*ಪಬ್ಲಿಕ್ ಅಲರ್ಟ್ ನ್ಯೂಸ್ :- *ಮಕ್ಕಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬಿತ್ತಬೇಕು : ಡಾ. ಹೆಚ್. ಸಿ. ಮಹದೇವಪ್ಪ*
ಮೈಸೂರು,ಜ.6(ಕರ್ನಾಟಕ ವಾರ್ತೆ):-
ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳ ಜೊತೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ರೂಡಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬಿತ್ತಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು.
ಅವರು ಇಂದು ಮಹಾರಾಜ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ಜಿಲ್ಲೆ ಕಲೆ, ಸಾಹಿತ್ಯ, ಪುರಾತತ್ವ, ಸಂಗೀತಗಳ ಉಗಮ ಸ್ಥಾನ. ನಾಲ್ವಡಿ ಕೃಷ್ಣಾರಾಜ ಒಡೆಯರ್ ಅವರು ತಮ್ಮ ಆಡಳಿತದ ಸಮಯದಲ್ಲೇ ಸಾಹಿತ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವಾತಂತ್ರ್ಯ ಕ್ಕೆ ಮೊದಲು ಜನ ಜೀವನ ಹೇಗಿರಬೇಕು ಎಂದು ಅಡಿಪಾಯ ಹಾಕಿದರು. ಶಿಕ್ಷಣ, ಮೀಸಲಾತಿ, ಮಹಿಳಾ ಸಬಲೀಕಾರಣ, ಅರೋಗ್ಯ, ಕೃಷಿ, ತೋಟಗಾರಿಕೆ, ವಿದ್ಯುತ್, ರೈಲ್ವೆ, ಮೈಸೂರು ಪೇಪರ್ ಮಿಲ್,ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣ ಮಾಡಿದರು. ವಿದ್ಯಾರ್ಥಿಗಳು ನಾಲ್ವಡಿ ಕೃಷ್ಣ ಒಡೆಯರ್ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಮೈಸೂರು ಜಿಲ್ಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನ ಗಳಿಸಬೇಕು. ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಬೇಕು ಹಾಗೂ ಸಂವಿಧಾನದ ಆಶಯಗಳಾದ ಸ್ವತಂತ್ರ, ಸಮಾನತೆ, ಭ್ರಾತೃತ್ವ ಭಾವನೆಗಳನ್ನು ಬೆಳೆಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನದ ಪೀಠಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಉತ್ತಮ ಭಾರತದ ಪ್ರಜೆಗಳಾಗಿ ಹೊರಹೊಮ್ಮವಂತೆ ಮಾಡಬೇಕು ಎಂದು ಹೇಳಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ
ಕೆ. ಹರೀಶ್ ಗೌಡ ಅವರು ಶಾಲಾ ಮಕ್ಕಳಿಗೆ ಶುಭ ಹಾರೈಸಿ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆಯನ್ನು ಆನಾವರಣಗೊಳಿಸಲಿಕ್ಕೆ ಉತ್ತಮ ವೇದಿಕೆಯಾಗಿದೆ. ಸೋಲು, ಗೆಲುವಿನ ಬಗ್ಗೆ ಚಿಂತಿಸಬೇಡಿ, ಪ್ರತಿಭೆಯ ಪ್ರದರ್ಶನ ನೀಡಿ ಒಂದಲ್ಲ ಒಂದು ದಿನ ಗೆಲುವು ಸಿಕ್ಕೆಸಿಗುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ. ಬಿ. ಸೋಮೇಗೌಡ ಅವರು ಮಾತನಾಡಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಶಾಲಾ, ತಾಲ್ಲೂಕು ಹಾಗೂ ಕ್ಲಸ್ಟರ್ ಮಟ್ಟದಲ್ಲಿ ಭಾಗವಹಿಸಿ ವಿಜೇತರಾಗಿ ಬಂದಿದ್ದಾರೆ. ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿಗಳು ತಲುಪಿರುವಿದು ಅವರ ಶ್ರಮದ ಪ್ರತಿಫಲ. ಶ್ರಮ ಹಾಗೂ ಅಭ್ಯಾಸ ದಿಂದ ಗುರಿ ತಲುಪಬಹುದು. ಸೋಮರಿತನವನ್ನು ಬಿಡಿ ಜ್ಞಾನವನ್ನು ತುಂಬಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಯಟ್ ನ ಉಪ ನಿರ್ದೇಶಕ ಹಾಗೂ ಪ್ರಾಂಶುಪಾಲರಾದ ಸಿ. ರ್ ನಾಗರಾಜಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ ಉದಯಕುಮಾರ್, ಶಾಲಾ ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಹಾಗೂ ಶಿಕ್ಷಣಾಧಿಕಾರಿ ಎಂ. ಆರ್. ಅನಂತರಾಜು ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
