ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಬಂಗಾರವಾಗಿದೆ: ಮಹದೇವ ಪ್ರಭು ಜಿ.ವೈ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಬಂಗಾರವಾಗಿದೆ: ಮಹದೇವ ಪ್ರಭು ಜಿ.ವೈ

ಮೈಸೂರು,ಜ.20 (ಕರ್ನಾಟಕ ವಾರ್ತೆ):-
ರಾಜ್ಯ ಸರ್ಕಾರವು ರೂಪಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ ನೀಡಿರುವ ಕಾರ್ಯಕ್ರಮಗಳು ಬಡವರ ಬದುಕನ್ನು ಬಂಗಾರವಾಗಿಸಿದೆ ಎಂದು ಟಿ.ನರಸಿಪುರ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಹದೇವ ಪ್ರಭು ಜಿ.ವೈ ಅವರು ಅಭಿಪ್ರಾಯಪಟ್ಟರು.

ಟಿ.ನರಸಿಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 3 ದಿನಗಳ ಕಾಲ ಆಯೋಜಿಸಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ ರಾಜ್ಯಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಕುರಿತ ವಸ್ತುಪ್ರದರ್ಶನ ಮಳಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ, ಹಿಂದುಳಿದ ಸಮುದಾಯದವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅಭಿವೃದ್ಧಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸಾಮಾನ್ಯ ಜನರು, ಮಹಿಳೆಯರು, ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸಲು ಬಸ್ ನಿಲ್ದಾಣಕ್ಕೆ ಬರುವುದರಿಂದ ಇಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಳಿಗೆ ತೆರೆದು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ಯೋಜನೆಗಳನ್ನು ಪಡೆಯಲು ಫಲಾನುಭವಿಗಳನ್ನು ಅಲೆದಾಡಿಸದೇ ಪಂಚ ಗ್ಯಾರಂಟಿ ಯೋಜನೆಗಳ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪುವ ರೀತಿ ಯೋಜನೆ ರೂಪಿಸಲಾಗಿದೆ. ಬಡವರು ಹಾಗೂ ಮಹಿಳೆಯರು ಆರ್ಥಿಕವಾಗಿ ಸದೃಢಗೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ರೂಪಿಸಿರುವ ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳು ನೆರವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಟಿ.ನರಸಿಪುರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಡಿ.ಎಂ.ಪರಶಿವಮೂರ್ತಿ, ಎನ್ ಕೋಕಿಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಹೆಚ್ ನಿರ್ಮಲ ಉಪಸ್ಥಿತರಿದ್ದರು.

ಸಾರ್ವಜನಿಕರ ಮನಸೂರೆಗೊಂಡ ಛಾಯಾಚಿತ್ರಗಳು

ಟಿ.ನರಸಿಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಛಾಯಾಚಿತ್ರಗಳ ಪ್ರದರ್ಶನ ಸಾರ್ವಜನಿಕ ಮನ ಸೆಳೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯ ಎದುರು ಹಾಗೂ ವಿವಿಧ ಛಾಯಾಚಿತ್ರಗಳು ಮುಂದೆ ನಿಂತು ಸಾರ್ವಜನಿಕರು ಸೆಲ್ಫಿ ಕ್ಲಿಕಿಸಿದರು.

Share This Article
Leave a Comment