ನೊಂದವರಿಗೆ ಬಡವರಿಗೆ ನ್ಯಾಯವನ್ನು ಒದಗಿಸುವುದು ವಕೀಲ ವೃತ್ತಿಯ ವೃತ್ತಿ ಧರ್ಮ

latha prabhukumar
4 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ನೊಂದವರಿಗೆ ಬಡವರಿಗೆ ನ್ಯಾಯವನ್ನು ಒದಗಿಸುವುದು ವಕೀಲ ವೃತ್ತಿಯ ವೃತ್ತಿ ಧರ್ಮ

ನಿಮ್ಮಿಂದ ನ್ಯಾಯ ದೊರಕಿದೆ ಎಂದು ನಿಮ್ಮ ಕ್ಲೈಂಟ್ ಮುಖದಲ್ಲಿ ನಗು ಮೂಡಿದರೆ ನಿಮ್ಮ ವೃತ್ತಿ ಬದುಕು ಸಾರ್ಥಕವಾಗುತ್ತದೆ – ರಾಮ ಸುಬ್ರಮಣಿಯನ್

ಮೈಸೂರು ಮಾರ್ಚ್ 15 (ಕರ್ನಾಟಕ ವಾರ್ತೆ) ನೊಂದವರಿಗೆ ಬಡವರಿಗೆ ನ್ಯಾಯ ಒದಗಿಸುವುದು ವಕೀಲ ವೃತ್ತಿಯ ಧರ್ಮ, ನಿಮ್ಮಿಂದ ನ್ಯಾಯ ದೊರಕಿದೆ ಎಂದು ನಿಮ್ಮ ಕ್ಲೈಂಟ್ ಮುಖದಲ್ಲಿ ನಗು ಮೂಡಿದರೆ ನಿಮ್ಮ ವೃತ್ತಿ ಬದುಕು ಸಾರ್ಥಕವಾಗುತ್ತದೆ ಎಂದು
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸರ್ವೋಚ್ಛ ನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಾಮೂರ್ತಿಗಳಾದ ರಾಮ ಸುಬ್ರಮಣಿಯನ್ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಹುಬ್ಬಳ್ಳಿ, ಸ್ಟೇಟ್ ಬ್ಯಾಂಕ್ ಅಫ್‌ ಇಂಡಿಯಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಮಾನಸ ಗಂಗೋತ್ರಿಯ
ಸೆನೆಟ್ ಭವನ ಇಲ್ಲಿ ಹಮ್ಮಿಕೊಂಡಿದ್ದ
1st Zonal Workshop” on From Class Room to Court Room- Law Students as Catalysts for Social Justice” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಗಾರವು ನಿಮ್ಮ ವೃತ್ತಿ ಬದುಕಿನ ಅಮೂಲ್ಯ ಕಾರ್ಯಗಾರವಾಗಿ ಉಳಿಯಲಿದೆ. ನನ್ನ ವಿಧ್ಯಾರ್ಥಿ ಜೀವನದಲ್ಲಿ ಇದ್ದ ಮಿತ್ರರಲ್ಲಿ ಹೆಚ್ಚು ಅಂಕಗಳನ್ನು ಪಡೆದು ಚೆನ್ನಾಗಿ ಓದುತ್ತಿದ್ದ ಗೆಳೆಯರು ಉತ್ತಮ ಅಂಕ ಪಡೆದು ಡಾಕ್ಟರ್ ಗಳು ಹಾಗೂ ಇಂಜಿನಿಯರ್ ಗಳು ಆದರು. ಆದರೆ ನಾನು ಕಾನೂನು ಕಾಲೇಜಿಗೆ ಸೇರಿ ಲಾ ಅಧ್ಯಯನ ಮಾಡಿ ನ್ಯಾಯಮೂರ್ತಿ ಆದೆ. ನಾನು ಹೆಚ್ಚು ಅಧ್ಯಯನ ಮಾಡಿ ಡಾಕ್ಟರ್ ಅಥವಾ ಇಂಜಿನಿಯರ್ ಆಗಿದ್ದರೆ ಮಾಸಿಕ 20 ಸಾವಿರ ಸಂಬಳ ತೆಗೆದುಕೊಳ್ಳುತ್ತಿದೆ. ಆದರೆ ನಾನು ನ್ಯಾಯಮೂರ್ತಿ ಆಗಿದ್ದರಿಂದ ಪ್ರಾರಂಭದಲ್ಲಿ 1 ಲಕ್ಷ ಸಂಬಳ ದೊರೆಯಿತು. ಹಾಗಂತ ನಾನು ಹೆಚ್ಚು ಓದಬೇಡಿ ಎಂದು ಹೇಳುತ್ತಿಲ್ಲ. ಆದರೆ ನೀವು ವಕೀಲ ವೃತ್ತಿಯಲ್ಲಿ ಹೆಚ್ಚಿನ ಆದಾಯ ಪಡೆಯುತ್ತೀರಿ ನೀವು ಆಯ್ಕೆ ಮಾಡಿಕೊಂಡಿರುವ ಗುರಿ ಉತ್ತಮವಾಗಿದೆ ಎಂದು ತಿಳಿಸುತ್ತಿದ್ದೇನೆ. ನಿಮ್ಮ ವೃತ್ತಿ ಜೀವನ ಉತ್ತಮವಾಗಿರುತ್ತದೆ ಎಂದರು.

ಹಣ ನಿಮಗೆ ಹೆಚ್ಚಿನ ತೃಪ್ತಿ ನೀಡುವುದಿಲ್ಲ. ನಿಮ್ಮ ಕ್ಲೈಂಟ್ ನಿಮ್ಮಿಂದ ನ್ಯಾಯವನ್ನು ಪಡೆದೆ ಎಂದು ಮುಖದಲ್ಲಿ ನಗುವನ್ನು ಹೊಂದಿದರೆ ಅದು ನಿಮಗೆ ಆತ್ಮ ತೃಪ್ತಿಯನ್ನು ನೀಡುತ್ತದೆ. ಇಂಗ್ಲೆಂಡ್ ನ 1930 ರ ಕಾಯ್ದೆ ಸಾರ್ವಜನಿಕರಿಗೆ ಉಚಿತ ಕಾನೂನಿನ ಅವಕಾಶವನ್ನು ಕಲ್ಪಿಸಿತು. ಭಾರತದಲ್ಲಿ 1987 ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಉಚಿತ ಕಾನೂನು ಸೇವೆಗಳನ್ನು ನೀಡಲಾಗುತ್ತಿದೆ. ಬಡವರು ನೊಂದವರಿಗೆ ಉಚಿತ ಕಾನೂನಿನ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಅನುಶಿವರಾಮನ್, ಅವರು ಮಾತನಾಡಿ ಈ ಕಾರ್ಯಗಾರವು ಮುಂದಿನ ವಕೀಲರು ಆಗಲು ಹೊರಟಿರುವ ನಿಮಗೆ ಅತ್ಯಮೂಲ್ಯವಾಗಿದೆ. ಲೀಗಲ್ ಎಡ್ ಕ್ಯಾಂಪ್ ಕ್ಲಿನಿಕ್ ಗಳನ್ನು ಹೇಗೆ ಆರೆಂಜ್ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವುದಾಗಿದೆ. ಮೈಸೂರು ವ್ಯಾಪ್ತಿಯ 13 ಕಾನೂನು ಕಾಲೇಜುಗಳ ಸಹಯೋಗದಿಂದ 29 ಹಳ್ಳಿಗಳಲ್ಲಿ ಲೀಗಲ್ ಎಡ್ ಕ್ಯಾಪ್ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭವಿಷ್ಯದ ವಕೀಲರಾದ ನಿಮಗೆ ಈ ಕಾರ್ಯಗಾರವು ಅತ್ಯಮೂಲ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ್ ಶೆಟ್ಟಿ ಅವರು ಮಾತನಾಡಿ 1987 ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವನ್ನು ಜಾರಿಗೆ ಬಂದಿತು. ಯಾವುದೇ ಕಾರಣಕ್ಕೂ ಬಡವ ಶ್ರೀಮಂತ ಎಂಬ ಭೇದ ಭಾವದ ಮೇಲೆ ನ್ಯಾಯ ವಿಳಂಬವಾಗಬಾರದು. ಪ್ರತಿಯೊಬ್ಬರಿಗೂ ನ್ಯಾಯ ಸಕಾಲದಲ್ಲಿ ದೊರೆಯಬೇಕು. ಕಾನೂನು ಸೇವೆಗಳ ಪ್ರಾಧಿಕಾರ ನಡೆಸುವ ಕಾರ್ಯಾಗಾರಗಳಲ್ಲಿ ಕಾನೂನು ಕಾಲೇಜುಗಳ ವಿಧ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಕರ್ನಾಟಕದಲ್ಲಿ 155 ಕಾನೂನು ಕಾಲೇಜುಗಳಿವೆ. ಗ್ರಾಮೀಣ ಭಾಗದಲ್ಲಿ ಕಾನೂನಿನ ಅರಿವು ಮೂಡಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಯಾಗಾರದಲ್ಲಿ 13 ಕಾನೂನು ಕಾಲೇಜುಗಳ ವಿಧ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ ಲೋಕನಾಥ್ ಅವರು ಮಾತನಾಡಿ ಮೈಸೂರು ವಿಶ್ವವಿಧ್ಯಾನಿಲಯವನ್ನು ಸರ್ ಎಂ ವಿಶ್ವೇಶ್ವರಯ್ಯ ಅವರು ಸ್ಥಾಪನೆ ಮಾಡಿದರು. ಮೈಸೂರು ವಿಶ್ವ ವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದ ಕುವೆಂಪು ಅವರು ಮಾನಸ ಗಂಗೋತ್ರಿ ಎಂದು ನಾಮಕರಣ ಮಾಡಿದರು. ಕಾನೂನು ಅಧ್ಯಯನ ಒಂದು ವೃತ್ತಿಯಾಗಿದೆ. ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ. ಸಿ ಬಸವರಾಜು ಅವರು ಮಾತನಾಡಿ ಕಾನೂನು ಎಂದ ತಕ್ಷಣ ನಮಗೆ ಭಾರತದ ಸಂವಿಧಾನ ನೆನಪಿಗೆ ಬರುತ್ತದೆ. ಹಲವು ಮಹನೀಯರು ತಮ್ಮ ಕಹಿ ಅನುಭವಗಳು, ಸಮಾಜದಲ್ಲಿ ಇರುವ ಅಸಮಾನತೆಯನ್ನು ಗಮನದಲ್ಲಿ ಇಟ್ಟುಕೊಂಡು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರೆಯುವಂತೆ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಸಮಾಜದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿದಾಗ ಮಾತ್ರ ಸಂವಿಧಾನ ರಚನೆ ಉದ್ದೇಶ ನೆರವೇರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಎಷ್ಟೋ ಜನರಿಗೆ ಕಾನೂನಿನ ಅರಿವು ಇಲ್ಲ. ಅವರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಾನೂನು ಕಾಲೇಜಿನ ವಿಧ್ಯಾರ್ಥಿಗಳು ಕಾರ್ಯಾಗಾರಗಳು, ಕ್ಯಾಂಪ್್ಗಳನ್ನು ಮಾಡುವ ಮೂಲಕ ಪ್ರಾಮಾಣಿಕವಾಗಿ ಕಾನೂನಿನ ಅರಿವು ಮೂಡಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುವ ಮೂಲಕ ಕಾನೂನು ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸೋಣ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ ಕೆ ಅಮರ್ ನಾಥ್, ಹೈಕೋರ್ಟ್ ವಕೀಲರಾದ ಶ್ರೀಧರ್ ಪ್ರಭು ಸೇರಿದಂತೆ ಕಾನೂನು ಕಾಲೇಜುಗಳ ಪ್ರಾಂಶುಪಾಲರು , ಉಪನ್ಯಾಸಕರು ಹಾಗೂ ಕಾನೂನು ಕಾಲೇಜಿನ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
Leave a Comment