ಪಬ್ಲಿಕ್ ಅಲರ್ಟ್
ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಗ್ರ ಬ್ರಾಹ್ಮಣ ಜಾತಿಗೆ, ಒಂದೇ ಗಣಕ ಚಿಹ್ನೆ ನೀಡಬೇಕು ಎಂದು ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಒತ್ತಾಯಿಸಿದರು.
ಜಾತಿ ಸಮೀಕ್ಷೆಯಲ್ಲಿ ಬ್ರಾಹ್ಮಣರೆಲ್ಲರನ್ನೂ ಒಂದೇ ಜಾತಿಯೆಂದು ಪರಿಗಣಿಸಬೇಕು.ಆದರೆ, ತಮ್ಮ ಪ್ರಕಟಣೆಯಲ್ಲಿ ಬ್ರಾಹ್ಮಣರನ್ನು 45ಕ್ಕೂ ಹೆಚ್ಚು ಉಪಜಾತಿಗಳನ್ನಾಗಿ ವರ್ಗಿಕರಿಸಿ ದತ್ತಾಂಶ ಸಂಗ್ರಹಣೆ ಮಾಡಲು ಉದ್ದೇಶಿಸಲಾಗಿದೆ. ಗಾಯತ್ರಿ ಮಂತ್ರದ ಸೂತ್ರದಡಿ ಬರುವ ಎಲ್ಲ ಬ್ರಾಹ್ಮಣರನ್ನು ಬ್ರಾಹ್ಮಣ ಎಂಬ ಏಕಜಾತಿಯಡಿ ವರ್ಗಿಕರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮುಸ್ಲಿಂ ಬ್ರಾಹ್ಮಣ, ಕ್ರಿಶ್ಚಿಯನ್ ಬ್ರಾಹ್ಮಣ ಮುಂತಾದವರನ್ನು ಸೇರಿಸಬಾರದು. ಸಮೀಕ್ಷೆಯಲ್ಲಿ ಬ್ರಾಹ್ಮಣರಲ್ಲಿಯೇ ಉಪಜಾತಿಗಳನ್ನು ಬೇರೆ ಬೇರೆಯೆಂದು ಪರಿಗಣಿಸಿ, ಅವುಗಳನ್ನು ವಿಭಾಗಿಸದೇ, ಪ್ರತಿಯೊಂದು ಉಪಜಾತಿಗೆ ಪ್ರತ್ಯೇಕ ಗಣಕ ಚಿಹ್ನೆ ನೀಡದೇ, ಸಮಗ್ರ ಬ್ರಾಹ್ಮಣ ಜಾತಿಯನ್ನು ಒಂದೇ ಎಂದು ಪರಿಗಣಿಸಿ, ಎಲ್ಲ ಉಪಜಾತಿಗಳಿಗೆ ಒಂದೇ ಗಣಕ ಚಿಹ್ನೆ ನೀಡಬೇಕು. ಆಯೋಗವು ಸಮೀಕ್ಷೆಯಲ್ಲಿ ದತ್ತಾಂಶ ಸಂಗ್ರಹಣೆ ಮಾಡುವಾಗ, ಬ್ರಾಹ್ಮಣ ಉಪಜಾತಿಗಳ ದತ್ತಾಂಶವನ್ನು ಬೇರೆ ಬೇರೆ ಗಣಕ ಚಿಹ್ನೆಗಳನ್ನು ನೀಡಿ ಸಂಗ್ರಹಿಸಿದರೂ, ಸರಕಾರಕ್ಕೆ ವರದಿ ನೀಡುವಾಗ 45 ಉಪಜಾತಿಗಳ ಜನಸಂಖ್ಯೆಯ ದತ್ತಾಂಶವನ್ನು ಏಕೀಕರಿಸಿ, ಒಂದು ಸಮಗ್ರ ಜಾತಿಗೆ ಸಂಬಂಧಿಸಿದ ಜನಸಂಖ್ಯೆಯ ಸಮಗ್ರ ಮತ್ತು ವಸ್ತುನಿಷ್ಠ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಪರಿಷತ್‌ನ ರಾಜ್ಯಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ, ಜಿಲ್ಲಾಧ್ಯಕ್ಷ ಕಡಕೋಳ ಜಗದೀಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್, ಮಹಿಳಾ ವಿಪ್ರ ಮುಖಂಡರಾದ ವತ್ಸಲ ನಾಗರಾಜ್ ಇದ್ದರು.
