ಪಬ್ಲಿಕ್ ಅಲರ್ಟ್
ಮೈಸೂರು: ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಗುರುತಿಸಿಕೊಂಡಿರುವವರು ಯಾವ ಸಮುದಾಯಕ್ಕೆ ಸೇರಿದವರು ಎಂದು ಸಮೀಕ್ಷೆ ನಡೆಸಿದರೆ, ಒಳ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಗೊಂದಲ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಎನ್.ಮಹೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಭೀಮ ಬಲ ಬಳಗ ವತಿಯಿಂದ ನಗರದ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮೀಸಲಾತಿ ಮುನ್ನೋಟ’ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಅವರುಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳು ಹೊಲಯ (ಬಲಗೈ) ಸಮುದಾಯದ ಸ್ಥಿತಿಗತಿಗಳಿಗೆ ಹೋಲಿಕೆಯಾಗುತ್ತದೆ. ಈ ಒಂದು ವಿಚಾರ ಮುಂದಿಟ್ಟು ಕೊಂಡು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರದವರು ಹೊಲಯ ಸಮುದಾಯಕ್ಕೆ ಸೇರಿದವರು ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಆದರೆ, ಇದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಬೇಕಾಗಿದ್ದು, ಈ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದರು.
ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯದವರು ರಾಜ್ಯದಲ್ಲಿ ಒಟ್ಟು ೪.೭೪ ಲಕ್ಷದಷ್ಟು ಇದ್ದಾರೆ. ಈ ಪೈಕಿ ಶೇ.೭೦ ರಷ್ಟು ಜನರು ಬಲಗೈ ಸಮುದಾಯಕ್ಕೆ ಸೇರಿದವರು ಎಂಬುದು ನನ್ನ ನಂಬಿಕೆಯಾಗಿದೆ. ಆದರೆ, ರಾಜ್ಯ ಸರ್ಕಾರ ಈ ಸಮುದಾಯಗಳನ್ನು ಸಮಾನವಾಗಿ ಶೇ.೫೦ ರಂತೆ ಹೊಲಯ ಹಾಗೂ ಮಾದಿಗ ಗುಂಪಿಗೆ ಸೇರಿಸಿರುವುದು ಸರಿಯಲ್ಲ. ಈ ರೀತಿ ಅವೈಜ್ಞಾನಿಕವಾಗಿ ಸೇರಿಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯದವರು ಯಾರು ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು. ಇವರ ಮನೆ ಮನೆ ಸರ್ವೇ ಕಾರ್ಯ ನಡೆಸಿದರೆ ಅವರ ಮೂಲ ಯಾವುದು ಎಂಬುದು ತಿಳಿಯುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೆ ಎಲ್ಲ ಗೊಂದಲ ಪರಿಹಾರವಾಗುತ್ತದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗವು ಒಳಮೀಸಲಾತಿ ಹಂಚಿಕೆ ಸಂದರ್ಭ ಪರಿಶಿಷ್ಟ ಜಾತಿಗಳನ್ನು ಐದು ರೀತಿ ವರ್ಗೀಕರಣ ಮಾಡಿದ್ದರು. ಪೂರಕವಾದ ಮಾನದಂಡದೊಂದಿಗೆ ಈ ವರ್ಗೀಕರಣ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ೩ ವರ್ಗಗಳಿಗೆ ಸೀಮಿತಗೊಳಿಸಿ ಮೀಸಲಾತಿ ಹಂಚಿಕೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.
ಅಲೆಮಾರಿ, ಅರೆ ಅಲೆಮಾರಿ ಹಾಗೂ ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಹೊಂದಿರುವ ಇತರೆ ಸಮುದಾಯಗಳನ್ನು ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳು ಎಂದು ಗುರುತಿಸಿದ ಆಯೋಗವು ಅವರಿಗೆ ಪ್ರತ್ಯೇಕ ವರ್ಗ ನೀಡಿತ್ತು. ಅದೇ ರೀತಿ ಲಂಬಾಣಿ, ಭೋವಿ, ಕೊರಮ ಹಾಗೂ ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಹೊಂದಿರುವ ಇತರೆ ಸಮುದಾಯಗಳನ್ನು ಕಡಿಮೆ ಹಿಂದುಳಿದ ಸಮುದಾಯ ಎಂದು ಪರಿಗಣಿಸಿ ಪ್ರತ್ಯೇಕ ವರ್ಗವಾಗಿ ಗುರುತಿಸಿತು. ಅತ್ಯಂತ ಹಿಂದುಳಿದ ಸಮುದಾಯ ಹಾಗೂ ಕಡಿಮೆ ಹಿಂದುಳಿದ ಸಮುದಾಯವನ್ನು ಒಂದೇ ಗುಂಪಿಗೆ ಸೇರಿಸುವುದು ಎಷ್ಟರ ಮಟ್ಟಿಗೆ ಸರಿ. ಇದರ ವಿರುದ್ಧ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯ ಹೋರಾಟ ನಡೆಸುತ್ತಿದ್ದು, ಈ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು. ಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿ, ವಿಷಯ ತಜ್ಞ ಡಾ.ನವೀನ್ ಮನಿಯ, ನಗರ ಪಾಲಿಕೆ ಮಾಜಿ ಸದಸ್ಯರಾದ ವೇದಾವತಿ, ಅಶ್ವಿನಿ ಶರತ್, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಯುವ ವಿಜ್ಞಾನಿ ನವೀನ್ ಮೌರ್ಯ ಮತ್ತಿತತರು ಉಪಸ್ಥಿತರಿದ್ದರು.
