ಪಬ್ಲಿಕ್ ಅಲರ್ಟ್ ನ್ಯೂಸ್:-ಶ್ರೀ ರೇಣುಕಾಚಾರ್ಯರು ವಚನಗಳ ಮೂಲಕ ತಮ್ಮ ತತ್ವಗಳನ್ನು ಜನರಿಗೆ ತಿಳಿಸಿಕೊಟ್ಟರು: ಡಾ. ಪಿ ಶಿವರಾಜ್
ಮೈಸೂರು,ಮಾ.01(ಕರ್ನಾಟಕ ವಾರ್ತೆ):-ಶ್ರೀ ರೇಣುಕಾಚಾರ್ಯರು ವಚನಗಳ ಮೂಲಕ ಜೀವನದ ಮೌಲ್ಯಗಳನ್ನು ಜನರಿಗೆ ತಿಳಿಸಿಕೊಟ್ಟರು. ಅವರ ವಚನಗಳು ಜನರಿಗೆ ಶ್ರಮ, ಭಕ್ತಿ, ನೈತಿಕತೆ ಮತ್ತು ಸಮಾನತೆ ಎಂಬ ತತ್ವಗಳನ್ನು ಪರಿಚಯಿಸಿದೆ ಎಂದು ಹೇಳಿದರು.
ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಸಮಿತಿ ವತಿಯಿಂದ ಕರ್ನಾಟಕದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಸುಮಾರು 30 ಕ್ಕು ಹೆಚ್ಚು ಜಯಂತಿಯನ್ನು ಪ್ರತಿ ವರ್ಷ ಆಚರಿಸುತ್ತೇವೆ. ಒಂದು ಸಮಾಜದ ಕಣ್ಣಾಗಿ ಇಡೀ ಸಮಾಜದ ಮಾನವೀಯತೆಯ ಪ್ರತಿರೂಪವಾಗಿ ಹಾಗೂ ಮನುಷ್ಯ ಕುಲಕ್ಕೆ ಬೆಳಕಾಗಿ ಬಂದಂತಹ ವ್ಯಕ್ತಿಗಳ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ಆದರ್ಶಗಳನ್ನು ನಾವು ಪಾಲನೆ ಮಾಡಬೇಕು ಎಂದು ಹೇಳಿದರು.
ರೇಣುಕಾಚಾರ್ಯ ತತ್ವಗಳು ಹಾಗೂ ಅವರು ಈ ಸಮಾಜಕ್ಕೆ ನೀಡಿದಂತಹ ಸಿದ್ಧಾಂತಗಳು, ಮಾನವೀಯ ಮೌಲ್ಯಗಳು, ಆದರ್ಶಗಳು ಹಾಗೂ ಅವರು ಬಿತ್ತಿದಂತಹ ಬೀಜ ಇಂದು ಹೆಮ್ಮೆರವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಒಂದು ಫಲ ಕೊಡುವ ಮರವಾಗಿ ಬೆಳೆದಿದೆ ಎಂದು ತಿಳಿಸಿದರು.
ವೀರಶೈವ ಪರಂಪರೆಯಲ್ಲಿ ಇಡೀ ಸಮುದಾಯಕ್ಕೆ ಆದರ್ಶದಾಯಕ ಸಿದ್ಧಾಂತವನ್ನು ಪರಿಚಯಿಸಿದಂತಹ ಮಹನೀಯ ವ್ಯಕ್ತಿ ರೇಣುಕಾಚಾರ್ಯ.
ಶ್ರೀ ರೇಣುಕಾಚಾರ್ಯರು ಎಂದಿಗೂ ಅಮರವಾಗಿ ಇರುತ್ತಾರೆ ಹಾಗೂ ನಮ್ಮೆಲ್ಲರ ಜೀವನದಲ್ಲಿ ಆದರ್ಶವಾಗಿ ಇರುತ್ತಾರೆ ಎಂದು ಹೇಳಿದರು.
ರಾಯಚೂರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ಖಂಡಿಮಠ ಅವರು ಮಾತನಾಡಿ ಈ ಕಾರ್ಯಕ್ರಮವನ್ನು ರೇಣುಕಾಚಾರ್ಯರ ವ್ಯಕ್ತಿತ್ವವನ್ನು ಪರಿಚಯಿಸುವುದಕ್ಕಿಂತ ಅವರ ಬೋಧನೆಗಳನ್ನು ಮರೆತಿರುವ ಜನರಿಗೆ ನೆನಪಿಸಬೇಕೆಂಬ ಕಾಳಜಿಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ರೇಣುಕಾಚಾರ್ಯರ ತತ್ವಗಳನ್ನು ಜನರು ಆಧರಿಸಬೇಕು. ರೇಣುಕಾಚಾರ್ಯರು ಶಿವನ ಅಂಶ ಸಂಭೂತರು, ಅಗೋಚರ ಶಕ್ತಿಯೇ ತಾವಾಗಿ ಬಂದು ವ್ಯಕ್ತಿಯಾಗಿ ರೂಪಿತಗೊಂಡವರನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ.ಭಕ್ತಿ, ನಂಬಿಕೆ, ಶ್ರದ್ಧೆ ನಮ್ಮ ಧರ್ಮದ ಅಂತರ್ ಸತ್ವದ ಶಕ್ತಿ ಎಂದು ಹೇಳಿದರು.
ರೇಣುಕಾಚಾರ್ಯರು ಸಮಾನತೆ ಎಂಬ ತತ್ವಕ್ಕೆ ಮಹತ್ವ ನೀಡಿದರು. ಅದರಲ್ಲಿ ಎಲ್ಲಾ ವರ್ಣಗಳು ಸಮಾನವೆಂಬ ನಂಬಿಕೆಯನ್ನು ಹರಡಿದರು.
ಇಷ್ಟು ಲಿಂಗವನ್ನು ಧರಿಸುವ ಮೂಲಕ ನಿತ್ಯ ಶಿವನೊಂದಿಗೆ ಸಂಬಂಧವನ್ನು ಕಾಪಾಡಬೇಕೆಂಬ ತತ್ವವನ್ನು ಅವರು ಬೋಧಿಸಿದರು ಎಂದು ಹೇಳಿದರು.
ಎಲ್ಲಾ ಪೋಷಕರು ಶ್ರೀ ರೇಣುಕಾಚಾರ್ಯರ ತತ್ವ ಆದರ್ಶಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡುವುದರ ಮೂಲಕ ತಮ್ಮ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಅರಮನೆಯ ಜಪದಕಟ್ಟೆ ಮಠದ ಶ್ರೀ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಬಿ. ಎಸ್ ಶ್ರೀಶೈಲ ಗಣ್ಯರಾದ ಹಿನ್ಕಲ್ ಬಸವರಾಜು, ಅಶೋಕ್, ಜ್ಞಾನ ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್ ಅವರು ಉಪಸ್ಥಿತರಿದ್ದರು.
