ಪಬ್ಲಿಕ್ ಅಲರ್ಟ್
ಮೈಸೂರು:ಸೆ.2: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಬೆಳಿಗ್ಗೆ ಮೈಸೂರು ಅರಮನೆಗೆ ಭೇಟಿ ನೀಡಿ ಮೈಸೂರು ರಾಜವಂಶಸ್ಥರ ಕುಟುಂಬದಿಂದ ಆತಿಥ್ಯ ಸ್ವೀಕರಿಸಿದರು.
ಎರಡು ದಿನಗಳ ಮೈಸೂರು ಭೇಟಿ ಕೈಗೊಂಡಿದ್ದ ರಾಷ್ಟ್ರಪತಿಗಳು ಸೋಮವಾರ ಆಯಿಷ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಮನವಿ ಮೇರೆಗೆ ಮಂಗಳವಾರ ಅರಮನೆಗೆ ಸೌಹಾರ್ದ ಭೇಟಿ ನೀಡಿದರು.
ಬೆಳಗ್ಗೆ ಅರಮನೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಅರಮನೆಯ ಮುಖ್ಯ ಭಾಗಗಳನ್ನು ರಾಷ್ಟ್ರಪತಿ ವೀಕ್ಷಿಸಿದರು ಎಂದು ಅರಮನೆಯ ತಿಳಿಸಿದೆ.
ರಾಷ್ಟ್ರಪತಿಗಳು ಮತ್ತು ಕರ್ನಾಟಕದ ರಾಜ್ಯಪಾಲರನ್ನು ನಮ್ಮ ನಿವಾಸದಲ್ಲಿ ಸ್ವಾಗತಿಸಲು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆ ಮತ್ತು ನನ್ನ ಆಹ್ವಾನವನ್ನು ಸ್ವೀಕರಿಸಿ ಗೌರವಿಸಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.




ರಾಷ್ಟ್ರಪತಿಗಳಿಗೆ ಬೆಳಗಿನ ಉಪಹಾರದ ಮೆನು ಎಳನೀರು, ಕಿವಿ, ಪ್ಲಮ್ ಮತ್ತು ಪಪ್ಪಾಯಿ ಸೇರಿದಂತೆ ಹಣ್ಣುಗಳು…ಸಾಂಪ್ರದಾಯಿಕ ಮೈಸೂರು ಭಕ್ಷ್ಯಗಳಾದ ಮೈಸೂರು ಮಸಾಲೆ ದೋಸೆ, ಇಡ್ಲಿ, ಸಾಂಬರ್, ಚಟ್ನಿ, ಶ್ಯಾವಿಗೆ ಉಪ್ಪಿಟ್ಟು, ಸಬ್ಬಕ್ಕಿ ವಡೆ, ಮೈಸೂರು ಪಾಕ್, ಗೋಧಿ ಹಾಲ್ಬಾಯಿ ಮತ್ತು ಬಾದಾಮ್ ಹಲ್ವಾ ಸೇರಿದ್ದು ಇವುಗಳ ಜೊತೆಗೆ ರಾಗಿ ಮತ್ತು ಗೋಧಿ ಬಿಸ್ಕೆಟ್, ಚಹಾ ಮತ್ತು ಕಾಫಿ. ಇವೆಲ್ಲವನ್ನೂ ರಾಷ್ಟ್ರಪತಿಗಳ ಆಹಾರ ಆದ್ಯತೆಗಳಿಗೆ ಅನುಗುಣವಾಗಿ ತಯಾರಿಸಲಾಗಿತ್ತು ಎಂದು ಹೇಳಿದ್ದಾರೆ.
ಮೈಸೂರು ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್, ಪುತ್ರ ಆದ್ಯವೀರ್ ನರಸಿಂಹರಾಜ ಒಡೆಯರ್ ಮುಂತಾದವರಿದ್ದರು.
ಕೋಟ್:
ರಾಷ್ಟ್ರಪತಿಗಳು ಅರಮನೆಯ ಕೆಲವು ಮುಖ್ಯ ಭಾಗಗಳನ್ನು ವೀಕ್ಷಿಸಿ ಆನಂದಿಸಿದರು. ಉಪಹಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ರಾಷ್ಟ್ರಪತಿಗಳನ್ನು ಆತಿಥ್ಯ ವಹಿಸುವುದು ನನಗೆ ಅಪಾರ ಗೌರವ ಮತ್ತು ಸಂತೋಷದ ಕ್ಷಣವಾಗಿತ್ತು.
-ಪ್ರಮೋದಾದೇವಿ ಒಡೆಯರ್,
ಮೈಸೂರು