ಸವಿತಾ ಸಮಾಜದ ಭವನಕ್ಕೆ 10 ಲಕ್ಷ ರೂ.ಸಹಾಯ: ಶಾಸಕ ಶ್ರೀವತ್ಸ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ಸವಿತ ಸಮಾಜದಿಂದ ಹಲವಾರು ಬೇಡಿಕೆಗಳನ್ನಟ್ಟಿದ್ದು, ಸಮುದಾಯದ ಏಳಿಗಾಗಿ ಸಮುದಾಯದ ಭವನ ಹಾಗೂ ಸಂಗೀತ ತರಬೇತಿ ಭವನ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ ಎರಡು ಕಂತುಗಳಲ್ಲಿ ತಲಾ ೧೦ ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡುವುದಾಗಿ ಶಾಸಕ ಟಿ.ಎಸ್ ಶ್ರೀವತ್ಸ ಭರವಸೆ ನೀಡಿದರು.

ನಗರದ ಟಿ.ಕೆ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಸವಿತಾ ನಾದಬ್ರಹ್ಮ ಸಂಗೀತಾ ಕಲಾ ಸಂಘ ಹಾಗೂ ಸವಿತ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಏರ್ಪಟಿಸಿದ್ದ ಕರ್ನಾಟಕ ರಾಜ್ಯ ಸವಿತಾ ಸಮಾಜ ನಿಗಮ ಮಂಡಳಿ ಅಧ್ಯಕ್ಷ ಡಾ.ಎಂ.ಎಸ್ ಮುತ್ತುರಾಜ್ ಅವರಿಗೆ ಸನ್ಮಾನ ಹಾಗೂ ಸವಿತ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕನಾಗಿ ಸಮುದಾಯದ ಏಳಿಗೆಗೆ ೨೦ ಲಕ್ಷ ರೂ. ಅನುದಾನನ್ನು ಬಿಡುಗಡೆ ಮಾಡುವುದಲ್ಲದೇ, ಸಮುದಾಯದ ಮುಖಂಡರೊಂದಿಗೆ ಒಗ್ಗೂಡಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದಲೂ ಅನುದಾನ ಬಿಡುಗಡೆ ಮಾಡಿಸಿಕೊಡುವಂತಡ ಶಿಫಾರಸ್ಸು ಮಾಡುವುದಾಗಿ ಆಶ್ವಾಸನೆ ನೀಡಿದರು.

ಸಮುದಾಯಕ್ಕೆ ಯಾವುದೇ ದೊಡ್ಡ ಮಟ್ಟದ ಆಶ್ವಾಸನೆ ನೀಡಿ, ಹೆಚ್ಚಿನ ಹಣ ಹೂಡಿಕೆ ಮಾಡಿ ಹಣದ ಕೊರತೆಯಿಂದ ಕೆಲಸ ಅರ್ಧಕ್ಕೆ ನಿಲ್ಲುವಂತಾಗಬಾರದು. ಅನುದಾನಗಳ ಸಂಗ್ರಹಣೆಗೆ ಅನುಗುಣವಾಗಿ ಸಮುದಾಯದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಎಂದು ಸಲಹೆ ನೀಡಿದರು. ಸಮುದಾಯದೊಂದಿಗೆ ಸದಾಕಾಲ ಜೊತೆಯಾಗಿರುತ್ತೇನೆ ಎಂದರು.

ಇವತ್ತು ವಿದ್ಯೆ, ಸಂಗೀತ ಎಂಬುದು ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದು, ಮೇಲ್ವರ್ಗದ ಜನರಿಗೆ ಸೀಮಿತವಾಗಿದೆ ಎಂಬ ಮಾತಿದೆ. ಆದರೆ ಆ ಮಾತು ಸತ್ಯಕ್ಕೆ ದೂರವಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಸವಿತ ಸಮಾಜ ಹೆಚ್ಚು ಕೊಡುಗೆ ನೀಡಿದೆ. ಇವತ್ತಿಗೂ ಯಾವುದೇ ಶುಭ ಕಾರ್ಯಕ್ರಗಳಿಗೆ ನಾದಸ್ವರವಿಲ್ಲದೇ ಕಾರ್ಯಕ್ರಮಗಳನ್ನು ನಡೆಸು ಸಾಧ್ಯವಿಲ್ಲ ಎಂಬುವಂತಹಾಗಿದೆ. ಆ ನಿಟ್ಟಿನಲ್ಲಿ ವಿದ್ಯೆ ಮತ್ತು ಸಂಗೀತ ಯಾವ ವರ್ಗದ ಹಾಗೂ ವ್ಯಕ್ತಿಯ ಸ್ವತ್ತಲ್ಲ. ಯಾರೋಬ್ಬರು ಅದರಲ್ಲಿ ಶ್ರದ್ದೆಯಿಟ್ಟು ಅಭ್ಯಾಸಿಸಿದರೆ ಪಾಂಡಿತ್ಯ ಪಡೆದುಕೊಳ್ಳಲು ಸಾಧ್ಯವಿದೆ. ಸಮಾಜದಲ್ಲಿ ಅವಕಾಶಗಳು ದೊರೆಯುತಿದ್ದು ಅವುಗಳನ್ನು ಸಮುದಾಯ ಬಳಸಿಕೊಳ್ಳುವ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದು ಸಲಹೆಯನ್ನಿತ್ತರು.  


ಕರ್ನಾಟಕ ರಾಜ್ಯ ಸವಿತಾ ಸಮಾಜ ನಿಗಮ ಮಂಡಳಿ ಅಧ್ಯಕ್ಷ ಡಾ.ಎಂ.ಎಸ್ ಮುತ್ತುರಾಜ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾವು ಕೇವಲ ಹಿಂದುಳಿದವರೂ ಎಂದು ಕುಳಿತರೆ ಸಾಲದು, ಮುಂದುವರೆಯಲು ಹೆಚ್ಚು ಪ್ರಯ್ನಗಳನ್ನು ಮಾಡಬೇಕು. ಆದರೆ ಇವತ್ತಿಗೂ ಸಮುದಾಯದಲ್ಲಿ ಶಿಕ್ಷಿತರ ಕೊರತೆಯಿದೆ. ಶಾಲೆಗಳಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ವೃತ್ತಿ ಬದುಕಿಗೆ ದೂಡುತಿದ್ದೇವೆ. ಅವರಿಗೆ ವೃತ್ತಿಯಲ್ಲದೇ ಅವರ ಕೈಗೆ ಉನ್ನತ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಯಾವುದೇ ಒಂದು ಸಮುದಾಯ ಅಭಿವೃದ್ಧಿಗೆ ಸಂಘಟನೆ, ಶಿಕ್ಷಣ ಹೆಚ್ಚು ಮುಖ್ಯ. ಸಮುದಾಯದಲ್ಲಿ ರಾಜಕೀಯವಾಗಿ ಗುರುತಿಸಿಕೊಳ್ಳುವಂತಾಗಬೇಕು. ಸರ್ಕಾರದ ಮುಂದೆ ಸಮುದಾಯ ಏಳಿಗೆಗೆ ಹಾಗೂ ಭವನ ನಿರ್ಮಾಣಕ್ಕಾಗಿ ೧೦ ಕೋಟಿ ರೂ.ಗಳನ್ನು ನೀಡುವಂತೆ ಮನವಿ ಮಾಡುತ್ತೇನೆ ಎಂದು ಆಶ್ವಾಸನೆಯಿತ್ತರು.

ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಡಾ.ಶುಶ್ರೂತ್‌ಗೌಡ, ಮಹಾನಗರ ಪಾಲಿಕೆ ಮಾಜಿ ಮೇಯರ್ ಶಿವಕುಮಾರ್, ಮಾಜಿ ಸದಸ್ಯ ಸವಿತಾ ಸುರೇಶ್, ನಿವೃತ್ತ ಲೋಕಾಯುಕ್ತ ಅಧಿಕಾರಿ ಆರ್.ಆನಂದ್, ಮೈಸೂರು ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಎ.ಎಂ ನಾಗರಾಜು, ಸವಿತ ಸಮಾಜ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ರಘುನಾಥ್, ಜಿಲ್ಲಾಧ್ಯಕ್ಷ ಎಂ.ಡಿ ರಾಜೇಶ್, ಕರ್ನಾಟಕ ರಾಜ್ಯ ಸವಿತಾ ನಾದಬ್ರಹ್ಮ ಸಂಗೀತಾ ಕಲಾ ಸಂಘ ಅಧ್ಯಕ್ಷ ಎನ್.ತ್ಯಾಗರಾಜು, ಉಪಾಧ್ಯಕ್ಷ ಪಿ.ಶ್ರೀನಿವಾಸ್, ಇಂಜಿನಿಯರ್ ಶಿವರಾಜು ಇತರರು ಹಾಜರಿದ್ದರು.

Share This Article
Leave a Comment