ಪಬ್ಲಿಕ್ ಅಲರ್ಟ್
ಮೈಸೂರು: ವಿದ್ಯಾರ್ಥಿಗಳು ತಾವು ಏನಾಗಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ಗುರಿ ಇಟ್ಟುಕೊಳ್ಳಬೇಕು. ಆ ದಾರಿಯಲ್ಲಿ ನಿರಂತರವಾಗಿ ಮೂರು ವರ್ಷ ಶ್ರಮ ಹಾಕಿದರೆ ಯಶಸ್ಸು ಸಿಗಬಹುದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ರೈತ ದುರ್ಗಪ್ಪ ಅಂಗಡಿ ಸಲಹೆ ನೀಡಿದರು.
ಸಮನ್ವಯ ಟ್ರಸ್ಟ್ ಕಾಲೇಜು, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಭರವಸೆಯ ಹೆಜ್ಜೆ ಬದುಕಿನ ಸಾಧ್ಯತೆಗಳ ಕುರಿತ ಪದವಿ ವಿದ್ಯಾರ್ಥಿಗಳ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಸಾಮಾನ್ಯ ವ್ಯಕ್ತಿ ಇಬ್ಬರಿಗೂ ಇರುವುದು ಒಂದೇ ಮೆದುಳು. ಯಾರು ಮೆದಳನ್ನು ಸರಿಯಾಗಿ ಬಳಸಿಕೊಳ್ಳುತ್ತಾರೋ ಅವರು ಯಶಸ್ಸು ಪಡೆಯುತ್ತಾರೆ. ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧಿಸುವ ಛಲವಿದ್ದರೆ ಪ್ರಾಮಾಣಿಕತೆ, ಶ್ರದ್ಧೆ, ಶ್ರಮಪಟ್ಟರೆ ಗೆಲುವು ಕಷ್ಟವಲ್ಲ ಎಂದು ಪ್ರೇರೇಪಿಸಿದರು.
ಒಳ್ಳೆಯವರಾಗುವ ಸಂಕಲ್ಪ ಮಾಡಿದರೆ ಒಳ್ಳೆಯವರೇ ಆಗುತ್ತೀರಿ. ಒಮ್ಮೆ ಮುಗ್ಗರಿಸಿದರೆ ಜೀವನವಿಡೀ ಮೇಲೆ ಏಳಲು ಸಾಧ್ಯವಿಲ್ಲ. ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಂದೆ ತಾಯಿಗೆ ಗೌರವ ಕೊಡಬೇಕು. ಪೋಷಕರನ್ನು ಕಡೆಗಣಿಸುವುದು ದೊಡ್ಡ ಶಾಪ ಎಂದು ಕಿವಿಮಾತು ಹೇಳಿದರು.
ಸಾಧಕರೊಂದಿಗೆ ಮುಖಾಮುಖಿ: ಹಲವು ಕ್ಷೇತ್ರಗಳ ಸಾಧಕರು ತಮ್ಮ ಯಶೋಗಾಥೆಗಳನ್ನು ಹೇಳುತ್ತಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಸಾಧಕರ ಮುಖಾಮುಖಿ ಮೂಲಕ ವಿದ್ಯಾರ್ಥಿಗಳು ಪ್ರೇರಣೆ ಪಡೆದರು.
ಅಂತಾರಾಷ್ಟಿçÃಯ ಈಜುಪಟು ಎನ್.ಎಂ. ಧ್ಯಾನ್ ಕಶ್ಯಪ್, ಪ್ಯಾರ ಅಥ್ಲೀಟ್ ಆಗಿ ವಿಶ್ವಮಟ್ಟದಲ್ಲಿ ಸಾಧನೆ ಮಾಡುವ ಹಿಂದಿನ ಶ್ರಮವನ್ನು ಹಂಚಿಕೊಂಡರು. ಸೇಲಂನ ಅಂತಾರಾಷ್ಟಿçÃಯ ಯೋಗಪಟು ಸುಂದರಿಸನ್ ಪಿ ಲೀಲಾಜಾಲವಾಗಿ ಪ್ರದರ್ಶಿಸಿದ ಆಸನಗಳನ್ನು ವಿದ್ಯಾರ್ಥಿಗಳು ಬೆರಗುಗಣ್ಣಿನಿಂದ ವೀಕ್ಷಿಸಿದರು.
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕಿ ಡಾ.ಡಿ.ಎಸ್.ಪ್ರತಿಮಾ ಮಾತನಾಡಿ, ಜಾಗತಿಕವಾಗಿ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಬೇಕೆಂದರು.
ಕರ್ನಾಟಕ ಗೃಹ ಮಂಡಲಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಸೋಮಶೇಖರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ರಾಘವೇಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶಿಲ್ಪಾ, ಫಸ್ಟಾಕ್ ಕಂಪನಿಯ ನಿರ್ದೇಶಕ ವಿಕ್ರಂ ಎ.ವಿ ಅತಿಥಿಗಳಾಗಿ ಭಾಗವಹಿಸಿದ್ದರು. ಸಮನ್ವಯ ಟ್ರಸ್ಟ್ ಸಮನ್ವಯ ಕಾಶಿ ಅಧ್ಯಕ್ಷತೆ ವಹಿಸಿದ್ದರು. ಮಧ್ಯಾಹ್ನದ ಗೋಷ್ಠಿಯಲ್ಲಿ ಬೆಂಗಳೂರಿನ ಪ್ರೊಫೈಲ್ ಇನ್ ಸಿಇಒ ವೆಂಕಟೇಶ್ ಎಸ್.ವಿ., ಧಾರವಾಡದ ತರಬೇತುದಾರ ಗುರುರಾಜ ಬುಲುಬುಲೆ ಮಾತನಾಡಿದರು.
