ಅದ್ಧೂರಿಯಿಂದ ಜರುಗಿದ ಹಿಂಡಿಮಾರಮ್ಮನ ಕೊಂಡೋತ್ಸವ

Chethan
2 Min Read

ಪಬ್ಲಿಕ್ ಅಲರ್ಟ್


ಯಳಂದೂರು: ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದಲ್ಲಿ ಶ್ರೀ ಹಿಂಡಿಮಾರಮ್ಮನ ಕೊಂಡೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆಯಿಂದಲೇ ಹಿಂಡಿಮಾರಮ್ಮದೇವಿಗೆ ವಿಶೇಷ ಅಲಂಕಾರ, ಹೋಮ, ಹವನಗಳನ್ನು ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಂಜೆ ಸಮಯದಲ್ಲಿ ತಮ್ಮಡಿಗಳು ದೇವಿಯ ಉತ್ಸವ ಮೂರ್ತಿಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿಕೊಂಡು ಅಗರ ಗ್ರಾಮದಲ್ಲಿರುವ ಹಾಕಿದ್ದ ಕೊಂಡದ ಸ್ಥಳಕ್ಕೆ ಹೋಗಿ ಕೊಂಡವನ್ನು ಹಾಯ್ದರು, ತಮ್ಮಡಿಗಳಲ್ಲದೇ ಈ ಕೊಂಡಕ್ಕೆ ಹರಕೆ ಹೊತ್ತು ಬಂದಿದ್ದ ನೂರಾರು ಭಕ್ತರು ತಮ್ಮಡಿಗಳ ನಂತರ ಕೊಂಡವನ್ನು ಹಾಯ್ದರು. ಜೊತೆಗೆ ಹರಕೆ ಹೊತ್ತಿದ್ದ ಭಕ್ತರು ಸಹ ಕೊಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ಯಳಂದೂರು ತಾಲೂಕು ಹಾಗೂ ರಾಜ್ಯದ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಕಡೇಗಳಿಂದ ಸಾವಿರಾರು ಜನರು ಆಗಮಿಸಿ ಕೊಂಡೋತ್ಸವವನ್ನು ಕಣ್ತುಂಬಿಕೊಂಡರು. ಹಿಂಡಿ ಮಾರಮ್ಮನ ಕೊಂಡೋತ್ಸವದ ಪ್ರಯುಕ್ತ ಬಂದಿದ್ದ ಭಕ್ತಾಧಿಗಳು ದೇವಸ್ಥಾನದ ಅಕ್ಕಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ಸಿಹಿ ತಿನಿಸುಗಳು, ಬಲೂನ್‌ಗಳು ಸೇರಿದಂತೆ ಇತರೆ ಮಕ್ಕಳ ಆಟಿಕೆಗಳನ್ನು ಕೊಂಡುಕೊಳ್ಳುತ್ತಿದ್ದದ್ದು ಕಂಡುಬಂದಿತು.
ದೀಪಾವಳಿ ಹಬ್ಬದಂದು ಆರಂಭವಾಗುವ ತಾಲೂಕಿನ ಅಗರ- ಮಾಂಬಳ್ಳಿ ಗ್ರಾಮದ ಹಿಂಡಿಮಾರಮ್ಮನ ದೇವರ ಹಬ್ಬವು ೪ ದಿನಗಳ ಕಾಲ ನಡೆಯುತ್ತದೆ. ಅಗರ ಮಾಂಬಳ್ಳಿ, ಕಿನಕಹಳ್ಳಿ, ಕಟ್ನವಾಡಿ, ಬಸವಾಪುರ, ಬನ್ನಿಸಾರಿಗೆ, ಚಿಕ್ಕ ಉಪ್ಪಾರ ಬೀದಿ ಗ್ರಾಮಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಬಾಯಿಗೆ ಬೀಗ: ಅಗರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದ ಹಿಂಡಿಮಾರಮ್ಮನ ಕೊಂಡೋತ್ಸವದಲ್ಲಿ ಹರಕೆ ಹೊತ್ತಿದ್ದ ನೂರಾರು ಭಕ್ತರು ತಮ್ಮ ಬಾಯಿಗೆ ಬೀಗಗಳನ್ನು ಹಾಕಿಕೊಂಡು ಹರಕೆ ತೀರಿಸಿದರಲ್ಲದೇ ಕೊಂಡವನ್ನು ಹಾಯ್ದರು. ತಮ್ಮ ಇಷ್ಟಾರ್ಥಗಳನ್ನು ಮಾರಮ್ಮ ದೇವಿಯ ಬಳಿ ಹರಕೆ ಹೊತ್ತಿಕೊಂಡ ಭಕ್ತರು ತಮ್ಮ ಹರಕೆಗಳು ಫಲಪ್ರದವಾದ ನಂತರ ದೀಪಾವಳಿ ಸಮಯದಲ್ಲಿ ನಡೆಯುವ ಕೊಂಡೋತ್ಸವದಲ್ಲಿ ಈ ವಿಧಿಯನ್ನು ತೀರಿಸುವ ವಾಡಿಕೆ ಇದೆ. ತಮ್ಮ ಬಾಯಿಗೆ ದೇವಸ್ಥಾನದ ತಮ್ಮಡಿಗಳಿಂದ ಬೀಗ ಹಾಕಿಸಿಕೊಂಡು ದೇವಸ್ಥಾನದಿಂದ ಹೊರಡುವ ಇವರು, ಕೊಂಡೋತ್ಸವವು ನಡೆಯುವ ಸ್ಥಳದವರೆಗೆ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಜೊತೆ ಹೋಗಿ ತಮ್ಮಡಿಗಳು ಕೊಂಡವನ್ನು ಹಾಯ್ದ ನಂತರ ಇವರು ಕೊಂಡವನ್ನು ಹಾಯುವುದು ವಾಡಿಕೆ ಸಾಂಗವಾಗಿ ನೆರವೇರಿತು. ಈ ರೀತಿಯ ಬಾಯಿಗೆ ಬೀಗ ಹಾಕಿಸಿಕೊಂಡ ಭಕ್ತರು ಬೆಳಿಗ್ಗೆಯಿಂದಲೇ ಉಪವಾಸವಿದ್ದು ಕೊಂಡೋತ್ಸವದಲ್ಲಿ ಭಾಗವಹಿಸುತ್ತಾರೆ. ಕೊಂಡೋತ್ಸವ ಮುಗಿದ ನಂತರ ಬಾಯಿಗೆ ಹಾಕಿರುವ ಬೀಗವನ್ನು ತಾವೇ ತೆಗೆದುಕೊಳ್ಳುತ್ತಾರೆ.
ಹಿಂಡಿಮಾರಮ್ಮ ಜಾತ್ರೆ ವಿದ್ಯುಕ್ತ ತೆರೆ: ತಾಲೂಕಿನ ಅಗರ-ಮಾಂಬಳ್ಳಿ ಸೇರಿದಂತೆ ೭ ಗ್ರಾಮಗಳು ಸೇರಿ ೪ ದಿನಗಳ ಕಾಲ ಆಚರಿಸುವ ಹಿಂಡಿ ಮಾರಮ್ಮ ಜಾತ್ರೆಗೆ ಶುಕ್ರವಾರ ವಿದ್ಯುಕ್ತವಾಗಿ ತೆರೆ ಬಿದ್ದಿತು.
ದೀಪಾವಳಿ ಹಬ್ಬದಂದು ಆರಂಭವಾಗುವ ತಾಲೂಕಿನ ಅಗರ- ಮಾಂಬಳ್ಳಿ ಗ್ರಾಮದ ಹಿಂಡಿಮಾರಮ್ಮನ ದೇವರ ಹಬ್ಬವು ೪ ದಿನಗಳ ಕಾಲ ನಡೆಯುತ್ತದೆ. ಅಗರ ಮಾಂಬಳ್ಳಿ, ಕಿನಕಹಳ್ಳಿ, ಕಟ್ನವಾಡಿ, ಬಸವಾಪುರ, ಬನ್ನಿಸಾರಿಗೆ, ಚಿಕ್ಕ ಉಪ್ಪಾರ ಬೀದಿ ಗ್ರಾಮಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಇದರ ನಿಮಿತ್ತ ದೇಗುಲದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿಸಲಾಯಿತು. ದೇವರ ಉತ್ಸವ ಮೂರ್ತಿಯನ್ನು ಅಗರ ಹಾಗೂ ಮಾಂಬಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇಗುಲದ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ದೇವರಿಗೆ ಜೈಕಾರ ಹಾಕಿ ಮೂರು ಬಾರಿ ಪ್ರದಕ್ಷಿಣೆಯನ್ನು ಹಾಕಿ ಉತ್ಸವ ಮೂರ್ತಿಯನ್ನು ದೇಗುಲದಲ್ಲಿ ಕುಳ್ಳಿರಿಸಲಾಯಿತು. ಈ ನಡುವೆ ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿ ಎಲ್ಲಾ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಲಾಯಿತು.

Share This Article
Leave a Comment