ಅರಮನೆಯಲ್ಲಿ ಸಡಗರದಲ್ಲೇ ಸಿಂಹಾಸನ ಜೋಡಣೆ

Pratheek
2 Min Read

 ಪಬ್ಲಿಕ್ ಅಲರ್ಟ್


ಮೈಸೂರು: ರಾಜವಂಶಸ್ಥರು ಅರಮನೆಯಲ್ಲಿ ನವರಾತ್ರಿ ಪೂಜಾ ಕೈಂಕರ್ಯಗಳನ್ನು ನಡೆಸುವ ಹಿನ್ನೆಲೆಯಲ್ಲಿ ಇಂದು ದರ್ಬಾರ್ ಹಾಲ್ನಲ್ಲಿ ಮಹಾರಾಣಿ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ನುರಿತ ಗೆಜ್ಜಗಳ್ಳಿಯವರು ರತ್ನಖಚಿತ ಸ್ವರ್ಣ ಸಿಂಹಾಸನದ ಜೋಡಣೆ ಕಾರ್ಯ ನಡೆಸಿದರು.
ಇದಕ್ಕೂ ಮುನ್ನ ದರ್ಬಾರ್ ಹಾಲ್ನಲ್ಲಿ ಗಣಪತಿ ಹೋಮ, ಚಾಮುಂಡಿ ತಾಯಿಯ ಪೂಜೆ, ಹೋಮ-ಹವನಗಳನ್ನು ನೆರವೇರಿಸಲಾಯಿತು. ಬಳಿಕ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನವನ್ನು ತಂದು ಜೋಡಿಸಲಾಯಿತು. ಈ ಹಿನ್ನೆಲೆಯಲ್ಲಿ ಬೆ.8.30ರಿಂದ ಮ.1ಗಂಟೆಯವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿತ್ತು. ನವರಾತ್ರಿ ಸಂದರ್ಭದಲ್ಲಿ ಮಾತ್ರ ನೋಡ ಸಿಗುವ ರತ್ನಖಚಿತ ಸ್ವರ್ಣ ಸಿಂಹಾಸನ ರಾಜವಂಶಸ್ಥರಿಗೆ ಸೇರಿದೆ. ಇದನ್ನು ಗೆಜ್ಜೆಗಳ್ಳಿಯ ಗ್ರಾಮಸ್ಥರು ಜೋಡಿಸುತ್ತಾರೆ. ಆ ಬಳಿಕ ದರ್ಬಾರ್ ಹಾಲ್ನಲ್ಲಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಪರದೆಯಿಂದ ಮುಚ್ಚಲಾಗುತ್ತದೆ. ಸೆ.22ರ ದಸರಾ ಉದ್ಘಾಟನೆಯ ದಿನ ಅರಮನೆಯಲ್ಲಿ ರಾಜ ಪರಂಪರೆಯಂತೆ ನವರಾತ್ರಿ ಸಂಭ್ರಮ ಜರುಗಲಿದ್ದು, ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗಿನ ಶುಭ ಗಳಿಗೆಯಲ್ಲಿ ಸಿಂಹಾಸನಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿ, ಖಾಸಗಿ ದರ್ಬಾರ್ ನಡೆಸುತ್ತಾರೆ.
ಸಿಂಹಾಸನದ ಬಿಡಿ ಭಾಗಗಳು:ನವರಾತ್ರಿಯ ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಆ ನಂತರ ಸಂಜೆ ಪ್ರತಿದಿನ ಖಾಸಗಿ ದರ್ಬಾರ್ ನಡೆಸುತ್ತಾರೆ. ವಿಜಯದಶಮಿಯ ದಿನ ಸಿಂಹಾಸನಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜವಂಶಸ್ಥರ ನವರಾತ್ರಿ ಪೂರ್ಣಗೊಳ್ಳುತ್ತದೆ. ಅ.31ರಂದು ಸಿಂಹಾಸನ ವಿಸರ್ಜನೆಯಾಗುತ್ತದೆ. 13 ಭಾಗಗಳಾಗಿ ವಿಸರ್ಜನೆಯಾದ ಸಿಂಹಾಸನವನ್ನು ಪುನಃ ಅರಮನೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಯಲ್ಲಿ ಭದ್ರವಾಗಿಡಲಾಗುತ್ತದೆ. ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಉಪಸ್ಥಿತಿಯಲ್ಲಿ ಅರಮನೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಯಿಂದ ರತ್ನಖಚಿತ ಸ್ವರ್ಣ ಸಿಂಹಾಸನವನ್ನು ಹೊರತೆಗೆದು ಪೂಜೆಯಾದ ನಂತರ ಸಿಂಹಾಸನ ಜೋಡಣೆಗೆ ಚಾಲನೆ ದೊರೆಯಲಿದೆ. ಈ ವೇಳೆ ಪಟ್ಟದ ಆನೆ, ಹಸು, ಕುದುರೆ ಪಾಲ್ಗೊಳ್ಳುತ್ತವೆ. ಈ ಸಲ ಅರಮನೆಯಲ್ಲಿ ನಡೆಯುವ ಪೂಜೆಗಳಿಗೆ ಪಟ್ಟದ ಆನೆಗಳಾಗಿ ಶ್ರೀಕಂಠ ಮತ್ತು ಏಕಲವ್ಯ ಆನೆಗಳನ್ನು ಆಯ್ಕೆ ಮಾಡಲಾಗಿದೆ.

ಸಿಂಹಾಸನ ಜೋಡಣೆ ಹೇಗೆ?: ಸಿಂಹಾಸನವನ್ನು 13 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಆಸನದ ಒಂದು ಭಾಗ, ಅದನ್ನು ಹತ್ತಲು ಬಳಸುವ ಮೆಟ್ಟಿಲು ಮತ್ತೊಂದು ಭಾಗ ಹಾಗೂ ಇದಕ್ಕೆ ಕಳಶವಿಟ್ಟಂತೆ ಸಿಂಗಾರಗೊಳಿಸುವ ಛತ್ರಿ ಮೂರನೇ ಭಾಗವಾಗಿ ಪ್ರತ್ಯೇಕವಾಗಿ ಇರಿಸಿದ್ದು, ಎಲ್ಲವನ್ನೂ ಜೋಡಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ರಾಜವಂಶಸ್ಥರು ಪೂಜೆ ಸಲ್ಲಿಸುತ್ತಾರೆ. ಬಳಿಕ ಸಿಂಹದ ಆಕೃತಿಯನ್ನು ಜೋಡಿಸಲಾಗುತ್ತದೆ. ಆಗ ಪರಿಪೂರ್ಣ ಸಿಂಹಾಸನವಾಗುತ್ತದೆ. ಅರಮನೆಯಲ್ಲಿ ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದವರೆಗೂ ಪ್ರವಾಸಿಗರ ವೀಕ್ಷಣೆಗೆ ನಿಷೇಧ ಹೇರಲಾಗುತ್ತಿದೆ. 

Share This Article
Leave a Comment