ಪಬ್ಲಿಕ್ ಅಲರ್ಟ್
ಮೈಸೂರು: ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ,ಪಿಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳಲ್ಲಿ ತಿರಸ್ಕೃತ ಅರ್ಜಿಗಳ ಪ್ರಮಾಣ ಹೆಚ್ಚಾಗಿದ್ದು,ಪುನರ್ ಪರಿಶೀಲಿಸಿ ಆಯ್ಕೆಗೆ ಪರಿಗಣಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚಿಸಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ,ಅಧಿಕಾರಿಗಳು ನೀಡಿದ ಅಂಕಿ ಅಂಶಗಳ ಮಾಹಿತಿ ಪಡೆದುಕೊಂಡ ಬಳಿಕ ಬ್ಯಾಂಕ್ ವ್ಯವಸ್ಥಾಪಕರಿಗೆ ಸಲಹೆ ನೀಡಿದರು.ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕೃತಗೊಳಿಸುವ ಮುನ್ನ ಒಮ್ಮೆ ಪರಿಶೀಲಿಸಬೇಕು. ಸಕಾರಣವಿಲ್ಲದೆ ತಿರಸ್ಕೃತವಾಗಿರುವ ಫಲಾನುಭವಿಗಳ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಾಲ ನೀಡಲು ಪರಿಗಣಿಸಬೇಕು ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಸ್.ಪಿ.ಕೃಷ್ಣಮೂರ್ತಿ, ಬ್ಯಾಂಕ್ ವ್ಯವಸ್ಥಾಪಕರು ಫಲಾನುಭವಿಗಳ ಅರ್ಜಿಯನ್ನು ತಿರಸ್ಕಾರ ಮಾಡುವ ಮುನ್ನ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಯಾವ ಕಾರಣಕ್ಕಾಗಿ ತಿರಸ್ಕಾರ ಮಾಡಲಾಗಿದೆ ಎಂಬುದನ್ನು ಗಮನಿಸಬೇಕು. ಕೂಡಲೇ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸುವ ಜತೆಗೆ, ತಿರಸ್ಕಾರಗೊಂಡಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು ಎಂದು ಹೇಳಿದರು.
ಪಿಎಂ ಸ್ವನಿಧಿ ಯೋಜನೆಯಡಿ ೫೧,೯೦೦ ಅರ್ಜಿಗಳು ಸಲ್ಲಿಕೆಯಾಗಿದ್ದು, ಮೊದಲ ಹತ್ತು,ಎರಡನೇ ಹಂತದಲ್ಲಿ ೨೫ಸಾವಿರ,ಮೂರನೇ ಹಂತದಲ್ಲಿ ೫೦ಸಾವಿರ ವಿತರಿಸಲಾಗುತ್ತದೆ. ೫೧,೯೦೦ ಅರ್ಜಿಗಳಲ್ಲಿ ೪೦೭೦೬ ಫಲಾನುಭವಿಗಳಿಗೆ ಅನುಮೋದನೆಯಾಗಿ ೩೭೧೪೨ ಮಂದಿಗೆ ಹಣ ಬಿಡುಗಡೆಯಾಗಿದೆ. ೧೬೨೭ಅರ್ಜಿಗಳು ತಿರಸ್ಕೃತ, ೯೫೬೭ ಅರ್ಜಿಗಳು ಬಾಕಿ ಇವೆ. ಸುಮಾರು ೨೬೭೧೬ ಫಲಾನುಭವಿಗಳಿಗೆ ಎರಡನೇ ಹಂತದಲ್ಲಿ ಸಾಲ ಕೊಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ವಿವರಿಸಿದರು.ಪಿಎಂ.ವಿಶ್ವಕರ್ಮ ಯೋಜನೆಯಡಿ ೨೪೧೯೯ ಅರ್ಜಿಗಳು ಸಲ್ಲಿಕೆಯಾಗಿದ್ದು, ೫೫೯೯ ಮಂದಿಗೆ ೪೩.೧೧ ಕೋಟಿ ರೂ.ಸಾಲ ಮಂಜೂರಾಗಿದೆ. ನಾನಾ ಕಾರಣಗಳಿಂದ ೧೭೨೨೫ ಅರ್ಜಿಗಳು ತಿರಸ್ಕಾರವಾಗಿವೆ ಎಂದು ಸಭೆಯ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಸಂಸದರು, ಬ್ಯಾಂಕ್‌ಗಳಿಗೆ ಫಲಾನುಭವಿಗಳು ಯಾವ ವೃತ್ತಿಯ ಆಧಾರದ ಮೇಲೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಗಮನಿಸಬೇಕು. ತಲತಲಾಂತರಗಳಿಂದ ಕುಲ ಕಸುಬು ಮಾಡಿಕೊಂಡು ಬಂದಿರುವ ಕುಟುಂಬದ ಫಲಾನುಭವಿಗಳಿಗೆ ಸಾಲ ಕೊಡಬೇಕು ಎಂದು ಸೂಚಿಸಿದರು. ಈ ವೇಳೆ ಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರು,ಹೂವು ಮಾರಾಟ ಮಾಡುತ್ತೇವೆಂದು ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿದಾಗ ವೃತ್ತಿ ಅವಲಂಬಿಸಿರಲಿಲ್ಲ. ಕೆಲವನ್ನು ಪರಿಶೀಲಿಸಿ ತಿರಸ್ಕೃತಗೊಳಿಸಲಾಗಿದೆ ಎಂದರು.


ಅರ್ಜಿಗಳೇ ಇಲ್ಲವೆಂದ ಬ್ಯಾಂಕ್‌ಅಧಿಕಾರಿಗಳು: ಪ್ರಧಾನಮಂತ್ರಿ ಆವಾಸ್ ಯೋಜಯಡಿ ಮಂಡಕಳ್ಳಿ, ಲಲಿತಾದ್ರಿಪುರ, ಕೆ.ಆರ್.ನಗರದಲ್ಲಿ ನಿರ್ಮಿಸುತ್ತಿರುವ ಮನೆಗಳ ಫಲಾನುಭವಿಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮಂಡಕಳ್ಳಿ ಮನೆಗಳಿಗೆ ೯೨೪ ಅರ್ಜಿಗಳಲ್ಲಿ ೪೮೪ ಅನುಮೋದನೆ,೨೪೫ ಬಾಕಿ,೧೯೫ ತಿರಸ್ಕೃತವಾಗಿದೆ ಎಂದು ಎಸ್.ಪಿ.ಕೃಷ್ಣಮೂರ್ತಿ ಹೇಳಿದರು. ಈ ವೇಳೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಯೊಬ್ಬರು ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳು ಬ್ಯಾಂಕ್‌ನಲ್ಲಿ ಇಲ್ಲವೆಂದುಹೇಳುತ್ತಿದ್ದಾರೆ.ನಾವು ಸಲ್ಲಿಸಿರುವುದಕ್ಕೆ ದಾಖಲೆಗಳು ಇವೆ ಎಂದು ಸಂಸದರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್, ಕೆ.ಆರ್.ನಗರ ತಾಲ್ಲೂಕಿನ ಬ್ಯಾಂಕ್ ಅಧಿಕಾರಿಗಳೊಂದಿಗೆ ವಿಡಿಯೋಕಾನ್ಫರೆನ್ಸ್ ಮೂಲಕ ಸಭೆ ಮಾಡಿದಾಗ ಯಾವುದೇ ಅರ್ಜಿ ಬಂದಿಲ್ಲವೆಂದು ಹೇಳಿದರು.ನೀವು ಸಲ್ಲಿಕೆ ಮಾಡಿರುವ ಅರ್ಜಿಗಳ ದಾಖಲೆಗಳ ಪ್ರತಿಯನ್ನು ನೇರವಾಗಿ ನಮಗೆ ತಲುಪಿಸಿದರೆ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ದಿನಕ್ಕೆ ೧೦೦ ಅಕೌಂಟ್ ಇತ್ಯರ್ಥ: ಕೇಂದ್ರಸರ್ಕಾರದ ಸೂಚನೆಯಂತೆ ಹಣಕಾಸು ವಲಯದಲ್ಲಿ ಕ್ಲೇಮು ಪಡೆಯದ ಸ್ವತ್ತುಗಳ ಮತ್ತು ತ್ವರಿತ ವಾರಸುದಾರರ ಪತ್ತೆ ಇತ್ಯರ್ಥಕ್ಕಾಗಿ ಕೈಗೊಂಡಿರುವ ಎರಡು ತಿಂಗಳ ಅಭಿಯಾನದಲ್ಲಿ ದಿನಕ್ಕೆ ೧೦೦ ಅಕೌಂಟ್‌ಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಲಾಯಿತು. ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ತಂತಮ್ಮ ವ್ಯಾಪ್ತಿಯಲ್ಲಿ ಗ್ರಾಹಕರನ್ನು ಕರೆತಂದು ಇತ್ಯರ್ಥಪಡಿಸಬೇಕು ಎಂದು ಹೇಳಲಾಯಿತು.ಜಿಲ್ಲೆಯ ಕೆನರಾ ಬ್ಯಾಂಕ್,ಎಸ್‌ಬಿಐ,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ೩೧ ಬ್ಯಾಂಕ್‌ಗಳಿಂದ ೫೩೪ ಶಾಖೆಗಳಿವೆ. ಅದರಲ್ಲಿ ೫೦೫೪೨೪ ಖಾತೆದಾರರಿದ್ದು, ೧೫೭.೩೩ ಕೋಟಿ ರೂ. ಹಣವಿದೆ. ಈ ಗ್ರಾಹಕರನ್ನು ಕರೆತಂದು ಕ್ಲೇಮು ಮಾಡುವಂತೆ ಮಾಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ವಿಮಾ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಆಗಿರುವ ಸಾಧನೆಯನ್ನು ಪರಿಗಣಿಸಿ ದ್ವಿತೀಯ ಸ್ಥಾನ ದೊರೆತಿರುವುದನ್ನು ಪ್ರಕಟಿಸಲಾಯಿತು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಆರ್‌ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್.ಪ್ರಭಾಕರನ್,ನಬಾರ್ಡ್ ಡಿಜಿಎಂ ಶಾಂತವೀರ್ ಹಾಜರಿದ್ದರು.
