ಪಬ್ಲಿಕ್ ಅಲರ್ಟ್ ನ್ಯೂಸ್:-ಅಮರ ಶಿಲ್ಪಿ ಜಕಣಾಚಾರಿ ಶಿಲ್ಪ ಕಲೆ ಎಂದಿಗೂ ಅಜರಾಮರ – ಡಾ. ಡಿ. ತಿಮ್ಮಯ್ಯ*
ಮೈಸೂರು, ಜ.01(ಕರ್ನಾಟಕ ವಾರ್ತೆ): ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಕಲೆ ಮತ್ತು ಶಿಲ್ಪಕಲೆ ಎಂದಿಗೂ ಅಮರ ನಿತ್ಯ ನಿರಂತರ. ಅವರ ಕಲೆ ಮತ್ತು ಶಿಲ್ಪಕಲೆ ಕಾಲದಿಂದ ಕಾಲಕ್ಕೆ ಬೆಳಕಾಗುವಂತಹ ಶಕ್ತಿಯನ್ನು ಹೊಂದಿವೆ. ಇನ್ನೂ ಲಕ್ಷಾಂತರ ವರುಷ ಕಳೆದರೂ ಅವರ ಕಲೆ ಮತ್ತು ಶಿಲ್ಪಕಲೆ ಅಮರವಾಗಿರುತ್ತದೆ. ಮುಂದಿನ ಪೀಳಿಗೆಗೆ ಬೆಳಕನ್ನು ಚೆಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ-2026 ಯನ್ನು ದೀಪ ಬೆಳಗಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಲಿನಲ್ಲಿ ಕೆತ್ತನೆ ಮಾಡಿ ಚಿತ್ರಕಲೆಗಳನ್ನು ಬಿಡಿಸುವುದು ಅತ್ಯಂತ ಕಠಿಣ ಕೆಲಸ ಆದರೆ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಅವರು ದೇವಾಲಯಗಳನ್ನು ಎಷ್ಟು ಸುಂದರವಾಗಿ ಕೆತ್ತನೆ ಮಾಡಿದ್ದಾರೆ ಎಂಬುದನ್ನು ನಾವು ನೋಡಬಹುದು. ಅವರ ಶ್ರಮ ಹಾಗೂ ಶ್ರದ್ಧೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಪ್ರಶಂಸಿಸಿದರು.
ಯಾವುದೇ ದೇಶಕ್ಕೂ ಹೋದರು ನಮ್ಮ ದೇಶದಲ್ಲಿರುವ ದೇವಾಲಯಗಳು ವಿಗ್ರಹಗಳ ಕೆತ್ತನೆಗಳು ಎಲ್ಲಿಯೂ ಇಲ್ಲ. ಇದಕ್ಕೆ ಕಾರಣ ನಮ್ಮ ಶಿಲ್ಪಿಗಳು. ಅಮರಶಿಲ್ಪಿ ಜಕಣಾಚಾರಿ ಅವರ ಶ್ರಮ ಆದರ್ಶಗಳನ್ನು ವಿಶ್ವಕರ್ಮ ಸಮಾಜದ ಜನರು ಮೈಗೂಡಿಸಿಕೊಂಡು ಇನ್ನೂ ಅವರ ಹೆಸರನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ನ ಶಾಸಕರಾದ ಸಿ. ಎನ್. ಮಂಜೇಗೌಡ ಅವರು ಮಾತನಾಡಿ ಅಮರ ಶಿಲ್ಪಿ ಜಕಣಾಚಾರಿ ಅವರು ಕರ್ನಾಟಕದ ಮಹಾನ್ ಶಿಲ್ಪಿ, ತಮ್ಮ ಅದ್ಭುತವಾದ ಕೆತ್ತನೆಯಿಂದ ಹೆಚ್ಚು ಜನಪ್ರಿಯತೆಯನ್ನು ಹೊಂದಿದವರು. ಇಂತಹ ಮಹನೀಯರ ಸಂಸ್ಮರಣಾ ದಿನಾಚರಣೆ ಮಾಡುವುದರ ಮೂಲಕ ಅವರನ್ನು ಸ್ಮರಣೆ ಮಾಡಲಾಗುತ್ತಿದ್ದು, ವಿಶ್ವಕರ್ಮ ಅಮರ ಶಿಲ್ಪಿ ಜಕಣಚಾರಿ ಅವರ ಕಲೆ ಮತ್ತು ಶಿಲ್ಪ ಕಲೆ ನಮಗೆಲ್ಲ ಪ್ರೇರಣೆಯಾಗಿದೆ ಎಂದು ಹೇಳಿದರು.
ಅಮರಶಿಲ್ಪಿ ಜಕಣಾಚಾರಿ ಅವರ ಕಲೆ ಇನ್ನೂ ಎಷ್ಟು ತಲೆಮಾರು ಬಂದರು ಅವರ ಹೆಸರು ಅಮರವಾಗಿರುತ್ತದೆ. ಪ್ರತಿಯೊಬ್ಬರು ಜಕಣಾಚಾರಿ ಬಗ್ಗೆ ತಿಳಿದುಕೊಳ್ಳಬೇಕು, ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಮಾತನಾಡಿ ಭಾರತದಲ್ಲಿ ಯಾವ ಶಿಲ್ಪಿ ಬಂದರೂ ಜಕಣಾಚಾರಿ ಅವರ ಹೆಸರು ಅಳಿಸಲಾಗುವುದಿಲ್ಲ ಅದಕ್ಕಾಗಿಯೇ ಅವರಿಗೆ ಅಮರಶಿಲ್ಪಿ ಜಕಣಾಚಾರಿ ಎಂದು ಕರೆಯುತ್ತಾರೆ ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಜನರು ಮೊದಲಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದಾರೆ, ಈ ಸಮಾಜವಿಲ್ಲದೆ ಭಾರತವಲ್ಲ, ಏಕೆಂದರೆ ಒಂದು ಮದುವೆ ಆಗಬೇಕೆಂದರೆ ತಾಳಿ ಮಾಡಿಕೊಡಲು ಮನೆ ಕಟ್ಟಲು ಮರಗೆಲಸ ಮಾಡಲು ವಿಶ್ವಕರ್ಮ ಸಮಾಜ ಬೇಕು ಇವರ ಕೆಲಸವಿಲ್ಲದೆ ಯಾವುದೇ ಶುಭ ಕಾರ್ಯಗಳು ನಡೆಯಲ್ಲ ಹಾಗಾಗಿ ಮೂಲ ಕಸುಬುಗಳನ್ನು ಮರೆಯಬೇಡಿ ಅದೇ ರೀತಿ ತಮ್ಮ ಮೂಲ ಕಸುಬು ಒಂದನ್ನೇ ಮಕ್ಕಳಿಗೂ ದಾರಿ ಮಾಡಿಕೊಡಬಾರದು. ಸಮುದಾಯದಲ್ಲಿ ಬದಲಾವಣೆ ಆಗಬೇಕು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗಬೇಕು ಹಾಗೂ ಉನ್ನತ ಹುದ್ದೆಗಳಲ್ಲಿ ಇರಬೇಕು ಆ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಿ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ (ನಿವೃತ್ತ) ಮಂಟೇಲಿಂಗಾಚಾರ್ ಅವರು ಮಾತನಾಡಿ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಅವರು ಏಕಮೇವ ಅದ್ವಿತೀಯ. ಶಿಲ್ಪಿ, ತಮ್ಮ ಜೀವನವನ್ನೇ ಶಿಲ್ಪಕಲೆಗೆ ಮುಡಿಪಿಟ್ಟಂತಹ ಮಹಾನ್ ವ್ಯಕ್ತಿ, ಇವರಿಗೆ ಸಮಾನವಾದ ಕಲೆಯ ಶಕ್ತಿ ಬೇರೊಂದು ಇಲ್ಲ. ಇವರನ್ನು ಜಗತ್ ಪ್ರಭು ಎಂದು ಕರೆಯುತ್ತಿದ್ದರು. ಇವರ ಶಿಲ್ಪಗಳು ಭಾರತದ ವಾಸ್ತುಶಿಲ್ಪ ಪರಂಪರೆಗೆ ಅಪಾರ ಕೊಡುಗೆ ನೀಡಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಿಗೂ ಮೂಲವಾದಂತಹದ್ದು ವಿಶ್ವಕರ್ಮ ರ ಜ್ಞಾನ ಮತ್ತು ಶಿಲ್ಪ. ಇವೆರಡೂ ಇರುವುದು ವಿಶ್ವಕರ್ಮ ಜನಾಂಗದವರಲ್ಲಿ ಮಾತ್ರ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ. ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ. ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ ಸುದರ್ಶನ್, ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
