ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಕೆ.ವಿ.ಪ್ರಭಾಕರ್

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಿಸುವ ಜೊತೆಗೆ ಚಂದಾ ಹಣ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಾ ತಮ್ಮ ಆದಾಯದ ಜೊತೆಗೆ‌ ಸಂಸ್ಥೆಗೂ ಆದಾಯ ತಂದುಕೊಡುವ ಮೂಲಕ ರಾಜ್ಯದ ಆರ್ಥಿಕತೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ವಿಶ್ವ ಪತ್ರಿಕಾ ವಿತರಕರ ದಿನದ ಅಂಗವಾಗಿ ಏರ್ಪಡಿಸಿದ್ದ ಪತ್ರಿಕಾ ವಿತರಕರ ಸಮ್ಮೇಳನ‌ ಉದ್ಘಾಟಿಸಿ ಮಾತನಾಡಿದರು. ಕೊಳಚೆ ಪ್ರದೇಶಗಳಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ಪತ್ರಿಕಾ ವಿತರಕರು ಮುದ್ರಣ ಮಾಧ್ಯಮದ ಬೆನ್ನುಮೂಳೆ ಮತ್ತು ಪತ್ರಿಕಾ ಸಂಸ್ಥೆಗಳ ನರಮಂಡಲ ಆಗಿ ಕಲಸ ಮಾಡುತ್ತಾರೆ. ಪತ್ರಿಕೆಯ ಚಂದಾ ಹಣ ಸಂಗ್ರಹಿಸುವ ಜೊತೆಗೆ ಸಣ್ಣ ಜಾಹಿರಾತುದಾರರನ್ನೂ ಸಂಸ್ಥೆಯ ಜೊತೆ ಬೆಸೆಯುತ್ತಾರೆ. ಸುದ್ದಿಗಳು, ಪತ್ರಿಕೆಗಳು ಹಳತಾಗುವ ಮೊದಲು, ಓದುಗರ ಕೈಗೆ ಕಾಫಿ ಲೋಟ ಬರುವ ಮೊದಲು ಪತ್ರಿಕಾ ವಿತರಕರು ಓದುಗರ ಮನೆ ಬಾಗಿಲಿಗೆ ತಲುಪುತ್ತಾರೆ. ಇದಕ್ಕಾಗಿ ಕೋಳಿ ಕೂಗುವ ಮೊದಲೇ ಮನೆಯಿಂದ ಎದ್ದು ಹೊರಡುತ್ತಾರೆ. ನಾವು ಪತ್ರಕರ್ತರು ಬೆಚ್ಚಗೆ ಮಲಗಿರುವಾಗ ಮಳೆ, ಚಳಿ ಮತ್ತು ಪ್ರತೀಕೂಲ ವಾತಾವರಣ ಲೆಕ್ಕಿಸದೆ ಸೈಕಲ್ ತುಳಿಯಬೇಕಿದೆ ಎಂದರು.
ಒಬ್ಬ ಪತ್ರಿಕಾ ವಿತರಕನಿಗೆ ತಿಂಗಳಿಗೆ ಸಿಗುವುದು ಕೆಲವೇ ಸಾವಿರ ರೂಪಾಯಿ ಇರಬಹುದು. ಆದರೆ, ಸಾವಿರಾರು ಪತ್ರಿಕಾ ವಿತರಕರು ಸಂಗ್ರಹಿಸುವ ಚಂದಾ ಹಣ ಮತ್ತು ಸಣ್ಣ ಪ್ರಮಾಣದ ಜಾಹಿರಾತು ಹಣ ಎಲ್ಲಾ ಒಟ್ಟು ಲೆಕ್ಕ ಹಾಕಿದರೆ ಹತ್ತಾರು ಕೋಟಿ‌ ಆಗುತ್ತದೆ. ಹೀಗಾಗಿ ಪತ್ರಿಕೋದ್ಯಮದ ಮತ್ತು ರಾಜ್ಯದ ಆರ್ಥಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಸಮುದಾಯವಾಗಿದೆ ಎನ್ನುವುದನ್ನು ನಾವು ಮರೆಯಬಾರದು. ಅಸಂಘಟಿತವಾಗಿಯೇ ಉಳಿದಿದ್ದ ವಿತರಕ‌ ಸಮುದಾಯ ಒಟ್ಟಿಗೇ ಸಂಘಟಿತರಾಗುವ ಅನಿವಾರ್ಯತೆ ಸೃಷ್ಟಿಯಾಗಿದ್ದು ಕೋವಿಡ್ ಸಮಯದಲ್ಲಿ ಸದಾ ಪತ್ರಿಕಾ ಸಂಸ್ಥೆಗಳ ಪಾಲಿಗೆ ಅನಾಥ ರಕ್ಷಕರಾಗುವ ವಿತರಕರು, ಕೋವಿಡ್ ಸಂದರ್ಭದಲ್ಲಿ ತಾವೇ ಸ್ವತಃ ಅನಾಥರಾದರು. ಈ ಹೊತ್ತಲ್ಲಿ ಶಂಬುಲಿಂಗ ಅವರು ವಿತರಕರ ಸಂಘ ಮತ್ತು ಸಂಘಟನೆಗೆ ಜೀವ ತುಂಬಿದರು ಎಂದು ಮೆಚ್ಚುಗೆ ಸೂಚಿಸಿದರು. ಸಂಘಟನೆ ಮೊದಲ ಹೆಜ್ಜೆ. ಸಂಘಟನೆ ಬೆನ್ನ ಹಿಂದೆಯೇ ನಿಮ್ಮ ಹಕ್ಕುಗಳಿಗೂ ಜೀವ ಬರುತ್ತದೆ. ಬಳಿಕ ಸರ್ಕಾರದ ಸವಲತ್ತುಗಳು ನಿಮ್ಮ ಹಕ್ಕು ಆಗಿ ಒಂದೊಂದಾಗಿ ಜಾರಿ ಆಗುತ್ತವೆ. ಜೊತೆಗೆ ಕೆಲಸದ ಅಭದ್ರತೆಯೂ ಕಡಿಮೆ ಆಗುತ್ತದೆ ಎಂದರು.
ವಿತರಕ ಸಮುದಾಯದ ಪರವಾಗಿ ಈ ಸಮ್ಮೇಳನದಲ್ಲಿ ಕೆಲವೊಂದು ಬೇಡಿಕೆಗಳನ್ನು ಇಡಲಾಗಿದೆ. ಅವೆಲ್ಲವನ್ನೂ ಪರಿಶೀಲಿಸಿ, ಹಂತ ಹಂತವಾಗಿ ಕ್ರಮ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತೇನೆ. ಪತ್ರಿಕಾ ವಿತರಕರಿಗೆ ಸರ್ಕಾರದ ಸವಲತ್ತುಗಳು ಸಿಗಬೇಕು ಎನ್ನುವುದು ಒಂದು‌ ಕಡೆ ಇರಲಿ. ಜೊತೆಗೆ ಪತ್ರಿಕಾ ಸಂಸ್ಥೆಗಳೂ, ಇನ್ನಿತರೆ ಉದ್ಯಮಿಗಳ ಮೂಲಕ ಸಿಎಸ್‌ ಆರ್‌ ನಿಧಿಯಿಂದ ಈ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಅವಕಾಶಗಳೂ ಇವೆ. ಈ ದಿಕ್ಕಿನಲ್ಲೂ‌ ಗಮನ ಹರಿಸುವ ಅಗತ್ಯವಿದೆ ಎಂದರು.‌
ಸುತ್ತೂರು ಶ್ರೀ ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಿಕಾ ವಿತರಕರ ಮಹಾ ಸಂಘದ ಅಧ್ಯಕ್ಷ ಶಂಬುಲಿಂಗ, ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌, ಮುಡಾ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್‌, ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್‌, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌, ಮಾಜಿ ಅಧ್ಯಕ್ಷರಾದ ರವಿಕುಮಾರ್‌, ಸಿ.ಕೆ.ಮಹೇಂದ್ರ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದರ್ಮಾಪುರ ನಾರಾಯಣ, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment