಗಳನ್ನು ನೋಡಿಕೊಂಡು ಎಲ್ಲವೂ ಆಗುತ್ತದೆ. ಇದೊಂದು ಸಾಂಸ್ಕೃತಿಕ ಆಚರಣೆ ಎಂದು ತಿಳಿಸಿದರು.






