ಬ್ರಾಹ್ಮಣ ಎಂದಷ್ಟೇ ಬರೆಸಿ: ಜಾಗೃತಿಗಾಗಿ ಮೈಸೂರಲ್ಲಿ ನಾಳೆ ಸಭೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು,ಸೆ.18-  ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮೀಕ್ಷೆಯಲ್ಲಿ ಬ್ರಾಹ್ಮಣ ಎಂದಷ್ಟೇ ಬರೆಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀರ್ಮಾನಿಸಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಸೆ.19ರಂದು ಎಲ್ಲ ಬ್ರಾಹ್ಮಣ ಸಮುದಾಯದ ಉಪಪಂಗಡಗಳ ಸಂಘ- ಸಂಸ್ಥೆಗಳ ಸಭೆ ಆಯೋಜಿಸಲಾಗಿದೆ.
ಬ್ರಾಹ್ಮಣ ಸಮುದಾಯದ ತ್ರಿಮಸ್ಥರ ಆಚಾರ- ವಿಚಾರಗಳು ಒಂದೇ ಆಗಿವೆ. ಹೀಗಾಗಿ ಯಾವುದೇ ‌ಉಪಪಂಗಡಗಳನ್ನೂ ಸಮೀಕ್ಷೆ ಸಂದರ್ಭದಲ್ಲಿ ಉಲ್ಲೇಖಸಬಾರದು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಧರ್ಮ ಎಂಬಲ್ಲಿ ಹಿಂದೂ, ಜಾತಿ ಕಾಲಂನಲ್ಲಿ (ನಂ.218) ಬ್ರಾಹ್ಮಣ ಎಂದು ಬರೆಸಬೇಕು. ಉಪಜಾತಿ ತಿಳಿಸಬಾರದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ  ಎಚ್.ವಿ.ರಾಜೀವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಉಪಜಾತಿ ಉಲ್ಲೇಖಿಸಬಾರದು ಎಂಬುದು ರಾಜ್ಯಮಟ್ಟದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೈಗೊಂಡಿರುವ ನಿರ್ಣಯವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಮೈಸೂರಿನ ಜೆ.ಎಲ್.ಬಿ.ರಸ್ತೆಯ ಶಾರದಾನಿಕೇತನ ಹಾಸ್ಟೆಲ್‌ನಲ್ಲಿ ಸೆ.19ರಂದು ಸಂಜೆ 5ಕ್ಕೆ ಬ್ರಾಹ್ಮಣ ಸಮುದಾಯದ ಎಲ್ಲ ಉಪಪಂಗಡಗಳ ಸಂಘ-ಸಂಸ್ಥೆಗಳ ಸಭೆ ಏರ್ಪಡಿಸಲಾಗಿದೆ ಎಂದು ಎಚ್.ವಿ.ರಾಜೀವ್ ವಿವರಿಸಿದರು.
ರಾಜ್ಯ ಉಪಾಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ಸಾಮಾಜಿಕ, ರಾಜ್ಯ ಸರ್ಕಾರ ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮೀಕ್ಷೆ ಹೆಸರಿನಲ್ಲಿ ಜಾತಿಗಳ ಜನಸಂಖ್ಯೆ ಮಾಹಿತಿ ಸಂಗ್ರಹಿಸಲು ಹೊರಟಿದೆ. ಕ್ರಿಶ್ಚಿಯನ್ ಬ್ರಾಹ್ಮಣ, ಮುಸ್ಲಿಂ ಬ್ರಾಹ್ಮಣ ಅಂತೆಲ್ಲ ಇಲ್ಲದ ಜಾತಿಗಳನ್ನು ಸೇರಿಸಲಾಗಿದೆ. ಇದು ಸಮುದಾಯವನ್ನು ವಿಭಜಿಸುವ ಪ್ರಯತ್ನವಾಗಿದೆ. ಹೀಗಾಗಿ ಸಮೀಕ್ಷೆಯಲ್ಲಿ ಬ್ರಾಹ್ಮಣ ಎಂದಷ್ಟೇ ಉಲ್ಲೇಖಿಸಿ ಸಮುದಾಯದ ಒಗ್ಗಟ್ಟು ಪ್ರದರ್ಶಿಸಬೇಕಿದೆ‌ ಎಂದು ಮನವಿ ಮಾಡಿದರು.
ಎಕೆಬಿಎಂಎಸ್ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠಕುಮಾರ್, ವಿಶ್ವನಾಥಯ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಎಂ.ಲಕ್ಷ್ಮಿದೇವಿ, ಮುಖಂಡರಾದ ಮೋಹನ್, ರಂಗನಾಥ್ ಗೋಷ್ಠಿಯಲ್ಲಿದ್ದರು.

Share This Article
Leave a Comment