ಮೈಸೂರಿನಲ್ಲಿ ಆಟೋಮೊಬೈಲ್‌, ಎಲೆಕ್ಟ್ರಿಕ್‌ ವಾಹನ ಉತ್ಪಾದನಾ ಕ್ಲಸ್ಟರ್‌ ಸ್ಥಾಪಿಸಿ: ಎಚ್‌ಡಿಕೆಗೆ ಯದುವೀರ್

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರಿನಲ್ಲಿ ಆಟೋಮೊಬೈಲ್‌, ಎಲೆಕ್ಟ್ರಿಕ್‌ ವಾಹನ ಉತ್ಪಾದನಾ ಕ್ಲಸ್ಟರ್‌ ಸ್ಥಾಪಿಸಿ: ಎಚ್‌ಡಿಕೆಗೆ ಯದುವೀರ್‌ ಮನವಿ

ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವ ಪತ್ರ ನೀಡಿದ ಮೈಸೂರು-ಕೊಡಗು ಸಂಸದರು

ಮೈಸೂರು, ಜ. 13: ಸಾಂಸ್ಕೃತಿಕ ನಗರಿ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ಕೈಗಾರಿಕೆಗೆ ಇನ್ನಷ್ಟು ಒತ್ತು ನೀಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ ಮಾಡಬೇಕು ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಂಸದ ಯದುವೀರ್‌ ಒಡೆಯರ್‌, ಮೈಸೂರು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಆದ್ಯತೆ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.

ಸಂಪರ್ಕ ಹೆಚ್ಚು
ಮೈಸೂರು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ಮತ್ತು ರೈಲು ಸಂಪರ್ಕಗಳ ಮೂಲಕ ಬೆಂಗಳೂರು, ಚೆನ್ನೈ ಮತ್ತು ಕೇರಳಕ್ಕೆ ಅತ್ಯುತ್ತಮ ಸಂಪರ್ಕ ಹೊಂದಿದೆ. ನಗರವು ಬೆಂಗಳೂರು ಮತ್ತು ಕಣ್ಣೂರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಗೂ ಸಂಪರ್ಕ ಹೊಂದಿದೆ. ಈ ನಿಟ್ಟಿನಲ್ಲಿ ಆಟೋಮೊಬೈಲ್ ಮತ್ತು ವಾಹನ ಉತ್ಪಾದನಾ ಘಟಕ ಆರಂಭಿಸಿದರೆ ಅನುಕೂಲ ಹೆಚ್ಚು ಎಂದು ಸಂಸದರು ವಿವರಿಸಿದ್ದಾರೆ.

ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳು ಕೂಡ ಇಲ್ಲಿವೆ. ಇಲ್ಲಿ ತಾಂತ್ರಿಕ ತರಬೇತಿಯೂ ಹೆಚ್ಚಾಗಿದೆ. ಮೈಸೂರಿನಲ್ಲಿ ಭೂ ಲಭ್ಯತೆ, ಕಡಿಮೆ ದಟ್ಟಣೆ, ಉತ್ತಮ ಗುಣಮಟ್ಟದ ಜೀವನ ಮತ್ತು ಕೈಗಾರಿಕೆಗೆ ಪೂರಕವಾದ ವಾತಾವರಣವಿದೆ ಎಂದು ಸಂಸದರು ಹೇಳಿದ್ದಾರೆ.

ಉದ್ಯೋಗಾವಕಾಶ ಹೆಚ್ಚಳ
ಮೈಸೂರಿನಲ್ಲಿ ಆಟೋಮೊಬೈಲ್ ಮತ್ತು ಇವಿ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ ಮಾಡುವುದರಿಂದ ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ, ಯುವಕರಿಗೆ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದು ಆಟೋ ಘಟಕಗಳು, ಬ್ಯಾಟರಿಗಳು, ಎಲೆಕ್ಟ್ರಾನಿಕ್ಸ್, ಲಾಜಿಸ್ಟಿಕ್ಸ್ ಕೈಗಾರಿಕೆಗಳನ್ನೂ ಬೆಂಬಲಿಸುತ್ತದೆ ಎಂದು ಯದುವೀರ್‌ ವಿವರಿಸಿದ್ದಾರೆ.

ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ್ ಮತ್ತು ಇವಿ ಕ್ಷೇತ್ರದತ್ತ ಬಿಜೆಪಿ ಸರ್ಕಾರ ನೀಡಿರುವ ಆದ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಪ್ರಮುಖ ಕೈಗಾರಿಕಾ ಕ್ಲಸ್ಟರ್‌ ಆರಂಭಿಸಲು‌ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕುಮಾರಸ್ವಾಮಿಗೆ ಯದುವೀರ್‌ ಪತ್ರದ ಮೂಲಕ ಮನವಿ ಮಾಡಿದ್ದಾರೆ.

Share This Article
Leave a Comment