ಪತ್ರಿಕಾ ಛಾಯಾಗ್ರಾಹಕರ ಸೇವೆ ಅನನ್ಯ: ಶೇಖ್ ತನ್ವೀರ್ ಆಸೀಫ್

admin
1 Min Read


-ವರದಿ : ಎಂಪಿ ರಾಕೇಶ್.-

ಮೈಸೂರು: ಪತ್ರಿಕಾ ಛಾಯಾಗ್ರಾಹಣಕ್ಕೆ ಮೀಸಲಿಟ್ಟಿರುವ ನಿಮ್ಮ ಸೇವೆ ಅನನ್ಯ ಎಂದು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅಭಿಪ್ರಾಯ ಪಟ್ಟರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಛಾಯಾಗ್ರಹಣ ಪ್ರದರ್ಶನ ಮತ್ತು ಸ್ಪರ್ಧಾ ವಿಜೇತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಛಾಯಾಗ್ರಾಹಕರು ನಿಮ್ಮ ಕುಟುಂಬ, ವೈಯಕ್ತಿಕ ಜೀವನವನ್ನು ಬದಿಗೊತ್ತಿ ನಿಮ್ಮ ಕರ್ತವ್ಯ ಪ್ರಜ್ಞೆ ತೋರುವುದು ಸ್ವಾಗತಾರ್ಹ. ವೈವಿದ್ಯತೆಯಿಂದ ಕೂಡಿದ ಭಾರತ ದೇಶದಲ್ಲಿ ಸೌಹಾರ್ದತೆ, ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಸಂದರ್ಭಾನುಸಾರ ಛಾಯಾಚಿತ್ರದ ಮೂಲಕ ಸಾಕ್ಷೀಕರಿಸುವ ಪತ್ರಿಕಾ ಛಾಯಾಗ್ರಾಹಕರ ಸೇವೆ ಮೆಚ್ಚವಂತಹದ್ದು ಎಂದರು.
ಗೌರವ ಸ್ವೀಕರಿಸಿದ ಹಿರಿಯ ಛಾಯಾಗ್ರಾಹಕ ಸಗ್ಗೆರೆ ರಾಮಸ್ವಾಮಿ ಪತ್ರಿಕಾ ಛಾಯಾಗ್ರಹಣ ಒಂದು ವಿಶೇಷ ವೃತ್ತಿಯಾಗಿದ್ದು, ಇದು ಸವಾಲೊಡ್ಡುವ ಜೊತೆಗೆ ಹೆಚ್ಚು ಖುಷಿ ಕೊಡುತ್ತದೆ. ಪತ್ರಿಕಾ ಛಾಯಾಗ್ರಹಣದಿಂದ ಘಟನೆಗಳನ್ನು ಸಾಕ್ಷೀಕರಿಸುವ ಅಪೂರ್ವ ಅವಕಾಶ ಪತ್ರಿಕಾ ಛಾಯಾಗ್ರಾಹಕರಿಗೆ ಸಿಗುತ್ತದೆ. ಬಹುತೇಕ ಸರ್ಧೆಗಳಲ್ಲಿ ರಾಜಕೀಯ ಆಧಾರಿತ ಛಾಯಾಚಿತ್ರಗಳೇ ಇರುತ್ತವೆ. ಆದರೆ ಇಲ್ಲಿ ಮೈಸೂರು ಸಾಂಸ್ಕೃತಿಕ ನಗರಿ ಎಂಬುದನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳಿರುವುದು ಸಂತಸವುಂಟು ಮಾಡಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಜಗತ್ತಿನ ಎಲ್ಲೇ ಛಾಯಾಚಿತ್ರ ಸ್ಪರ್ಧೆ ನಡೆದರೂ ಮೈಸೂರಿನವರ ಛಾಯಾಚಿತ್ರಗಳು ಇದ್ದೇ ಇರುತ್ತವೆ. ಬಹುಮಾನಗಳಂತೂ ಇವುಗಳಿಗೆ ಬರುವುದು ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಮೈಸೂರು ಪತ್ರಿಕೆಗಳು ಪ್ರತಿಭಾವಂತ ಛಾಯಗ್ರಾಹಕರನ್ನು ಬೆಳೆಸಿವೆ ಎಂದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉದಯ್ ಶಂಕರ್, ಗವಿಮಠ ರವಿ, ಮಧುಸೂದನ್, ಅನೂಪ್ ಅವರಿಗೆ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಿಸಿಪಿ ಕೆ.ಎಸ್.ಸುಂದರ್‌ರಾಜ್, ಉದ್ಯಮಿ ಡಾ.ವಿ.ಕಾರ್ತಿಕ್‌, ರೆಡ್ಕೋ ಅಧ್ಯಕ್ಷ ವಿ.ಸಿ.ರವಿಕುಮಾರ್, ಮಮತಾ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ, ನಗರ ಕಾರ್ಯದರ್ಶಿ ಎ.ಕೃಷ್ಣೋಜಿರಾವ್‌, ಉಪಾಧ್ಯಕ್ಷ ರವಿ ಪಾಂಡವಪುರ, ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment