ಪಬ್ಲಿಕ್ ಅಲರ್ಟ್
ಮೈಸೂರು : ರಾಜ್ಯ ಸರ್ಕಾರ ಸೆ.೨೨ ರಿಂದ ನಡೆಸುತ್ತಿರುವ ಸಾಮಾಜಿ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯಕ್ಕೆ ಸೇರಿದವರು ಜಾತಿ ಕಾಲಂನಲ್ಲಿ ಮಾದಿಗ ಮತ್ತು ಉಪಜಾತಿ ಕಾಲಂನಲ್ಲೂ ಮಾದಿಗ ಎಂದು ಬರೆಸಲು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಯಶಸ್ವಿಯಾಗಿ ನಡೆಯುತ್ತಿದೆ. ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಬೇಕು. ಜಾತಿ ಕಾಲಂನಲ್ಲಿ ಮಾದಿಗ ಮತ್ತು ಉಪ ಜಾತಿ ಕಾಲಂನಲ್ಲೂ ಮಾದಿಗ ಎಂದೇ ಬರೆಸಬೇಕು ಎಂದು ಸಲಹೆ ನೀಡಿದರು.
ನಿಮ್ಮ ಮನೆಯ ಎಲ್ಲ ಮಾಹಿತಿಯನ್ನೂ ಸಮರ್ಪಕವಾಗಿ, ಕರಾರುವಕ್ಕಾಗಿ ನೀಡಿ, ಜಾತಿ, ಉಪಜಾತಿ ಕಾಲಂ ಬರೆಸುವಾಗ ಎಚ್ಚರದಿಂದ ಮಾದಿಗ ಎಂದೇ ಬರೆಸಬೇಕು ಎಂದು ಹೇಳಿದರಲ್ಲದೇ, ಇದರಿಂದ ನಮ್ಮ ಜಾತಿಯ ಜನರು ರಾಜ್ಯದಲ್ಲಿ ಎಷ್ಟಿದ್ದಾರೆ, ಅವರ ಉದ್ಯೋಗ, ಶಿಕ್ಷಣ, ಆರ್ಥಿಕ ಸವಲತ್ತುಗಳು ಹೇಗಿವೆ ಎಂದು ಸರ್ಕಾರಕ್ಕೆ ಮಾಹಿತಿ ದೊರೆತು ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಯಾವುದೇ ಮುಚ್ಚು ಮರೆ ಇಲ್ಲದೆ ಮಾಹಿತಿ ನೀಡಿ ಎಂದು ಹೇಳಿದರು.
ಈಗಾಗಲೇ ಒಳಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ಶೇ.೬ ಮೀಸಲಾತಿ ನೀಡಲಾಗಿದೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ, ಏನೂ ಇಲ್ಲದ ಸಂದರ್ಭದಲ್ಲಿ ಶೇ. ೬ ಮೀಸಲಾತಿ ಸಿಕ್ಕಿರುವುದು ಮಾದಿಗ ಸಮುದಾಯದ ಹೋರಾಟದ ಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೋಟೆ ಎಂ.ಶಿವಣ್ಣ, ಜಿಪಂ ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ಮುಖಂಡರುಗಳಾದ ಎಡದೊರೆ ನಿಂಗಯ್ಯ, ಪಾಳ್ಯ ರಾಚಪ್ಪಾಜಿ, ಶಿವಸ್ವಾಮಿ, ದುರ್ಗೇಶ್, ಕೆ.ಆರ್.ರಾಚಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
