ಪಬ್ಲಿಕ್ ಅಲರ್ಟ್
ಮೈಸೂರು,ಆ.26: ನಾನು ಎಂದೂ ಮೀಸಲಾತಿ, ದಲಿತರ ವಿರೋಧಿಯಲ್ಲ. ವಿಧಾನಸಭಾ ಅಧಿವೇಶನದಲ್ಲಿ ಸಹಕಾರ ಸಂಘದ ಬಿಲ್ ಮಂಡನೆ ವೇಳೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ದಲಿತರು ಪ್ರತಿಭಟನೆ ಮಾಡುತ್ತಿದ್ದಾರೆ. ನನ್ನ ಹೇಳಿಕೆಯಿಂದ ದಲಿತರ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಜವಹಾರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಅವರೇ ಹೇಳಿದ್ದಾರೆ. ಇಂದು ಹಲವಾರು ಸಹಕಾರ ಸಂಘಗಳು ಮುಚ್ಚಿಹೋಗಿವೆ. ಕೆಲವು ಸಂಘಗಳಲ್ಲಿ ವೇತನ ನೀಡಲು ಆಗುತ್ತಿಲ್ಲ. ಹಾಗಾಗಿ ಸರ್ಕಾರದ ಪಾಲುಗಾರಿಕೆ ಇರುವ ಸಹಕಾರ ಸಂಘಗಳಿಗೆ ಮಾತ್ರ ಮೀಸಲಾತಿ ಅನ್ವಯ ಮಾಡಿ ಎಂಬ ಉದ್ದೇಶದಿಂದ ನಾನು ಹೇಳಿದ್ದೇನೆಯೇ ಹೊರತು ಬೇರ ಉದ್ದೇಶದಿಂದ ನಾನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಎಸ್ಸಿ, ಎಸ್ಟಿ ಗಳಿಗೆ ಮೂರು ಸ್ಥಾನಕ್ಕೆ ನಾಮ ನಿರ್ದೇಶನ ಮಾಡುವ ಜೊತಗೆ ಹಿಂದುಳಿದವರಿಗೂ ಮೀಸಲಾತಿ ನೀಡಿ ನಾಲ್ಕು ನಿರ್ದೇಶನ ಮಾಡಿ ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಅಧಿವೇಶನದಲ್ಲಿ ನಾನು ಮೀಸಲಾತಿ ವಿರೋಧಿಸಿ ಮಾತನಾಡಲಿಲ್ಲ. ಸಹಕಾರ ಸಂಘದಲ್ಲಿನ ಬದಲಾವಣೆ ಸೇರಿದಂತೆ ಹಲವು ನಿರ್ಣಯ ಕೈಗೊಳ್ಳಲು ಲಕ್ಷ್ಮಣ್ ಸವದಿ ಸಹಕಾರ ಸಚಿವರಾಗಿದ್ದ ವೇಳೆ ನಾಲ್ಕು ಜನರ ಕಮಿಟಿ ರಚಿಸಲಾಗಿದೆ. ಆ ಕಮಿಟಿ ವರದಿ ಪಡೆಯದೆ ಬಿಲ್ ಮಂಡನೆ ಮಾಡಿದ್ದರಿಂದ ನಾನು ಮಾತನಾಡಿದ್ದೇನೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ನಾನು ಸಂವಿಧಾನ ವಿರೋಧಿಯಲ್ಲ, ನನ್ನ ಹೇಳಿಕೆ ಖಂಡಿಸಿ ಹಲವಾರು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ನನ್ನ ವಿರುದ್ಧ ಅಸಂವಿಧಾನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದಿದೆ. ಅವರು ದೂರು ಕೊಟ್ಟರು ನಾನು ಅವರ ವಿರುದ್ಧ ಮಾತನಾಡುವುದಿಲ್ಲ ಎಂದು ಹೇಳಿದರು.
ನಾನು ದಲಿತರ ಒಡನಾಟದಲ್ಲೇ ಬೆಳೆದವನು, ನಮ್ಮ ಊರಿನ ಪಕ್ಕದ ಹಳ್ಳಿಯಲ್ಲಿ ದಲಿತರಿಗೆ ಭೂಮಿ ಕೊಡಿಸಲು ನಾನು ಮತ್ತು ತಂದೆ ಹೋರಾಟ ಮಾಡಿ ನಮ್ಮ ಭೂಮಿ ಮೂಲಕವೇ ರಸ್ತೆ ನೀಡಿದ್ದೇವೆ. ನಾನು ದಲಿತರ ವಿರೋಧಿಯಲ್ಲ, ಯಾವ ಸಮುದಾಯದ ವಿರೋಧಿಯೂ ಅಲ್ಲ ಎಂದು ಹೇಳಿದರು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಂವಿಧಾನ ಓದು ಪುಸ್ತಕವನ್ನು ಬೆಂಗಳೂರಿನಲ್ಲಿ ನನ್ನ ನೇತೃತ್ವದಲ್ಲಿ ಮಾಡಿಸಿದ್ದಾರೆ. ಕಡಕೋಳ ನಾಗರಾಜ್ ಎಂಬ ದಲಿತ ಹುಡುಗನನ್ನು ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷನನ್ನಾಗಿ ಮಾಡಿದ್ದೇನೆ. ಮೈಸೂರು ನಗರದ ಸೌಹಾರ್ಧ ಸಹಕಾರ ಮಹಾಮಂಡಲದ ಅಧ್ಯಕ್ಷರನ್ನಾಗಿ ಬನ್ನೂರಿನ ನಂಜುಂಡಸ್ವಾಮಿ ಅವರನ್ನು ಮಾಡಿದ್ದೇನೆ. ದಿವಂಗತ ಚಿಕ್ಕಮಾದು ಅವರು ವಿಧಾನಸಭೆಯಲ್ಲಿ ಸೋತು ಮನೆಯಲ್ಲಿದ್ದಾಗ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದೇನೆ. ನಾನು ಎಂದೂ ದಲಿತ ವಿರೋಧಿಯಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಬೆಳವಾಡಿ ಶಿವಕುಮಾರ್, ಸ್ವಾಮಿ ಸೇರಿ ಅನೇಕರು ಉಪಸ್ಥಿತರಿದ್ದರು.
ಬಾಕ್ಸ್:
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಅಪಸ್ವರ ಸರಿಯಲ್ಲ: ಶಾಸಕ ಜಿ.ಟಿ.ದೇವೇಗೌಡ
ಮೈಸೂರು: ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರಿಗೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ದರೆ ದಸರಾ ಉದ್ಘಾಟನೆಗೆ ಬರುತ್ತಾರೆ. ನಂಬಿಕೆ ಇಲ್ಲದಿದ್ದರೆ ಬರಲ್ಲ. ಇದಕ್ಕೆ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ಸರಿಯಲ್ಲ. ಈ ಹಿಂದೆ ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ. ಪ್ರತಿ ವರ್ಷ ದಸರಾ ಉದ್ಘಾಟನೆಗೆ ಸಾಹಿತಿ, ಮಠಾಧೀಶರು, ಬುದ್ದಿಜೀವಿಗಳು, ಸಮಾಜ ಸೇವೆ ಮಾಡುರುವವರನ್ನು ಆಯ್ಜೆ ಮಾಡಲಾಗುತ್ತದೆ. ಈಗಲೂ ಅದೇ ರೀತಿ ಮಾಡಲಾಗಿದೆ ಎಂದು ಹೇಳಿದರು.
ದಸರಾ ಹೈಪವರ್ ಕಮಿಟಿ ಅಧ್ಯಕ್ಷರು ಮುಖ್ಯಮಂತ್ರಿಗಳು. ಈ ಕಮಿಟಿಯಲ್ಲಿ ಮೈಸೂರು,ಚಾಮರಾಜನಗರ ಭಾಗದ ಸಚಿವರು, ಶಾಸಕರಗಳು ಇರುತ್ತಾರೆ. ಆಗಾಗ ಹೈಪವರ್ ಕಮಿಟಿ ಸಭೆ ನಡೆಯುತ್ತದೆ. ಈ ಸಭೆಯಲ್ಲಿ ನಾವೆಲ್ಲ ಒಮ್ಮತದಿಂದ ಮುಖ್ಯಮಂತ್ರಿಗಳಿಗೆ ತೀರ್ಮಾನ ಮಾಡಲು ಬಿಟ್ಟಿದ್ದೇವೆ. ಅದರಂತೆ ಮುಖ್ಯಮಂತ್ರಿಗಳು ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಬಾಕ್ಸ್
ಶೀಘ್ರ ವರದಿ ಪಡೆದು ತಪ್ಪಿತಸ್ಥರ ಶಿಕ್ಷಿಸಿ
ಧರ್ಮಸ್ಥಳ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ವಿರುದ್ಧ ಷಡ್ಯಂತರ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದಾರೆ. ದೇಶದಲ್ಲೇ ಭಾವನಾತ್ಮಕ ಹೊಂದಿರುವ ಧರ್ಮಸ್ಥಳ ಕ್ಷೇತ್ರದವಿರುದ್ಧ ನಡೆದ ಈ ಕೃತ್ಯ ಸರಿಯಲ್ಲ. ಇದರಿಂದ ರಾಜ್ಯ ೬.೫ಕೋಟಿ ಜನರ ಭಾವನೆಗೂ ಧಕ್ಕೆಯುಂಟಾಗಿದೆ. ಹೀಗಾಗಿ ಶೀಘ್ರ ತನಿಖೆ ನಡೆಸಿ ವರದಿಯ ಸತ್ಯಾಸತ್ಯಗಳನ್ನು ಬಹಿರಂಗಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಜಿ.ಟಿ.ದೇವೇಗೌಡ,ಶಾಸಕ