ಪಬ್ಲಿಕ್ ಅಲರ್ಟ್
ಮೈಸೂರು:
ನಗರದ ಬಿಎಸ್ಎಸ್ ವಿದ್ಯೋದಯ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ 56ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ನೇರವೇರಿತು.
ಕಾರ್ಯಕ್ರಮದಲ್ಲಿ ಪದ್ಮಶ್ರೀ’ ಪುರತಸ್ಕೃತ ಡಾ.ವಿಜಯ ಸಂಕೇಶ್ವರ ಮಾತನಾಡಿ,ಬಹುತೇಕ ಭಾಷೆಗಳ ಮೂಲ ಆಗಿರುವ ಸಂಸ್ಕೃತ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಕಾಯಕ ಆಗಬೇಕು. ಸಂಸ್ಕೃತ ಭಾಷೆ ಆಧಾರದ ಮೇಲೆ ಅನೇಕ ಭಾಷೆಗಳು ಹುಟ್ಟಿಕೊಂಡಿವೆ. ಹೀಗಾಗಿ, ಇದುವೇ ಇತರ ಭಾಷೆಗಳ ಮೂಲ. ಕಾಲಾಂತರ ಸಂಸ್ಕೃತ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಆದ್ದರಿಂದ ಈ ಭಾಷೆಗೆ ಹೆಚ್ಚಿನ ಒತ್ತು ನೀಡಬೇಕು. ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಉತ್ತೇಜಿಸಬೇಕಿದೆ ಎಂದು ಸಲಹೆ ನೀಡಿದರು.
ಪ್ರಪಂಚದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮಾ. ಸನಾತಕ ಧರ್ಮ ಸಂಕೇತವಾಗಿರುವ ಈ ಸಂಸ್ಕೃತ ಪತ್ರಿಕೆಯನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಆಧುನಿಕತೆಗೆ ತಕ್ಕಂತೆ ಕೆಲ ಬದಲಾವಣೆ ಮಾಡಿಕೊಳ್ಳಬೇಕು. ಇ-ಪೇಪರ್ ಅಷ್ಟೇ ಸಾಲದು. ಡಿಜಿಟಲೀಕರಣಕ್ಕೆ ಆದ್ಯತೆ ಕೊಡಬೇಕು.ಯೂಟೂಬ್ ಸಾಮಾಜಿಕ ತಾಣವನ್ನೂ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಇದರೊಂದಿಗೆ ಆದಾಯ ಸಂಗ್ರಹಿಸಬೇಕು. ಜತೆಗೆ, ನಾಲ್ಕು ಜನರ ಸಮಿತಿ ರಚಿಸಿ ಭವಿಷ್ಯದ ಕಾರ್ಯಯೋಜನೆ ಹಾಕಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
3 ದಶಕಗಳ ಹಿಂದೆ ಕನ್ನಡದ ಎಲ್ಲ ಪತ್ರಿಕೆಗಳ ಪ್ರಸರಣದ ಸಂಖ್ಯೆ 6 ಲಕ್ಷ ಪ್ರತಿಯಾಗಿತ್ತು. ನಾನು ಪತ್ರಿಕೆ ಶುರು ಮಾಡಿ ‘ಮುಂದಿನ ಮೂರು ವರ್ಷದಲ್ಲಿ 10 ಸ್ಥಳಗಳಲ್ಲಿ ಮುದ್ರಣ ಆವೃತ್ತಿ ಮಾಡಿ 5 ಲಕ್ಷ ಪ್ರತಿ ಮಾರಾಟ ಮಾಡುವೆ’ ಎಂದು ಹೇಳಿದ್ದೆ. ಇದು ಸಾಧ್ಯವೇ ಇಲ್ಲ ಎಂದು ಬಹಳಷ್ಟು ಜನರು ಹೇಳಿದ್ದರು. ಆದರೆ, ನಾನು ಕೇವಲ 2 ವರ್ಷದಲ್ಲೇ ಆ ಗುರಿಯನ್ನು ಮೀರಿ ಸಾಧನೆ ಮಾಡಿ ತೋರಿಸಿದ್ದೆ. ಆ ಹೊತ್ತಿಗೆ ನಮ್ಮ ಪತ್ರಿಕೆಯ ಪ್ರತಿಗಳ ಸಂಖ್ಯೆ 8.50 ಲಕ್ಷ ದಾಟಿತು. ಜತೆಗೆ, ಕನ್ನಡ ಪತ್ರಿಕೆಗಳ ಪ್ರಸರಣದ ಪ್ರತಿಗಳ ಸಂಖ್ಯೆ ಸಹ 26 ಲಕ್ಷಕ್ಕೆ ಏರಿಕೆಯಾಯಿತು ಎಂದು ಸ್ಮರಿಸಿಕೊಂಡರು.
ಕರೊನಾ ನಂತರ ಪತ್ರಿಕೋದ್ಯಮಕ್ಕೆ ಪೆಟ್ಟು ಬಿದ್ದಿದೆ. ಪತ್ರಿಕೆಗಳ ಓದುಗರ ಮತ್ತು ಕೊಳ್ಳುವವರ ಸಂಖ್ಯೆ ಸಹ ತಗ್ಗಿದೆ. ಟಿವಿ ಆಕರ್ಷಣೆಯೂ ಮೊದಲಿನಷ್ಟಿಲ್ಲ. ಮೊಬೈಲ್ ವ್ಯಾಮೋಹ ಅಧಿಕವಾಗಿದೆ. ಹೀಗಾಗಿ, ನಾವುಗಳು ಬದಲಾವಣೆ ಆಗಿ ಸುಧಾರಣೆ ಕಂಡುಕೊಳ್ಳಬೇಕಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಮಾತನಾಡಿ, ಸುಧರ್ಮಾ ಪತ್ರಿಕೆಯಷ್ಟೇ ಅಲ್ಲ, ಅದು ಸಾಂಸ್ಕೃತಿಕ ರಾಯಬಾರಿ. ಇ-ಪೇಪರ್ ಮೂಲಕ ಇದು ಎಲ್ಲೆಡೆ ಸಂಸ್ಕೃತ, ಸಂಸ್ಕೃತಿಯನ್ನು ಪಸರಿಸುತ್ತಿದೆ ಎಂದರು.
ಸುಧರ್ಮಾ ಪತ್ರಿಕೆಯ ವಾರ್ಷಿಕ ವಿಶೇಷ ಸಂಚಿಕೆ, ನಾಗರಾಜ ರಚಿತ ‘ಸುವಚನ ಶತಕಮ್, ಶಿಖರಿಣೀ ಶತಕಮ್, ಡಾ.ಟಿ.ವಿ.ಸತ್ಯನಾರಾಯಣ ರಚಿತ ನವರಾತ್ರ ದುರ್ಗಾವೈಭವ, ‘ದಿ ಸಗ ಆಫ್ ಸುಧರ್ಮಾ’ ಅನುವಾದಿತ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಬೆಂಗಳೂರಿನ ಸಮ್ಯಕ್ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಸತೀಶ್ ಅವರನ್ನು ಸನ್ಮಾನಿಸಲಾಯಿತು.
ಸುಧರ್ಮಾ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಎಚ್.ವಿ.ನಾಗರಾಜರಾವ್, ಸಂಪಾದಕರು, ಮೈವಿವಿ ಪ್ರಾಚ್ಯ ವಿದ್ಯಾಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ ತಲಕಾಡು, ಬಿಎಸ್ಎಸ್ ವಿದ್ಯೋದಯದ ಕಾರ್ಯದರ್ಶಿ ಆರ್.ವಾಸುದೇವ ಭಟ್, ಡಾ.ವಿ.ಡಿ.ಹೆಗಡೆ ಇನ್ನಿತರರಿದ್ದರು.
ಸುಧರ್ಮಾ ಸಂಸ್ಕೃತ ಪತ್ರಿಕೆ 56ನೇ ವಾರ್ಷಿಕೋತ್ಸವ
Leave a Comment
Leave a Comment
