ಪ್ರಿಯಾಂಖ ಖರ್ಗೆ ಬೆದರಿಕೆ ಖಂಡನೀಯ: ಬನ್ನಳಿ ಸೋಮಣ್ಣ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕುವ ಹೇಳಿಕೆ ನೀಡುತ್ತಿರುವುದು ಖಂಡನೀಯವಾಗಿದೆ ಎಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ವಿಭಾಗೀಯ ಸಂಚಾಲಕ ಬನ್ನಳ್ಳಿ ಸೋಮಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳ ವಲಯಗಳಲ್ಲಿ ಮತ್ತು ಸರ್ಕಾರಿ, ಅನುದಾನಿತ ಶಾಲಾ ಮೈದಾನಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಇದನ್ನು ತಮ್ಮ ಸಂಘಟನೆ ಬೆಂಬಲಿಸುತ್ತದೆ ಎಂದರು.
ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆಎ, ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೋಮುವಾದ, ಜಾತಿವಾದ, ಅಸಮಾನತೆ ಮತ್ತು ಧಾರ್ಮಿಕ ದ್ವೇಷ ಪ್ರತಿಪಾದಿಸುತ್ತ ಚಾತುರ್ವರ್ಣದ ಮೇಲೆ ನಿಂತಿದೆ. ಇದರ ಸಂಸ್ಥಾಪಕರು ಮತ್ತು ಪ್ರತಿಪಾದಕರು ಸಂವಿಧಾನದ ಧರ್ಮ ನಿರಪೇಕ್ಷತೆಯ ಆಲೋಚನೆಗೆ ವಿರುದ್ಧವಾಗಿದ್ದಾರೆ. ಹೀಗಾಗಿ ಶಿಬಿರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಿಂಸೆ, ದ್ವೇಷ ಮತ್ತು ಮತೀಯ ಭಾವನೆ ಪ್ರಚಾರಕ್ಕೆ ವೇದಿಕೆಯನ್ನಾಗಿಸಿಕೊಳ್ಳುತ್ತಿದೆ ಎಂದು ದೂರಿದರು.
ಈ ಕಾರಣದಿಂದಾಗಿ ಪ್ರಿಯಾಂಕ್ ಖರ್ಗೆ ಅವರ ಆಗ್ರಹ ನ್ಯಾಯ ಸಮ್ಮತವಾಗಿದೆ. ಅವರಿಗೆ ಜೀವ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇನ್ನಿತರ ಪದಾಧಿಕಾರಿಗಳಾದ ಮಲ್ಲಹಳ್ಳಿ ನಾರಾಯಣ, ದೊಡ್ಡಸಿದ್ದು ಹಾದನೂರು, ವಾಟಾಳ್ ನಾಗರಾಜ್, ಬೊಮ್ಮೇನಹಳ್ಳಿ ಕುಮಾರ್, ಅನುಷಾ ಹಾಜರಿದ್ದರು.

Share This Article
Leave a Comment