ಪಬ್ಲಿಕ್ ಅಲರ್ಟ್
ಪಾವಗಡ,ಅ.13: ಕಾಡುಗೊಲ್ಲ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಹಾರೋಗೆರೆ ಮಹೇಶ್ ಅವರು ನಿಗಮದ ವತಿಯಿಂದ ಸರ್ಕಾರ ನೀಡುವ ವಿವಿಧ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸುವಂತೆ ಸಮುದಾಯದ ಜನರಿಗೆ ತಿಳಿಸಿದರು.
ಪಾವಗಡ ತಾಲೂಕಿನ ಜೂಲಪ್ಪನ ಹಟ್ಟಿ ಗ್ರಾಮದಲ್ಲಿ ನಡೆದ ಕಾಡುಗೊಲ್ಲ ಸಮುದಾಯದ ಸಾಂಪ್ರದಾಯಿಕ ‘ಹಾಲೊಯ್ಯುವ ಹಬ್ಬ’ದಲ್ಲಿ ಭಾಗವಹಿಸಿ ಕಾಳಿನಾಗಮ್ಮ, ಕರಿಯಮ್ಮ ಹಾಗೂ ಜುಂಜಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದರು. ಸರ್ಕಾರಕ್ಕೆ ಯಾವುದೇ ಮುಜುಗರವಾಗದಂತೆ ಕಾಡುಗೊಲ್ಲ ಸಮುದಾಯದ ಸೇವೆ ಮಾಡುವ ಭರವಸೆ ನೀಡಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪಾವಗಡ ತಾಲೂಕು ಸೇರಿದಂತೆ ರಾಜ್ಯದ ಅನೇಕ ಗೊಲ್ಲರಹಟ್ಟಿಗಳಲ್ಲಿ ರಸ್ತೆ, ಬೀದಿ ದೀಪ, ಚರಂಡಿ, ವಸತಿ ಮುಂತಾದ ಮೂಲಸೌಕರ್ಯಗಳ ಕೊರತೆ ಇದೆ. ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನಿಗಮದ ಅಡಿಯಲ್ಲಿರುವ ಸ್ವಾವಲಂಬಿ ಸಾರಥಿ, ನೇರ ಸಾಲ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳಿಗಾಗಿ ಸಕಾಲದಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಬಲರಾಮರೆಡ್ಡಿ, ಮೈಲಾರರೆಡ್ಡಿ, ಗಂಗಣ್ಣ ತರೂರು, ಉಗ್ರಪ್ಪ, ರವಿಚಂದ್ರ ಇನ್ನಿತರರು ಇದ್ದರು.
ಕಾಡುಗೊಲ್ಲರ ಸಮುದಾಯದ ಸೌಲಭ್ಯ ಪಡೆಯಲು ಅಧ್ಯಕ್ಷರ ಕರೆ
Leave a Comment
Leave a Comment
