ಪಬ್ಲಿಕ್ ಅಲರ್ಟ್
ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಬೆಣ್ಣೆಗೆರೆ (ಮುಳ್ಳೂರು) ಬಳಿ ರೈತರೊಬ್ಬರ ಮೇಲೆ ನಿನ್ನೆ ನಡೆದ ಹುಲಿ ದಾಳಿ ತೀವ್ರ ನೋವು ತಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಘಟನೆಯಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದರು.
ಮೈಸೂರಿಗೆ ಆಗಮಿಸಿದ್ದ ಅವರು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ನಿನ್ನೆ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹುಲಿ ಓಡಾಟದ ಬಗ್ಗೆ ದೂರು ಬಂದಿದ್ದರೂ ಬೋನು ಇಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರೆ ಮತ್ತು ಹೆಚ್.ಡಿ.ಕೋಟೆ, ಸರಗೂರಿನಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶವಿದ್ದರೂ ಮೈಸೂರಿಗೆ ತಂದಿರುವ ಬಗ್ಗೆ ತನಿಖೆ ಮಾಡಿಸಿ ಕ್ರಮ ಜರುಗಿಸಲಾಗುವುದು ಎಂದರು.
ಮಾನವ-ವನ್ಯಜೀವಿ ಸಂರ‍್ಷ ಇಂದು ನಿನ್ನೆಯದಲ್ಲ, ಹಿಂದಿನಿಂದಲೂ ಇದೆ. ಅರಣ್ಯದಂಚಿನ ಗ್ರಾಮದ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ಅಗತ್ಯ ಎಂದು ಹೇಳಿದರು.
ರಾಜಶೇಖರ್ ಅವರ ಮೃತದೇಹವನ್ನು ಮೈಸೂರಿಗೆ ತಂದಿರುವ ವಿಚಾರ ಮೈಸೂರಿಗೆ ಬರುವಾಗ ತಿಳಿಯಿತು. ಅಂತಿಮ ನಮನ ಸಲ್ಲಿಸಲು ಬಂದಿದ್ದೇನೆ. ಮೈಸೂರಿಗೆ ಏಕೆ ಪಾರ್ಥಿವ ಶರೀರ ತಂದಿದ್ದಾರೆ ಎಂದು ತಿಳಿದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಘಟನೆಯ ವಿವರ: ನಂಜನಗೂಡು ತಾಲೂಕಿನ ಹೆಡಿಯಾಲ ಹೋಬಳಿಯ ಮುಳ್ಳೂರುಹುಂಡಿ – ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ರಾಜಶೇಖರ್ ಎಂಬ ರೈತ ಹುಲಿದಾಳಿಯಿಂದ ಸಾವನ್ನಪ್ಪಿರುವ ಘಟನೆ ಅಕ್ಟೋಬರ್ ೨೬ರಂದು ನಡೆದಿತ್ತು. ರಾಜಶೇಖರ್ ಹಾಗೂ ಸಿದ್ದರಾಮೇಗೌಡ (೫೦) ಎಂಬಿಬ್ಬರು ಬೆಣ್ಣೆಗೆರೆ ಗ್ರಾಮದ ಬೇರೆಯವರ ಜಮೀನಿನಲ್ಲಿ ಟೊಮೆಟೊ ಬಿಡಿಸಲು ಹೋಗಿದ್ದರು. ಟೊಮೆಟೊ ಬಿಡಿಸಿದ ನಂತರ ಊಟಕ್ಕೆ ಮನೆಗೆ ಹೋಗುವಾಗ ಪೊದೆಯಲ್ಲಿ ಅವಿತಿದ್ದ ಹುಲಿ ಇಬ್ಬರ ಮೇಲೆರಗಿದೆ. ಈ ವೇಳೆ ಸಿದ್ದರಾಮೇಗೌಡ ಜೋರಾಗಿ ಕಿರುಚಿಕೊಂಡು ದೂರಕ್ಕೆ ಓಡಿಹೋದರೆ, ರಾಜಶೇಖರ್ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು.
ಇನ್ನು, ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿ ಸೆರೆಗೆ ನಡೆಸಲಾದ ಕೂಂಬಿಂಗ್ ವೇಳೆ ಹುಲಿಯೊಂದು ರೈತನ ಮೇಲೆ ದಾಳಿ ನಡೆಸಿದ ಘಟನೆ ಇತ್ತೀಚೆಗೆ ಮೈಸೂರಿನ ಬಡಗಲಪುರ ಗ್ರಾಮದಲ್ಲಿ ನಡೆದಿತ್ತು.
ರೈತರೊಂದಿಗೆ ವಾಗ್ವಾದ ಮನವಿ ಸಲ್ಲಿಕೆ:
ಹಲವು ರೈತ ಮುಖಂಡರು ಘಟನೆಯಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ ಶವಾಗಾರದ ಎದುರು ಪ್ರತಿಭಟಿಸಿದರು. ಅಲ್ಲದೆ ವ್ಯಕ್ತಿ ಸಾವನ್ನಪ್ಪಿದರೂ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಚಿವರೊಂದಿಗೆ ವಾಗ್ವಾದ ನಡೆಸಿ ಹಕ್ಕೊತ್ತಾಯದ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಭಾಗ್ಯರಾಜ್, ಮರಂಕಯ್ಯ, ಮಂಜುಕಿರಣ್ ಮೊದಲಾದವರಿದ್ದರು.
