ಪಬ್ಲಿಕ್ ಅಲರ್ಟ್
ಮೈಸೂರು: ಪೊಲೀಸ್ ಪೇದೆ ವಯೋಮಿತಿ ಹೆಚ್ಚಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಬಣದ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್ ಮಾತನಾಡಿ, ಪೊಲೀಸ್ ಪೇದೆ ವಯೋಮಿತಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಇದೆ. ನಮ್ಮ ರಾಜ್ಯದಲ್ಲೂ ಪೊಲೀಸ್ ಪೇದೆ ವಯೋಮಿತಿಯನ್ನು ಹೆಚ್ಚಿಸುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಭರವಸೆ ನೀಡಿದ್ದರು. ಮುಖ್ಯಮಂತ್ರಿಯಾದ ಬಳಿಕವೂ ವಯೋಮಿತಿ ಹೆಚ್ಚಿಸುತ್ತೇನೆಂದು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದರು. ಆದರೆ, ಇದುವರೆಗೂ ಹೆಚ್ಚಳ ಮಾಡಿಲ್ಲ ಎಂದು ಬೇಸರಿಸಿದರು.
ವಯೋಮಿತಿ ಹೆಚ್ಚಳವಾಗಲಿದೆ ಎಂದು ಎಷ್ಟೋ ಬಡ ಅಭ್ಯರ್ಥಿಗಳು ಖಾಸಗಿ ಕೆಲಸ ಬಿಟ್ಟು ಓದುವ ಕಡೆ ಗಮನಹರಿಸಿದ್ದಾರೆ. ಹೀಗಾಗಿ ಸರ್ಕಾರ ಪೊಲೀಸ್ ಪೇದೆ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ ೩೦ ವರ್ಷ, ಎಸ್‌ಸಿ, ಎಸ್‌ಟಿ, ಓಬಿಸಿಗೆ ೩೩ ವರ್ಷಕ್ಕೆ ಹೆಚ್ಚಿಸಬೇಕು. ಒಂದು ವೇಳೆ ಹೆಚ್ಚಳ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಪಾದಯಾತ್ರೆಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಅನೇಕರಿದ್ದರು.
