ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಇರಿ: ಸಂತೋಷ್ ಎಸ್. ಲಾಡ್

Pratheek
3 Min Read

ಪಬ್ಲಿಕ್ ಅಲರ್ಟ್

ಮೈಸೂರು:  ನಿಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಕೂಡ ಸಮಾಜದ ಏಳಿಗೆಗೆ ಎಲ್ಲಾ ಸಮುದಾಯವರು ಒಗ್ಗಟ್ಟಿನಿಂದ ಇರಬೇಕು. ಮುಂದಿನ ದಿನಗಳ ರಾಜಕೀಯ ಶಕ್ತಿ ನಿಮಗೆ ವೃದ್ಧಿ ಆಗಲಿಕ್ಕೆ ಒಗ್ಗಟ್ಟು ಕಾರಣವಾಗುತ್ತದೆ.  ಎಲ್ಲಾ ಬುಡಕಟ್ಟು ಸಮಾಜದವರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಬರೀ ಶಾಲೆಗೆ ಕಳುಹಿಸುವುದಲ್ಲ ಉನ್ನತ ಶಿಕ್ಷಣದವರೆಗೆ ಓದಿಸುವುದಕ್ಕೆ ನಿಮ್ಮ ಪ್ರೋತ್ಸಾಹ ಸದಾ ಅವರೊಂದಿಗೆ ಇರಬೇಕು ಎಂದು ಕಾರ್ಮಿಕ ಸಚಿವ ಸಂತೋಷ್.ಎಸ್ ಲಾಡ್ ಹೇಳಿದರು.

ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ಮೈಸೂರು ಮಹಾನಗರ ಪಾಲಿಕೆ, ನುಲಿಯ ಚಂದಯ್ಯ ಜಯಂತ್ಯೋತ್ಸವ ಸಮಿತಿ ಸಹಯೋಗದೊಂದಿಗೆ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ, ನುಲಿಯ ಚಂದಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ  ಕಾರ್ಮಿಕ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಹಲವಾರು ರೀತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕಾರ್ಮಿಕ ಇಲಾಖೆಯಲ್ಲಿ ಮೊದಲು 26 ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿಕೊಳ್ಳುತ್ತಿದ್ದರು. ಆದರೆ ಈಗ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಲ್ಲಾ ಅಸಂಘಟಿತ ಕಾರ್ಯ ಕಾರ್ಮಿಕರಿಗೆ 91 ವರ್ಗ ಗುರುತಿಸಿ ಅವರೆಲ್ಲರನ್ನೂ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ಕೊಡುತ್ತಿದ್ದಾರೆ ಎಂದು ಹೇಳಿದರು.

ರಿಜಿಸ್ಟರ್ ಮಾಡಿಸಿಕೊಂಡು ಸ್ಮಾರ್ಟ್ ಕಾರ್ಡ್ ಪಡೆದುಕೊಂಡರೆ ಕಾರ್ಮಿಕ ಇಲಾಖೆಯಿಂದ ಕೊಡುವ ಹಲವಾರು ಸೇವೆಗಳನ್ನು ನೀವು ಪಡೆದು ಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಶಾಶ್ವತವಾಗಿ ಅಂಗವಿಕಲತೆ, ಮರಣ ಉಂಟಾದರೆ ಪರಿಹಾರ ದೊರೆಯುತ್ತದೆ.   ಆಶಾದೀಪ ಯೋಜನೆಯಲ್ಲಿ  ಪರಿಸರ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಅವರು ಉದ್ಯೋಗ ತೆಗೆದುಕೊಂಡರೆ ಇಎಸ್ಐ ಮತ್ತು ಭವಿಷ್ಯ ನಿಧಿ ಯನ್ನು ಸರ್ಕಾರವೇ ಸುಮಾರು 3 ಸಾವಿರ ವರೆಗೆ ಬರೆಸಿಕೊಡುತ್ತದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವೇತನದಲ್ಲಿ ಮಾಸಿಕ 6 ಸಾವಿರ ಸರ್ಕಾರವೇ ಬರಿಸಿಕೊಡುತ್ತದೆ ಇಷ್ಟೆಲ್ಲಾ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಅಡಿಯಲ್ಲಿ ಬರುವಂತಹ ಕಾರ್ಮಿಕರಿಗೆ ಮಾಡುವಂತದ್ದು. ಸರ್ಕಾರ ಶೋಷಿತ ವರ್ಗದ ಪರ ಯಾವಾಗಲೂ ನಿಲ್ಲುತ್ತದೆ ನಿಮಗೆ ಏನೇ ಬೇಡಿಕೆ ಇದ್ದರೂ ಕೂಡ ಸರ್ಕಾರದ ಚೌಕಟ್ಟಿನಲ್ಲಿ ಅದನ್ನು ತೀರಿಸುವಂತಹ ಕೆಲಸ ಸರ್ಕಾರ ಖಂಡಿತ ಮಾಡುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಶಾಸಕ ಸಿ.ಎನ್.ಮಂಜೇಗೌಡ ಮಾತನಾಡಿ ಕಾಯಕ ನಿಷ್ಠೆ ಹಾಗೂ ದಾಸೋಹದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದವರು ಕಾಯಕಯೋಗಿ, ವಚನಕಾರ ನುಲಿಯ ಚಂದಯ್ಯರು ಅವರ ಕಾಯಕ ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕು ಎಂದು ಹೇಳಿದರು.
ನುಲಿಯ ಚಂದಯ್ಯನವರು ಬಸವಣ್ಣನವರ ಸಮಕಾಲೀನರು ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದರು. ಬಸವಣ್ಣನವರ ಕಾಲದಲ್ಲಿ ಮಂತ್ರಿ ಸೇವೆ ಸಲ್ಲಿಸಿದ್ದರು. ನುಲಿಯ ಚಂದಯ್ಯನವರ ಇಡೀ ವಚನಗಳನ್ನು ಓದಿದಾಗ ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಆಹಾರವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಅವರದಾಗಿತ್ತು. ಕಾಯಕ ದಾಸೋಹಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಮೋನ್ನತಿ ಕಂಡುಕೊಂಡರು. ನುಲಿಯ(ಹಗ್ಗ) ನ್ನು ಹೊಸೆಯುವ ಕಾಯಕ ಮಾಡಿ ಅದನ್ನ ಮಾರಿ ಬಂದ ಆದಾಯದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ನುಲಿಯ ಚಂದಯ್ಯನವರ ಜೀವನ, ಸಮಾಜಸೇವೆ, ಕಾಯಕ ನಿಷ್ಠೆ ನಮಗೆ ಮಾದರಿ. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಂಡ್ಯದ ಸಂಶೋಧಕ ವಿ.ಕಿರಣ್ ಕುಮಾರ್ ಕೊತ್ತಗೆರೆ ಮಾತನಾಡಿ ಹನ್ನೆರಡನೆಯ ಶತಮಾನ ಕನ್ನಡನಾಡಿನ ಚರಿತ್ರೆಯಲ್ಲಿ ಅತ್ಯಂತ ಗಮನಾರ್ಹವಾದ ಕಾಲ. ಶತಶತಮಾನಗಳಿಂದ ಉಳ್ಳವರ ಬಾಹುಗಳಲ್ಲಿ ಬಂಧಿಯಾಗಿ ಶೋಚನಿಯ ಬದುಕು ಸಾಗಿಸುತ್ತಿದ್ದ ಜನಸಮುದಾಯಕ್ಕೆ ಜೀವಜಲವಾಗಿ ಬಂದ ಬಸವಾದಿ ಶರಣರು ಕೆಳವರ್ಗದ ಜನರಲ್ಲಿ ಆತ್ಮಾಭಿಮಾನ ತುಂಬಿದರಲ್ಲದೆ ಅವರು ಸಮಾಜದಲ್ಲಿ ಗೌರವಯುತವಾಗಿ ತಲೆಯೆತ್ತಿ ಬದುಕುವಂತೆ ಮಾಡಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು, ಮೈಸೂರಿನ ಮುಡಿಗುಂಡ ಹಾಗೂ ಪಂಚಗವಿ ಮಠ ವಿರಕ್ತ ಮಠದ ಶ್ರೀ ಶ್ರೀಕಂಠ ಸ್ವಾಮಿಗಳು, ಶಾಸಕ ಅನಿಲ್ ಚಿಕ್ಕಮಾದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಅಧ್ಯಕ್ಷ ಡಿ.ಎನ್.ಮುತ್ತುರಾಜು, ಕಾರ್ಯಾಧ್ಯಕ್ಷ ನಾಗರಾಜು, ಮಹಿಳಾಧ್ಯಕ್ಷೆ ಟಿ.ವೇದಾವತಿ, ಉಪಾಧ್ಯಕ್ಷರಾದ ಪಿ. ನಾಗರಾಜು, ಕೆ.ಹೆಚ್.ಸತ್ಯನಾರಾಯಣ, ಸದಸ್ಯರಾದ ಪುಟ್ಟಸ್ವಾಮಿ, ಶಿವಕುಮಾರ್ , ಮಹದೇವ, ಟಿ.ಪುರುಷೋತ್ತಮ, ಮಹದೇವ, ಸಿ.ರಾಜು, ನಾರಾಯಣಸ್ವಾಮಿ, ರಮೇಶ್, ಪ್ರಧಾನ ಕಾರ್ಯದರ್ಶಿ ಮೋಹನ, ಜಂಟಿ ಕಾರ್ಯದರ್ಶಿ ರವಿಕುಮಾರ್, ಸಹ ಕಾರ್ಯದರ್ಶಿ ಸತೀಶ ಬಿ.ಎನ್, ಸಂಘಟನಾ ಕಾರ್ಯದರ್ಶಿ ಪ್ರಸನ್ನ ಕುಮಾರ ಇತರರು ಉಪಸ್ಥಿತರಿದ್ದರು.

TAGGED:
Share This Article
Leave a Comment