ಪಬ್ಲಿಕ್ ಅಲರ್ಟ್
ಮೈಸೂರು: ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಹೆಚ್ಚಿನ ಯುವ ಸಮೂಹವನ್ನು ತೊಡಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ೩೫೨೦ ಮಕ್ಕಳಿಗೆ ತರಬೇತಿ ನೀಡಲು ಸಿದ್ಧಪಡಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ವಿಎಸ್‌ಎಂ ಉಪಮಹಾನಿರ್ದೇಶಕ ಏರ್ ಕಮಾಂಡರ್ ಎಸ್.ಬಿ.ಅರುಣ್ ಕುಮಾರ್ ತಿಳಿಸಿದರು.
ಮೈಸೂರಿನಲ್ಲಿ ಹೆಚ್ಚುವರಿ ಬ್ಯಾಟಲಿಯನ್‌ಗೆ ಚಾಲನೆ ನೀಡಿ ಈ ವಿಷಯ ತಿಳಿಸಿದ ಅವರು, ಕೇಂದ್ರ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಪ್ರಸ್ತುತ ಯುವಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಯುವಜನರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಭಾರತದಾದ್ಯಂತ ಪ್ರಮುಖ ವಿಸ್ತರಣೆಗೆ ಒಳಗಾಗುತ್ತಿದೆ. ಬೆಂಗಳೂರಿನ ಬೃಂದಾವನ ವಿಸ್ತರಣೆ ಮೈಸೂರಿನಲ್ಲಿ 1 ಕರ್ನಾಟಕ ಬ್ಯಾಟಲಿಯನ್ ಅನ್ನು 16 ಕರ್ನಾಟಕ ಬ್ಯಾಟಲಿಯನ್ ಗೆ ಮೇಲ್ದರ್ಜೆಗೇರಿಸಲಾಗಿದೆ. ಬಿಎನ್‌ನ ಎನ್‌ಸಿಸಿ ಕೆಡೆಟ್‌ಗಳ ಘಟಕ ಬಲವು 214 ಕೆಡೆಟ್‌ಗಳಿಂದ 3520 ಕೆಡೆಟ್‌ಗಳಿಗೆ ಹೆಚ್ಚಾಗಲಿದೆ. ಇಂದಿನಿಂದ ಇದು 7 ಕಂಪನಿ ಮತ್ತು 24 ಪಡೆಗಳನ್ನು ಹೊಂದಿರುತ್ತದೆ. ಸಂಸ್ಥೆಗಳ ವ್ಯಾಪ್ತಿ 3 ಸಂಸ್ಥೆಗಳಿಂದ 37 ಸಂಸ್ಥೆಗಳಿಗೆ ಹೆಚ್ಚಾಗಲಿದೆ ಎಂದು ತಿಳಿಸಿದರು.
ಕೇವಲ ಎನ್ ಸಿಸಿ ಶಿಸ್ತು ಮಾತ್ರವಲ್ಲ, ಎಲ್ಲಾ ರೀತಿಯ ನಾಯಕತ್ವ, ಯುವಕರ ವ್ಯಕ್ತಿತ್ವ ರೂಪಿಸುತ್ತದೆ. ಶಾಲಾ ಮಕ್ಕಳು ಇದರ ಸದವಕಾಶವನ್ನು ಬಳಸಿಕೊಳ್ಳಬೇಕಿದೆ. ಇದನ್ನು ಏಕಾಎಕಿ ಮಾಡಿಲ್ಲ. ಎರಡು ವರ್ಷದ ಹಿಂದೆಯಿಂದಲೂ ಇದನ್ನು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಯಾವೆಲ್ಲಾ ಸಂಸ್ಥೆಗಳ ಮೂಲಕ ತರಬೇತಿ ನೀಡಬಹುದು. ಪ್ರತಿ ಶಾಲೆಗೂ ತೆರಳಿ ನಮ್ಮ ತಂಡ ಅಧ್ಯಯನ ನಡೆಸಿದೆ. ಯಾವೆಲ್ಲಾ ಶಾಲೆಗಳಲ್ಲಿ ಎನ್ ಸಿಸಿ ಮಾಡಬಹುದು ಎಂಬ ಸೌಲಭ್ಯಗಳನ್ನು ನೋಡಿ ಕಳುಹಿಸಿದರ ವರದಿ ಆಧಾರದ ಮೇರೆಗೆ ಇದನ್ನು ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕೆ ಬೇಕಾಗುವ ಸಿಬ್ಬಂದಿಗಳನ್ನು ಕೇಂದ್ರದಿಂದ ನಿವೃತ್ತ ಯೋಧರನ್ನು ಬಳಸಿಕೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ ಸಂಸ್ಥೆಯ ಶಿಕ್ಷಕರಿಗೂ ತರಬೇತಿ ನೀಡಿ ನೊಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಎನ್ ಸಿಸಿ ಮೂರು ವರ್ಷದ ಕೋರ್ಸ್ ಆಗಿದ್ದು, ಮೂರು ವರ್ಷದ ಪೈಕಿ ಮೊದಲ ವರ್ಷ ಕೊಠಡಿಯೊಳಗಿನ ಪಾಠ ಮಾಡಲಾಗುತ್ತದೆ. ಎರಡು ಹಾಗೂ ಮೂರನೇ ವರ್ಷದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಇಲಾಖೆ ಸಿದ್ಧವಾಗಿದೆ ಎಂದು ತಿಳಿಸಿದರು.
ಗ್ರೂಪ್ ಕಮಾಂಡರ್ ಕರ್ನಲ್ ರೋಹಿತ್ ಠಾಕೂರ್, ಕಮಾಂಡಿಂಗ್ ಆಫೀಸರ್ ಕರ್ನಲ್ ವಿವೇಕ್ ಸಾವನಗೌಡರ್, ಎನ್‌ಸಿಸಿ ಘಟಕದ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶಿವರಾಜ್ ಮೋರ್ ಉಪಸ್ಥಿತರಿದ್ದರು.
